ಬೆಂಗಳೂರು: ಪಾದಯಾತ್ರೆ ಭಾಗವಾಗಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾವೇಶಕ್ಕೆ ರಾಜ್ಯದ ಮೂಲೆ, ಮೂಲೆಯಿಂದ ಕಾರ್ಯಕರ್ತರು ಆಗಮಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪಾದಯಾತ್ರೆಯು ಗುರುವಾರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದೊಂದಿಗೆ ಅಂತ್ಯವಾಗಲಿದೆ. ಆದರೆ, ನಮ್ಮ ಹೋರಾಟ ಮುಂದುವರಿಯಲಿದೆ. ಇದು ಮೊದಲ ಭಾಗ ಅಷ್ಟೇ ಎಂದರು.
ಸರ್ವಧರ್ಮ, ಜನಾಂಗ, ಪಕ್ಷಗಳಿಗೆ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಅವಕಾಶ ಮಾಡಿಕೊಡಲಾಗಿದೆ. ಈ ದೊಡ್ಡ ಜನಸಂಖ್ಯೆಯಲ್ಲಿ ಕೇವಲ ಕಾಂಗ್ರೆಸಿಗರು ಮಾತ್ರವಿಲ್ಲ. ಎಲ್ಲ ವರ್ಗಕ್ಕೆ ಸೇರಿದ ಕಾರ್ಮಿಕರು, ರೈತರು, ನಾಗರಿಕರಿದ್ದಾರೆ. ಬಿಜೆಪಿ ಹಾಗೂ ದಳದ ಜತೆ ಗುರುತಿಸಿಕೊಳ್ಳಲಾಗದವರೂ ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದರು.
ಗುರುವಾರದ ಕಾರ್ಯಕ್ರಮದಲ್ಲಿ ಸುಮಾರು 12 ರಾಜ್ಯಗಳ ಯುವ ಕಾಂಗ್ರೆಸ್ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ನಾನು ಅವರಿಗೆ ಆಹ್ವಾನ ನೀಡಿರಲಿಲ್ಲ. ಆದರೆ ರಾಜ್ಯದಲ್ಲಿ ಹೇಗೆ ಹೋರಾಟವನ್ನು ಸಂಘಟನೆ ಮಾಡಲಾಗುತ್ತಿದೆ ಎಂದು ನೋಡಲು ಆಗಮಿಸುತ್ತಿದ್ದಾರೆ. ನಾನು ಕೆಲವು ರಾಷ್ಟ್ರ ನಾಯಕರಿಗೆ ಆಹ್ವಾನ ನೀಡಿದ್ದೇನೆ ಎಂದು ತಿಳಿಸಿದರು.