Advertisement

ಜನಪರ ಮರಳು ನೀತಿ ಜಾರಿಯಾಗಲಿ

06:51 AM Mar 08, 2019 | Team Udayavani |

ಕಂಪ್ಲಿ: ತಾಲೂಕಿನಲ್ಲಿ ಸಮರ್ಪಕವಾಗಿ ಮರಳು ಸಿಗದೆ ಸ್ವತ್ಛ ಭಾರತ್‌ ಯೋಜನೆಯಡಿ ಕೈಗೊಂಡಿರುವ ವೈಯಕ್ತಿಕ ಶೌಚಾಲಯ ನಿರ್ಮಾಣ ಹಾಗೂ ಬಡ ಮದ್ಯಮ ವರ್ಗದವರಿಗೆ ಮನೆ ನಿರ್ಮಿಸಿಕೊಳ್ಳಲು ತೊಂದರೆಯಾಗಿದ್ದು, ಕೂಡಲೇ ಜನಪರ ಮರಳು ನೀತಿ ಜಾರಿಗೊಳಿಸಬೇಕೆಂದು
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಕಾಂ| ತಿಪ್ಪಯ್ಯ ಆಗ್ರಹಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿ ಎದುರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಪದಾಧಿಕಾರಿಗಳು ನಡೆಸಿದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಸಾಕಷ್ಟು ಜನರು ಕೂಲಿ ಕಾರ್ಮಿಕರಾಗಿದ್ದಾರೆ. ನೂತನ ತಾಲೂಕಾಗಿರುವ
ಕಂಪ್ಲಿ ಪಟ್ಟಣವು ವೇಗವಾಗಿ ಬೆಳೆಯುತ್ತಿದೆ. ಆಶ್ರಯಮನೆ, ಶೌಚಾಲಯ ಹಾಗೂ ಚರಂಡಿಗಳ ನಿರ್ಮಾಣಕ್ಕೆ ಕಟ್ಟಡ ಕಾರ್ಮಿಕರ ಅಗತ್ಯವಿದೆ. ಕಾರ್ಮಿಕರು ತಮ್ಮ ಉಪ ಜೀವನಕ್ಕೆ ಬಂಡಿಯಲ್ಲಿ ಮರಳು ಸಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮರಳು ಬಂಡಿಗಳನ್ನು
ತಡೆ ಹಿಡಿಯುವ ಮೂಲಕ ಕಾರ್ಮಿಕರ ಹೊಟ್ಟೆ ಮೇಲೆ ಕಲ್ಲು ಹಾಕುತ್ತಿದ್ದಾರೆ. ಲಾರಿ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ಬಡವರ ಮೇಲೆ ಕ್ರಮ ಕೈಗೊಳ್ಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಬಳಿಕ ತಹಶೀಲ್ದಾರ್‌ ಶ್ರೀಶೈಲ ವೈ.ತಳವಾರ ಅವರಿಗೆ ಮನವಿ ಸಲ್ಲಿಸಲಾಯಿತು. ತಹಶೀಲ್ದಾರ್‌ ಶ್ರೀಶೈಲ ವೈ.ತಳವಾರ ಮಾತನಾಡಿ ಮರಳು ನೀತಿ ರಾಜ್ಯಾದ್ಯಂತ ಏಕರೂಪದಲ್ಲಿದೆ. ಇದನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಟಾಸ್ಕ್ಫೋರ್ಸ್‌ ಸಮಿತಿ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಿದ್ದು, ಕಾರ್ಮಿಕರ ಬೇಡಿಕೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಕಂಪ್ಲಿ ತಾಲ್ಲೂಕು ಪ್ರಧಾನಕಾರ್ಯದರ್ಶಿ ಕಾಂ.ಬಂಡಿ ಬಸವರಾಝ್, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ
ಕಾರ್ಮಿಕರ ಫೆಡರೇಷನ್‌ ಕಂಪ್ಲಿ ವಲಯ ಸಮಿತಿ ಅಧ್ಯಕ್ಷ ಐ ಹೊನ್ನೂರಸಾಬ್‌, ಆರ್‌.ನಾಗರಾಜ,ಖಜಾಂಚಿ ಎನ್‌. ರಾಜಾಭಕ್ಷಿ, ಕಾರ್ಮಿಕರಾದ ನೂರ್‌ಸಾಬ್‌, ಜಮಾಲ್‌, ಮಂಜು, ಸಿದ್ದಪ್ಪ, ಕೋಟೆ ಹುಸೇನ್‌ಸಾ,ಕೋಟೆ ಗೌಸ್‌ ,ಸುಂಕಪ್ಪ,ಯಲ್ಲಪ್ಪ, ಭರತ್‌, ಉಮೇಶ್‌, ರಾಮ, ರೇಣುಕಪ್ಪ
ಸೇರಿದಂತೆ ಅನೇಕ ಕಾರ್ಮಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next