ಚಿತ್ರದುರ್ಗ: ಭಾರತೀಯಗೆ ಪ್ರಧಾನಿ ನರೇಂದ್ರ ಮೋದಿ ಐದು ವರ್ಷಗಳ ಕಾಲ ಏನು ಕೊಡುಗೆ ನೀಡಿದರು, ಅವರ ಸಾಧನೆ ಏನು ಎನ್ನುವ ವಿಚಾರವನ್ನು ಮನೆ ಮನೆಗೆ ತಲುಪಿಸುವ ಹೊಣೆಗಾರಿಕೆ ಬೂತ್ ಮಟ್ಟದ ಕಾರ್ಯಕರ್ತರ ಮೇಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್ ಕರೆ ನೀಡಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಶಕ್ತಿ ಕೇಂದ್ರದ ಪ್ರಮುಖರ ಸಭೆ ನಡೆಸಿ ಮಾತನಾಡಿದ ಅವರು, ಬೂತ್ ಮಟ್ಟದ ಕಾರ್ಯಕರ್ತರು ಪಕ್ಷದ ಆಧಾರಸ್ತಂಭಗಳು, ಬೇರು ಮಟ್ಟದಲ್ಲಿ ಪಕ್ಷ ಬಲಿಷ್ಠವಾಗಿ ಕಟ್ಟಲು ಬೂತ್ ಮಟ್ಟದ ಕಾರ್ಯಕರ್ತರ ಶ್ರಮ ಸಾಕಷ್ಟಿರುತ್ತದೆ. ಲೋಕಸಭಾ ಚುನಾವಣೆಗಾಗಿ ಸತತ ಪರಿಶ್ರಮ ಹಾಕಬೇಕು. ಬಿಜೆಪಿಗೆ ಮತ ನೀಡುವಂತೆ ಮತದಾರರ ಮನವೊಲಿಸುವ ಕಾರ್ಯ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಪ್ರತಿಯೊಂದು ಬೂತ್‌ನಲ್ಲಿನ ಒಬ್ಬೊಬ್ಬರಿಗೆ ಐದು ಬೂತ್‌ಗಳ ಜವಾಬ್ದಾರಿ ವಹಿಸಲಾಗಿದೆ. ಸ್ಟಿಕ್ಕರ್ ಅಂಟಿಸಿ ಕರಪತ್ರವನ್ನು ಮನೆ ಮನೆಗೆ ವಿತರಿಸಿ ಪ್ರಧಾನಿ ಮೋದಿಯವರ ಸಾಧನೆಯನ್ನು ಜನತೆಗೆ ಮನವರಿಕೆ ಮಾಡಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎರಡನೇ ಬಾರಿ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುವಂತೆ ಮನವಿ ಮಾಡಿದರು.
ಬಹುತೇಕ ಜನರು ಕೇಂದ್ರ ಸರ್ಕಾರದ ಫಲಾನುಭವಿಗಳೇ ಆಗಿರುತ್ತಾರೆ. ನಿಮ್ಮ ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷದ ಪರ ಪ್ರಚಾರ ಪ್ರಾರಂಭಿಸಿ ಅದಕ್ಕಾಗಿ ಸಂಘಟನೆಯಿಂದ ಒಬ್ಬರು ರಾಜಕೀಯವಾಗಿ ಒಬ್ಬರನ್ನು ಜೋಡಿಸಿದ್ದೇವೆ.
ಹತ್ತು ಶಕ್ತಿ ಕೇಂದ್ರಗಳಲ್ಲಿ ಎರೆಡೆರಡು ಸಭೆ ನಡೆಸಿ ವಿಶೇಷ ಗಮನ ಕೊಡಿ ಎಂದು ಶಕ್ತಿ ಕೇಂದ್ರದ ಪ್ರಮುಖರಿಗೆ ತಿಳಿಸಿದರು. ವಿಭಾಗೀಯ ಸಹಪ್ರಭಾರಿ ಜಿ.ಎಂ. ಸುರೇಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಶ್ ಸಿದ್ದಾಪುರ, ಪ್ರಧಾನ ಕಾರ್ಯದರ್ಶಿ ಕಲ್ಲೇಶಯ್ಯ, ವಕ್ತಾರ ನಾಗರಾಜ ಬೇದ್ರೆ, ನಗರಾಧ್ಯಕ್ಷ ತಿಪ್ಪೇಸ್ವಾಮಿ, ಶಿವಣ್ಣಾಚಾರ್, ಖಜಾಂಚಿ ನರೇಂದ್ರ, ಸತೀಶ್ ಇದ್ದರು.
ದೇಶದೆಲ್ಲೆಡೆ ಮೋದಿ ಪರ ವಾತಾವರಣವಿದೆ. ದೇಶಕ್ಕೆ ಬಲಿಷ್ಠ ಪ್ರಧಾನಿ ಬೇಕು ಎಂದು ಬಹುಜನರು ನಿರೀಕ್ಷಿಸಿದಂತೆ ಕೆಲಸ ಮಾಡಿದ್ದಾರೆ. ಎಂತಹ ಸವಾಲು-ಸಮಸ್ಯೆಗಳು ಎದುರಾದರೂ ಸಮರ್ಥವಾಗಿ ನಿಭಾಯಿಸಿದ್ದಾರೆ. ರೈತರ ಖಾತೆಗಳಿಗೆ ನೇರವಾಗಿ ಎರಡು ಸಾವಿರ ರೂ.ಜಮಾ ಆಗುವಂತೆ ಮಾಡಿದ್ದಾರೆ. ಆಯುಷ್ಮಾನ್ ಭಾರತ್ ಸೇರಿದಂತೆ 300ಕ್ಕೂ ಹೆಚ್ಚು ಜನಪರ ಯೋಜನೆಗಳನ್ನು ದೇಶದ ಜನತೆಗೆ ಕೊಡುಗೆಯಾಗಿ ನೀಡಿದ್ದಾರೆ.
ಕೆ.ಎಸ್. ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ.