ಶಿರಸಿ: ಆರು ಅಣೆಕಟ್ಟುಗಳು ವಿದ್ಯುತ್‌ಗಾಗಿ ನಿರ್ಮಾಣ ಮಾಡಲಾಗಿದೆ. ಕೈಗಾ ಅಣು ಸ್ಥಾವರ, ಸೀಬರ್ಡ್ ನೌಕಾ ನೆಲೆ ಇದೆ. ಜಿಲ್ಲೆಯಲ್ಲಿ ಸಹಸ್ರಾರು ಕುಟುಂಬಗಳು ಪುನರ್ವಸತಿದಾರರಾಗಿದ್ದಾರೆ. ಅರಣ್ಯ, ಭೂಮಿ ಎರಡೂ ಜಿಲ್ಲೆಗೆ ನಷ್ಟವಾಗಿದೆ. ಇಂಥ ಜಿಲ್ಲೆಯ ಜನರಿಗೆ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡಲು ಮೀನ ಮೇಷ ಯಾಕೆ ಎಂದು ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ, ಹೋರಾಟಗಾರ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಪ್ರಶ್ನಿಸಿದರು.
ಡಿಸೆಂಬರ್ 4ರಂದು ಬೆಳಗಾವಿಯಲ್ಲಿ ಸಿಎಂಗೆ ಮನವಿ ಸಲ್ಲಿಸುವ ಹಿನ್ನಲೆ ಏಳು ದಿನಗಳ ಕಾಲ ಶಿರಸಿಯ ಮಿನಿ ವಿಧಾನ ಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಇದಕ್ಕಾಗಿ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ನಡೆಸಿ ಮಾತನಾಡಿದರು.
ಮೆಡಿಕಲ್ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಗೆ ಶಿರಸಿಯಿಂದ ಕಾರವಾರಕ್ಕೆ ಪಾದಯಾತ್ರೆ ಮಾಡಿದ್ದರೂ ಸರಕಾರದ ಸ್ಪಂದನೆ ಇಲ್ಲ. ಅಪಘಾತದಲ್ಲಿ ತೀವ್ರ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲೂ ಮೂರು ಗಂಟೆ ಪ್ರಯಾಣ ಮಾಡಬೇಕಾದ ಸ್ಥಿತಿ ಇರುವ ಉತ್ತರ ಕನ್ನಡದಲ್ಲಿ ಅಪಘಾತಗಳ, ಅವಘಡಗಳ ಸಂಖ್ಯೆ ಏನು ಕಡಿಮೆ ಇಲ್ಲ. ನಡುರಾತ್ರಿ ಹೃದಯಾಘಾತ ಆದರೂ ತಕ್ಷಣದ ಚಿಕಿತ್ಸೆಗೆ ಸಮಸ್ಯೆ ಇದೆ. ಇಷ್ಟೊಂದು ಜನರು ಸಾಯುತ್ತಿದ್ದರೂ ಸರಕಾರ ಗಮನ ಸೆಳೆಯುವ ಯತ್ನವನ್ನು ಕೂಡ ನೋಡದೇ ನಿರ್ಲಕ್ಷ್ಯ ಮಾಡಿದೆ. ಈ ಕಾರಣದಿಂದ ಮತ್ತೆ ಹೋರಾಟ ಆರಂಭಿಸುವುದು ಅನಿವಾರ್ಯವಾಗಿದೆ ಎಂದರು.
ಮಂಗಳೂರಿನ ಭಾಗದಲ್ಲಿ 8 ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದೆ. ನಮ್ಮ ಶಿರಸಿ ಕುಮಟಾ ಭಾಗದಲ್ಲಿ ಒಂದೂ ಇಲ್ಲ. ಇದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ. ಇನ್ನಾದರೂ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಹುಮುಖ್ಯ ಬೇಡಿಕೆ ಎಂದು ಪರಿಗಣಿಸಿ ಸರಕಾರ ತಕ್ಷಣ ಮಂಜೂರಿ ಮಾಡಬೇಕು ಎಂದು ಹೇಳಿದರು.
ಕುಮಟಾ ಭಾಗದಲ್ಲಿ ಒಂದು, ಶಿರಸಿ ಭಾಗದಲ್ಲಿ ಇನ್ನೊಂದು ಮಾಡಬೇಕು. ಮೆಡಿಕಲ್ ಕಾಲೇಜು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟ ಸಮಿತಿ ರಚಿಸಿ ಹೋರಾಟ ತೀವ್ರಗೊಳಿಸಲಾಗುತ್ತದೆ. ಸದ್ಯ ಶಾಂತಿಯುತ ಹೋರಾಟ, ಇದಕ್ಕೆ ಜನಪ್ರತಿನಿಧಿಗಳು ಕಿಮ್ಮತ್ತು ಕೊಡದೇ ಅಸಡ್ಡೆ ಮಾಡಿದರೆ, ಮುಂದೆ ಆಮರಣ ಉಪವಾಸ ಮಾಡಲಾಗುತ್ತದೆ ಎಂದರು.
ಹೋರಾಟಗಾರ ಪರಮಾನಂದ ಹೆಗಡೆ ಮಾತನಾಡಿ, ಕುಮಟಾದಲ್ಲಿ ಕಳೆದ ಸರಕಾರವೇ ಸ್ಥಳ ನೋಡಿತ್ತು. ಇಲ್ಲಿ ದೊಡ್ನಳ್ಳಿ ಹಾಗೂ ಉಂಚಳ್ಳಿಯಲ್ಲಿ ಆಸ್ಪತ್ರೆ ಮಾಡಲು ಸರಕಾರಿ ಜಾಗವೇ ಇದೆ ಎಂದರು.
ಈ ವೇಳೆ ಕೇಮು ಮರಾಠಿಕೊಪ್ಪ, ಚಿದಾನಂದ ಹರಿಜನ, ಉಮೇಶ ಹರಿಕಾಂತ್ ಅಹೀಶ ಹೆಗಡೆ ಉಳ್ಳಾಲ, ಎಸ್.ಎನ್.ಹೆಗಡೆ, ಸಂತೋಷ ನಾಯ್ಕ ಇತರರು ಇದ್ದರು.
ನಗರದ ಪ್ರಮುಖ ಬೀದಿಯಲ್ಲಿ ಮಾರಿಕಾಂಬಾ ದೇವಸ್ಥಾನದಿಂದ ಆಸ್ಪತ್ರೆ, ಮೆಡಿಕಲ್ ಕಾಲೇಜು ಬೇಡಿಕೆಗೆ ಪಾದಯಾತ್ರೆ ನಡೆಯಿತು. ಅಟೋ ಚಾಲಕರೂ ಬೆಂಬಲ ಸೂಚಿಸಿ ಮೆರವಣಿಗೆಯಲ್ಲಿ ಸಾಗಿ ಬಂದರು.