Advertisement

ಕಾಮಗಾರಿ ವಿಳಂಬವಾದರೆ ಕಠಿಣ ಕ್ರಮ: ವೆಂಕಟೇಶ ಕುಮಾರ್‌

01:29 PM Apr 21, 2022 | Team Udayavani |

ಯಾದಗಿರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಕೆಕೆಆರ್‌ ಡಿಬಿ ಕಾರ್ಯದರ್ಶಿ ವೆಂಕಟೇಶ ಕುಮಾರ್‌ ಆರ್‌. ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡಳಿ ವತಿಯಿಂದ ಜಿಲ್ಲೆಯ ವಿವಿಧ ಇಲಾಖೆಗಳಿಗೆ ನೀಡಿದ ಕಾಮಗಾರಿಗಳ ಆರ್ಥಿಕ ಗುರಿ, ಭೌತಿಕ ಗುರಿಯ ವಿವರ ಕುರಿತು ಪರಿಶೀಲಿಸಿ ಅವರು ಮಾತನಾಡಿದರು.

ಜಿಲ್ಲೆಯ ಒಳಿತಿಗಾಗಿ ಮಂಡಳಿ ಕೆಲಸ ಮಾಡುತ್ತಿದೆ. ಅಭಿವೃದ್ಧಿಯ ವೇಗ ಹೆಚ್ಚಿಸಬೇಕು. ಅಧಿಕಾರಿಗಳ ನಿಧಾನಗತಿ ಕೆಲಸ, ಕೆಲಸದಲ್ಲಿ ನಿರ್ಲಕ್ಷ್ಯತನ ಮಂಡಳಿ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

2019-20ನೇ ಸಾಲಿನ ಕ್ರಿಯಾ ಯೋಜನೆಯಡಿ ಮಂಜೂರಾಗಿ ಇದೂವರೆಗೆ ಆಡಳಿತಾತ್ಮಕ ಅನುಮೋದನೆ ಪಡೆಯದ ಕಾಮಗಾರಿಗಳಿಗೆ ನಿಗದಿತ ದಿನಗಳೊಳಗೆ ಜಿಲ್ಲಾಧಿಕಾರಿ ಮತ್ತು ಸಿಇಒ ಅವರಿಂದ ಪ್ರಸ್ತಾವನೆ ಆಡಳಿತಾತ್ಮಕ ಅನುಮೋದನೆ ಪಡೆಯಬೇಕು. ನಿಗದಿತ ಅವಧಿಯಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆಯದ ಕಾಮಗಾರಿಗಳನ್ನು ರದ್ದುಗೊಳಿಸಲಾಗುವುದು ಎಂದು ಅವರು ಅನುಷ್ಠಾನ ಏಜೆನ್ಸಿಗಳಿಗೆ ಸ್ಪಷ್ಟಪಡಿಸಿದರು.

ಪ್ರಸಕ್ತ 2022-23ನೇ ಸಾಲಿನ ಜಿಲ್ಲೆಯಲ್ಲಿ ಕ್ರಿಯಾ ಯೋಜನೆಯನ್ನು ಈಗಾಗಲೇ ಸಲ್ಲಿಸಿದ್ದು, ಮಂಡಳಿಯಿಂದ ಕೂಡಲೇ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.

Advertisement

ಪ್ರಸಕ್ತ ವರ್ಷದ ಕಾಮಗಾರಿಗಳು, ಅನುಷ್ಠಾನ ಅಧಿಕಾರಿಗಳ ಬದಲಾವಣೆ ಮಾಡಬೇಕಿದ್ದರೆ, ಕ್ರಿಯಾ ಯೋಜನೆ ಅನುಮೋದನೆಯಾದ ಹದಿನೈದು ದಿನಗಳ ಒಳಗಾಗಿ ಬದಲಾವಣೆ ಪ್ರಸ್ತಾವನೆಗಳನ್ನು ಮಂಡಳಿಗೆ ಸಲ್ಲಿಸಬೇಕು. ಒಂದು ವೇಳೆ ವಿಳಂಬವಾದರೆ ಅನುಷ್ಠಾನ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಪ್ರಸಕ್ತ ಸಾಲಿಗೆ ಅನುಮೋದನೆಯಾದ ಕಾಮಗಾರಿಗಳನ್ನು ಡಿಸೆಂಬರ್‌ 2022ರ ಅಂತ್ಯದೊಳಗೆ ಪೂರ್ಣಗೊಳಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು.

ಇನ್ನೂ ಪ್ರಾರಂಭಿಸದ ಕಾಮಗಾರಿಗಳನ್ನು ಮೇ 30, 2022ರೊಳಗಾಗಿ ಪ್ರಾರಂಭಿಸಬೇಕು. ಒಂದು ವೇಳೆ ವಿಳಂಬ ಮಾಡಿದರೆ ಅಂತಹ ಕಾಮಗಾರಿಗಳನ್ನು ರದ್ದುಗೊಳಿಸಲಾಗವುದು. ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಕ್ರಿಯಾಯೋಜನೆ ಅನ್ವಯ ಹಂಚಿಕೆ ಮಾಡಲಾಗುತ್ತದೆ. ಹಂಚಿಕೆಯಾದ ಅನುದಾನ 100 ರಷ್ಟು ಬಳಕೆಯಾಗಬೇಕು. ಸರ್ಕಾರ ಒದಗಿಸುವ ಅನುದಾನದಲ್ಲಿ ಸಾಮಾಜಿಕ ಕಲ್ಯಾಣದ ಜೊತೆಗೆ ಮೂಲಸೌಲಭ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಇನ್ಮುಂದೆ ಮಂಡಳಿಯು ಪ್ರತಿ ತಿಂಗಳು ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಲಿದೆ. ಅನುಷ್ಠಾನ ಅಧಿಕಾರಿಗಳು ಪ್ರತಿ ಕಾಮಗಾರಿಗಳ ಪ್ರಗತಿಯ ವಿವರಗಳನ್ನು ಮಂಡಳಿಯ ವೆಬ್‌ ಪೋರ್ಟಲ್‌ನಲ್ಲಿ ಸರಿಯಾಗಿ ಮಾಹಿತಿ ಅಪ್ಲೋಡ್‌ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರೇಶ ನಾಯ್ಕ, ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಗುರುನಾಥ ಗೌಡಪ್ಪನ್ನೋರ್‌ ಹಾಗೂ ಮಂಡಳಿಯ ಅಧಿಕಾರಿಗಳು ಮತ್ತು ಜಿಲ್ಲೆಯ ಅನುಷ್ಠಾನ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next