Advertisement

ಖಾಸಗಿ ತರಕಾರಿ ಮಾರುಕಟ್ಟೆ ವಿರುದ್ಧ ವರ್ತಕರ ಆಕ್ರೋಶ

05:06 PM Feb 04, 2022 | Team Udayavani |

ಬೆಳಗಾವಿ: ನಗರದಲ್ಲಿ ನಿರ್ಮಾಣಗೊಂಡಿರುವ ಜೈ ಕಿಸಾನ್‌ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ರದ್ದುಗೊಳಿಸುವಂತೆ ಆಗ್ರಹಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವರ್ತಕರು ಕಚೇರಿಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಿದ್ದಾರೆ.

Advertisement

ಜೈ ಕಿಸಾನ್‌ ಎಂಬ ಖಾಸಗಿ ಮಾರುಕಟ್ಟೆಗೆ ಅಧಿಕಾರಿಗಳು ಅನುಮತಿ ನೀಡುವ ಮೂಲಕ ಸರ್ಕಾರಿ ಮಾರುಕಟ್ಟೆಗೆ ಅನ್ಯಾಯ ಮಾಡಿದ್ದಾರೆ. ಕೂಡಲೇ ಈ ಮಾರುಕಟ್ಟೆ ರದ್ದುಗೊಳಿಸಬೇಕು. ಇಲ್ಲದಿದ್ದರೆ ಈ ಮುಂಚೆ ಪ್ರತಿ ಮಳಿಗೆಗೆ ನೀಡಿದ್ದ ಹಣವನ್ನು ವರ್ತಕರಿಗೆ ವಾಪಸ್‌ ನೀಡಬೇಕು ಎಂದು ಒತ್ತಾಯಿಸಿದರು. ವರ್ತಕರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ಖಾಸಗಿ ಮಾರುಕಟ್ಟೆ ಬಂದ್‌ ಮಾಡಬೇಕು ಇಲ್ಲದಿದ್ದರೆ ನಮ್ಮ ಹಣವನ್ನು ಬಡ್ಡಿ ಸಮೇತ ವಾಪಸ್‌ ನೀಡಬೇಕು ಎಂದು ಪಟ್ಟು ಹಿಡಿದರು.

ಖಾಸಗಿ ಮಾರುಕಟ್ಟೆ ನಿರ್ಮಾಣಕ್ಕೆ ಅಧಿಕಾರಿಗಳ ಬೆಂಬಲ ಇದೆ. ವರ್ತಕರು ಅನೇಕ ಸಲ ಕೇಳಿದರೂ ಒಂದು ತಿಂಗಳಾದರೂ ಒಂದೂ ಮೀಟಿಂಗ್‌ ಮಾಡಿಲ್ಲ. ಯಾರ ಪರ ನಿಮ್ಮ ಬೆಂಬಲ ಇದೆ. ನೀವು ಉತ್ತರ ಕೊಟ್ಟು ಹೋಗಬೇಕು. ಎಪಿಎಂಸಿ ಕಾರ್ಯದರ್ಶಿ ಡಾ| ಕೆ. ಕೋಡಿಗೌಡ ಹಾಗೂ ಮಹಾಂತೇಶ ಪಾಟೀಲ ವಿರುದ್ಧ ರೈತ ಮುಖಂಡ ಸಿದಗೌಡ ಮೋದಗಿ ಏಕವಚನದಲ್ಲಿಯೇ ವಾಗ್ಧಾಳಿ ನಡೆಸಿದರು.

ಎಪಿಎಂಸಿ ಆಡಳಿತ ಮಂಡಳಿ ಅಧಿಕಾರಿಗಳನ್ನು ಕೂಡಿ ಹಾಕಲಾಗುವುದು ಎಂದು ಸಿದಗೌಡ ಮೋದಗಿ ಹೇಳುತ್ತಿದ್ದಂತೆ ಸಭೆಯಲ್ಲಿ ಗಲಾಟೆ ತೀವ್ರಗೊಂಡಿತು. ಆಗ ಎಪಿಎಂಸಿ ಕಾರ್ಯದರ್ಶಿ ಡಾ| ಕೆ. ಕೋಡಿಗೌಡ ಅವರು ಮೇಲಧಿಕಾರಿಗಳಿಗೆ ಮೊಬೈಲ್‌ನಿಂದ ಮೆಸೆಜ್‌ ಕಳುಹಿಸಿದರು. ಆಗ ಎಪಿಎಂಸಿ ನಿರ್ದೇಶಕ ಕರಿಗೌಡ ಮೊಬೈಲ್‌ ಕರೆ ಮಾಡಿದಾಗ, ಸ್ಪೀಕರ್‌ ಆನ್‌ ಮಾಡುವಂತೆ ಎಪಿಎಂಸಿ ವರ್ತಕರು ಒತ್ತಾಯಿಸಿದರು.

