Advertisement

ನೀರಿನ ಸಮಸ್ಯೆ ನೀಗಿಸಲು ಕ್ರಮ

03:58 PM Jun 29, 2019 | Team Udayavani |

ಕೋಲಾರ: ಜಿಲ್ಲೆಯ 400ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪೂರೈಕೆ ಮಾಡುತ್ತಿದ್ದ ಟ್ಯಾಂಕರ್‌ ನೀರು ಪೂರೈಕೆಯನ್ನು 40ಕ್ಕೆ ಇಳಿಸಲಾಗಿದೆ. ನೀರಿನ ಸಮಸ್ಯೆ ಕಂಡು ಬರದಂತೆ ಎಲ್ಲಾ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಒ ಜಿ.ಜಗದೀಶ್‌ ತಿಳಿಸಿದರು.

Advertisement

ತಾಲೂಕಿನ ವೇಮಗಲ್ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಪ್ಸನ್‌ ಕಂಪನಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದ ನಂತರ ಶಾಲೆಯಲ್ಲಿ ಅವರು ಮಾತನಾಡಿದರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಾಗಿ ಸಹಕರಿಸಿದರೆ ಮಾತ್ರವೇ ಗ್ರಾಮೀಣ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗಲು ಸಾಧ್ಯ ಎಂದ ಅವರು, ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸಲಾಗಿದೆ ಎಂದು ತಿಳಿಸಿದರು.

ಕಿರುಕುಳ ನೀಡಿದ್ರೆ ಯಾರ್‌ ಬರ್ತಾರೆ: ವೇಮಗಲ್ ಗ್ರಾಪಂ ಅಧ್ಯಕ್ಷೆ ಶಶಿಕಲಾ ನಾಗೇಶ್‌ ಅವರು ಗ್ರಾಮ ಪಂಚಾಯಿತಿಗೆ ಪಿಡಿಒ ನೇಮಕಕ್ಕೆ ಸಂಬಂಧಿಸಿದಂತೆ ಮನವಿ ಮಾಡಿದಾಗ, ಇಲ್ಲಿನ ಅವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಿಇಒ ಅವರು, ಎಂತಹ ಪಿಡಿಒ ಬಂದರೂ ನಿಮ್ಮಿಂದ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಅವರಿಗೆ ಕಿರುಕುಳ ನೀಡಿದರೆ ಯಾರು ತಾನೇ ಇಲ್ಲಿಗೆ ಬರಲು ಒಪ್ಪುತ್ತಾರೆ ಎಂದು ಪ್ರಶ್ನಿಸಿದರು.

ಸದ್ಯ ಕುರಗಲ್ ಪಿಡಿಒ ಅವರನ್ನು ನಿಯೋಜನೆ ಮಾಡಿರುವುದಾಗಿ ತಿಳಿಸಿದ ಅವರು, ಪಿಡಿಒ ತಪ್ಪು ಮಾಡಿದರೆ ಹಿರಿಯ ಅಧಿಕಾರಿಗಳಿಗೆ ತಿಳಿಸಿ, ಅದು ಬಿಟ್ಟು ಜನ ಪ್ರತಿನಿಧಿಗಳೇ ಮನಬಂದಂತೆ ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸಿ, ವೇಮಗಲ್ಗೆ ಪಿಡಿಒಗಳಾಗಿ ಬರಲು ಹೆದರಲು ಕಾರಣವೇನು ಎಂಬುದನ್ನು ಅರಿತು ಗ್ರಾಮಕ್ಕೆ ಒಳ್ಳೆಯ ಹೆಸರು ತರುವ ರೀತಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.

Advertisement

ಶಾಲಾವರಣದಲ್ಲಿ ಸಸಿ ಬೆಳೆಸಲು ಸಲಹೆ: ಶಾಲೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿರುವ ಕುರಿತು ಮುಖ್ಯಶಿಕ್ಷಕರನ್ನು ಅಭಿನಂದಿಸಿದ ಸಿಇಒ ಅವರು, ಆವರಣದಲ್ಲಿ ಮತ್ತಷ್ಟು ಸಸಿ ಬೆಳೆಸಲು ಕ್ರಮ ಕೈಗೊಳ್ಳಿ ಎಂದ ಅವರು, ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಸಿ ಎಷ್ಟು ಸಸಿಗಳನ್ನು ನೆಡಬಹುದು ಎಂದು ಅಂದಾಜು ಮಾಡಿ, ಗ್ರಾಮ ಪಂಚಾಯಿತಿ ವತಿಯಿಂದ ಸಾವಿರ ಗಿಡ ನಾಟಿ ಕಾರ್ಯಕ್ರಮದಡಿ ಸಸಿ ನೆಡಿ ಎಂದು ಹೇಳಿದರು.

ಮತ್ತಷ್ಟು ನೆಡಿ: ಈಗಾಗಲೇ 900 ಸಸಿ ನೆಟ್ಟಿರುವ ಕುರಿತು ಗ್ರಾಪಂ ಅಧ್ಯಕ್ಷೆ ಶಶಿಕಲಾ ನಾಗೇಶ್‌ ಮಾತಿಗೆ ಉತ್ತರಿಸಿ, ಈಗ ನೆಟ್ಟಿರುವ ಸಸಿ ಸಾಲದು ಮತ್ತಷ್ಟು ಹಾಕಿ ಎಂದು ಸೂಚಿಸಿದರು. ಇದಕ್ಕೆ ಅಲ್ಲೇ ಇದ್ದ ಎಪ್ಸನ್‌ ಕಂಪನಿಯ ಹಿರಿಯ ವ್ಯವಸ್ಥಾಪಕ ರಾಜೇಂದ್ರಕುಮಾರ್‌ ಸಿಂಗ್‌, ಸಸಿ ನೆಟ್ಟರೆ ಅದರ ರಕ್ಷಣೆಗೆ ಗಾರ್ಡ್‌ಗಳನ್ನು ಕಂಪನಿಯಿಂದ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಪ್ಸನ್‌ ಕಂಪನಿಯ ಸ್ಯಾಮುