ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಹಲವರ ದೆಹಲಿ ಭೇಟಿ, ಸಹಿ ಸಂಗ್ರಹ ಮುಂತಾದ ಬೆಳವಣಿಗೆಗಳ ಪರಿಣಾಮ ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರು ಜೂ.16ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಮಾತ್ರವಲ್ಲದೆ ಈ ಬಾರಿ ಅರುಣ್ ಸಿಂಗ್ ಶಾಸಕರ ಜೊತೆ ಮಾತನಾಡಲಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಅರುಣ್ ಸಿಂಗ್ ಭೇಟಿಯ ಹಿನ್ನಲೆಯಲ್ಲಿ ಬಿಜೆಪಿಯ ಎರಡು ಗುಂಪುಗಳಲ್ಲಿ ಚಟುವಟಿಕೆಗಳು ಆರಂಭವಾಗಿದೆ. ಬಿಎಸ್ ವೈ ಬೆಂಬಲಿಗರು ‘ಯಡಿಯೂರಪ್ಪನವರೇ ನಮ್ಮ ನಾಯಕರು’ ಎಂದು ಪ್ರತಿಪಾದಿಸುತ್ತಿದ್ದಾರೆ. ಸಭೆಯಲ್ಲೂ ಇದನ್ನೇ ಗಟ್ಟಿಯಾಗಿ ಹೇಳಿ ನಾಯಕತ್ವ ಬದಲಾವಣೆ ಚರ್ಚೆಗೆ ಅಂತ್ಯ ಹಾಡಲು ತಯಾರಾಗಿದ್ದಾರೆ.
ಇದನ್ನೂ ಓದಿ:ಮರು ವಲಸೆ ಅಪಾಯ : ಇಂದಿನಿಂದ ಭಾಗಶಃ ಅನ್‌ಲಾಕ್ ; ಬೆಂಗಳೂರಿನತ್ತ ಹೊರಟಿರುವ ಜನ
ಇಂದು ರಾಣಿಬೆನ್ನೂರು ಶಾಸಕ ಅರುಣ್ ಕುಮಾರ್ ಅವರ ಬಳಿ ಅರುಣ್ ಸಿಂಗ್ ರಿಂದ ಶಾಸಕರ ಜೊತೆ ಸಭೆ ವಿಚಾರದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಂತೆ “ಯಡಿಯೂರಪ್ಪನೇ ನಮ್ಮ ನಾಯಕರು. ನಾವೆಲ್ಲರೂ ಯಡಿಯೂರಪ್ಪ ನಾಯಕತ್ವದಲ್ಲಿ ಗೆದ್ದು ಬಂದಿದ್ದೇವೆ. ನಾವು ಯಡಿಯೂರಪ್ಪರ ಪರವಾಗಿಯೇ ಇರುತ್ತೇವೆ” ಎಂದು ಬಿಟ್ಟರು. ಅರುಣ್ ಸಿಂಗ್ ಶಾಸಕರ ಸಭೆ ಕರೆದಿರುವ ಬಗ್ಗೆ ಗೊತ್ತಿಲ್ಲ. ಆದರೆ ಸಭೆ ಇರಲಿ, ಇಲ್ಲದೇ ಇರಲಿ ಆದರೆ ನಾವಂತೂ ಯಡಿಯೂರಪ್ಪಗೆ ಬೆಂಬಲ ಸೂಚಿಸ್ತೇವೆ ಎಂದರು. ಅಂದರೆ ಅರುಣ್ ಸಿಂಗ್ ರಾಜ್ಯಕ್ಕೆ ಬರುವ ಮುನ್ನವೇ ಯಡಿಯೂರಪ್ಪ ಪರ ಶಾಸಕರು ಬ್ಯಾಟಿಂಗ್ ಆರಂಭಿಸಿದ್ದು, ತಮ್ಮ ನಿಲುವನ್ನು ರಾಜ್ಯ ಉಸ್ತುವಾರಿಗೆ ಮನದಟ್ಟು ಮಾಡುವ ಪ್ರಯತ್ನದಲ್ಲಿದ್ದಾರೆ.
ಆರ್‌ಎಸ್‌ಎಸ್ ನಾಯಕರ ಭೇಟಿ ಮಾಡಿದ ಬೆಲ್ಲದ: ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ತೆರಳಿರುವುದಾಗಿ ಹೇಳಿಕೊಂಡಿರುವ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು, ದೆಹಲಿಯಲ್ಲಿ ಆರ್‌ಎಸ್‌ಎಸ್ ನಾಯಕರನ್ನು ಭೇಟಿ ಮಾಡಿ ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನೂ ಭೇಟಿ ಮಾಡಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆಗೆ ಬೇರೊಬ್ಬ ನಾಯಕರನ್ನು ಶಾಸಕರ ಅಭಿಪ್ರಾಯ ಪಡೆಯಲು ಕಳುಹಿಸುವಂತೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.