ಎಪಿಎಂಸಿ ಕಾಯ್ದೆಯಲ್ಲಿ ಖಾಸಗಿ ಮಾರುಕಟ್ಟೆ ಸ್ಥಾಪನೆಗೆ ಅವಕಾಶ ಇದೆ ಹೀಗಾಗಿ ಲೈಸೆನ್ಸ್‌ ನೀಡಲಾಗಿದೆ ಎಂದು ಎಪಿಎಂಸಿ ನಿರ್ದೇಶಕ ಕರಿಗೌಡ ಹೇಳುತ್ತಿದ್ದಂತೆ ಕೆಂಡಾಮಂಡಲರಾದ ಬೆಳಗಾವಿ ಎಪಿಎಂಸಿ ಸದಸ್ಯ ಸುಧೀರ ಗಡ್ಡೆ, ಖಾಸಗಿ ಮಾರುಕಟ್ಟೆ ನಿರ್ಮಾಣಕ್ಕೆ ಲೈಸನ್ಸ್‌ ನೀಡುವಲ್ಲಿ ಕಾನೂನು ಪಾಲನೆ ಮಾಡಿದ್ದೀರಾ. ಇಲ್ಲಿ ವರ್ತಕರು ಲಕ್ಷಾಂತರ ರೂ. ಹಣ ಹೂಡಿಕೆ ಮಾಡಿ ಮಳಿಗೆಗಳನ್ನು ಪಡೆದಿದ್ದಾರೆ. ಈ ಎಲ್ಲ ವರ್ತಕರು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಹೇಳಿ ಕರಿಗೌಡ ಕರೆ ಕಟ್‌ ಮಾಡಿದರು.

Advertisement

ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ ಮಾತನಾಡಿ, ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡದಂತೆ ಎರಡು ಬಾರಿ ಎಪಿಎಂಸಿಯಲ್ಲಿ ಸಭೆ ನಡೆಸಿ ಸರ್ಕಾರಕ್ಕೆ ಠರಾವು ಪಾಸ್‌ ಮಾಡಿ ಕಳುಹಿಸಲಾಗಿದೆ. ಆದರೂ ಜೈ ಕಿಸಾನ್‌ ಮಾರುಕಟ್ಟೆಗೆ ಲೈಸನ್ಸ್‌ ನೀಡಿದ್ದಾರೆ. ಈ ಲೈಸನ್ಸ್‌ ರದ್ದು ಪಡಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಕಾರ್ಯದರ್ಶಿ ಡಾ| ಕೆ. ಕೋಡಿಗೌಡ ಮಾತನಾಡಿ, ಜೈ ಕಿಸಾನ್‌ ತರಕಾರಿ ಮಾರುಕಟ್ಟೆ ಬಂದ್‌ ಮಾಡುವಂತೆ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ವರದಿ ನೀಡಿದರೆ ಅದನ್ನು ಬಂದ್‌ ಮಾಡಬಹುದು. ಖಾಸಗಿ ಮಾರುಕಟ್ಟೆಯಿಂದ ಎಪಿಎಂಸಿಗೆ ತಿಂಗಳಿಗೆ 2.50 ಲಕ್ಷ ರೂ. ಹಾನಿಯಾಗುತ್ತಿದೆ ಎಂದು ಹೇಳಿದರು.

