ಜಾವಗಲ್: ಹೋಬಳಿಗೂಂದು ಗೋಶಾಲೆ ತೆರೆಯಲು ಕ್ರಮಕೈಗೊಳ್ಳುವುದಾಗಿ ಶಾಸಕ ಕೆ.ಎಸ್. ಲಿಂಗೇಶ್ ಭರವಸೆ ನೀಡಿದರು.
ಜಾವಗಲ್ನ ಎಪಿಎಂಸಿ ಆವರಣದಲ್ಲಿ ಮೇವು ಬ್ಯಾಂಕ್ ಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಅತಿವೃಷ್ಟಿ ಹಾಗೂ ದಕ್ಷಿಣಕರ್ನಾಟಕದ ಭಾಗದಲ್ಲಿ ಅನಾವೃಷ್ಟಿ ಇಂದಾಗಿ ರೈತರ, ಜಾನುವಾರುಗಳ ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂದರು.
ಸಂಕಷ್ಠದಲ್ಲಿರುವ ರೈತರ ನೆರವಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೂಡಲೆ ನೆರವಿಗೆ ಬರಬೇಕೆಂದು ಒತ್ತಾಯಪಡಿಸಿದರು. ಮುಂದಿನ ದಿನಗಳಲ್ಲಿ ಜಾವಗಲ್ ಹೋಬಳಿಯ ಇನ್ನೂ 2-3 ಕಡೆ ಮೇವು ಬ್ಯಾಂಕ್ ತೆರೆಯಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ರೈತರು ಕಾರ್ಡ್ ಮಾಡಿಸಿಕೊಂಡು ಅಧಿಕಾರಿಗಳಿಗೆ ಸಹಕಾರ ನೀಡಿ ಮೇವು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಬೇಲೂರು ತಾಪಂ ಅಧ್ಯಕ್ಷ ರಂಗೇಗೌಡ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರಿಗೆ ವಾರದಲ್ಲಿ 1 ದಿನ ಮೇವು ವಿತರಿಸಲಾಗುವುದು. ರೈತರು ಸಹನೆ, ತಾಳ್ಮೆಯಿಂದ ವರ್ತಿಸಿ ಮೇವು ಪಡೆದು ಕೊಳ್ಳುವಂತೆ ತಿಳಿಸಿದರು.
ಮೇವು ವಿತರಣೆಗೆ ಕ್ರಮ: ಜಾವಗಲ್ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಆನಂದ್ ಮಾತನಾಡಿ, ಪಶು ಆಸ್ಪತ್ರೆಯ ವ್ಯಾಪ್ತಿಗೆ 57 ಹಳ್ಳಿಗಳು ಸೇರಿದ್ದು 20, 500 ದನಗಳು 10ಸಾವಿರ ಕುರಿಗಳು, 7ಸಾವಿರ ಮೇಕೆಗಳು 465 ಎಮ್ಮೆಗಳು ಸೇರಿ ಒಟ್ಟು 36 ಸಾವಿರ ಜಾನುವಾರುಗಳಿವೆ. ಪ್ರತಿದಿನ ಪಶುಪಾಲನೆ, ಕಂದಾಯ ಇಲಾಖೆಯ ಅಧಿ ಕಾರಿಗಳು ನೌಕಕರ ನೆರವಿನೊಂದಿಗೆ ಮೇವು ನೀಡುವುದಾಗಿ ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಮಹಾದೇವಪ್ಪ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿವಾರು ಮೇವು ಬ್ಯಾಂಕ್ ತೆರೆಯುವಂತೆ ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಲಾಕ್ಷಮ್ಮ, ತಾಪಂ ಸದಸ್ಯರಾದ ವಿಜಯ್ ಕುಮಾರ್, ಪ್ರಭಾಕರ್, ಗ್ರಾಪಂ ಅಧ್ಯಕ್ಷ ಕುಮಾರ್ ನಾಯ್ಕ, ತಾಪಂ ಮಾಜಿ ಸದಸ್ಯ ಶಿವನಂಜೆಗೌಡ, ಜಿ.ಎಂ. ಚಂದ್ರಶೇಖರ್, ಸುನೀಲ್, ಗ್ರಾಪಂ ಸದಸ್ಯ ಕೊಲ್ಲಾರಿ ಶೆಟ್ಟಿ ಉಪ ತಹಶೀಲ್ದಾರ್ ಅಶೋಕ್, ಆರ್.ಐ. ರವಿ, ಬಾಲಕೃಷ್ಣ, ಮತ್ತಿತರರು ಮಾತನಾಡಿದರು. ಜಾವಗಲ್ ಹೋಬಳಿಯ ಜನ ಪ್ರತಿನಿಧಿಗಳು, ರೈತರು ಭಾಗವಹಿಸಿದ್ದರು.