ವರ್ತಕರಾದ ಸತೀಶ ಪಾಟೀಲ, ಸದಾನಂದ ಹುಂಕರಿ ಪಾಟೀಲ, ಬಸನಗೌಡ ಪಾಟೀಲ, ಆಸೀಫ ಕಲಮನಿ, ಅರ್ಜುನ ನಾಯಿಕವಾಡಿ, ರಾಜು ತಹಶೀಲ್ದಾರ್‌,
ಎಸ್‌.ಸಿ. ಪಾಟೀಲ, ಎಸ್‌.ಡಿ. ಲಂಗೋಟಿ, ಅನಿರುದ್ಧ ಕಂಗ್ರಾಳಕರ, ಎಂ.ಎನ್‌. ಹೊಸಮನಿ, ಬಿ.ಎಂ. ಸುಳೇಭಾವಿ, ಪುಂಡಲೀಕ ಶಿಗ್ಗಾಂವಕರ ಸೇರಿದಂತೆ ಇತರರು ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಿದ್ದಾರೆ.

ಲೈಸನ್ಸ್‌ ರದ್ದತಿಗೆ ಠರಾವು ಪಾಸ್‌
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಡಳಿತ ಮಂಡಳಿಯ ಗಮನಕ್ಕೆ ತರದೇ, ಆಡಳಿತ ಮಂಡಳಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜೈ ಕಿಸಾನ್‌ ಖಾಸಗಿ ತರಕಾರಿ ಮಾರುಕಟ್ಟೆಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆ. ಕೂಡಲೇ ಈ ಮಾರುಕಟ್ಟೆಯ ಲೈಸನ್ಸ್‌ ರದ್ದು ಮಾಡಬೇಕು ಎಂದು ಆಡಳಿತ ಮಂಡಳಿ ಸದಸ್ಯರು ಗುರುವಾರ ನಡೆದ ಸಭೆಯಲ್ಲಿ ಠರಾವು ಪಾಸ್‌ ಮಾಡಿದರು.

ಎಪಿಎಂಸಿ ಆಡಳಿತ ಮಂಡಳಿಗೆ ಮಾಹಿತಿ ನೀಡದೇ ಕಾನೂನು ಬಾಹಿರವಾಗಿ ಅನುಮತಿ ನೀಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ಪ್ರಮಾಣದಲ್ಲಿ ಹಾನಿಯಾಗುತ್ತದೆ. ಖಾಸಗಿ ಮಾರುಕಟ್ಟೆಯಿಂದ ವರ್ತಕರ ಮೇಲೆ ಹಿಡಿತ ಇರುವುದಿಲ್ಲ. ರೈತರಿಗೆ ಅನ್ಯಾಯವಾಗುತ್ತಿದ್ದರೆ ಕೇಳುವವರು ಯಾರೂ ಇರುವುದಿಲ್ಲ. ಹೀಗಿರುವಾಗ ಇಂತಹ ಕಾನೂನುಬಾಹಿರ ಮಾರುಕಟ್ಟೆಗೆ ಅನುಮತಿ ನೀಡಿದ್ದಾದರೂ ಏಕೆ. ಕೂಡಲೇ ರದ್ದುಗೊಳಿಸಬೇಕು ಎಂದು ಠರಾವು ಪಾಸ್‌ ಮಾಡಿ ಸರ್ಕಾರಕ್ಕೆ ಕಳುಹಿಸಿದರು.

ಅಧಿಕಾರಿಗಳನ್ನು ಕೂಡಿ ಹಾಕಿದ ವರ್ತಕರು
ಖಾಸಗಿ ಮಾರುಕಟ್ಟೆಗೆ ಅನುಮತಿ ನೀಡಿದ್ದಕ್ಕೆ ಕೆಂಡಾಮಂಡಲರಾದ ವರ್ತಕರು ಗುರುವಾರ ಮಧ್ಯಾಹ್ನದಿಂದ ಅಧಿಕಾಕರಿಗಳನ್ನು ಕಚೇರಿಯಲ್ಲಿಯೇ ಕೂಡಿ ಹಾಕಿದರು. ರಾತ್ರಿಯಾದರೂ ಅಧಿಕಾರಿಗಳನ್ನು ಹೊರಗೆ ಬಿಡುತ್ತಿಲ್ಲ. ಎಪಿಎಂಸಿ ಕಾರ್ಯದರ್ಶಿ ಡಾ| ಕೆ. ಕೋಡಿಗೌಡ ಸೇರಿದಂತೆ ಇತರೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮಗೆ ನ್ಯಾಯ ಸಿಗುವವರೆಗೂ ನಾವು ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next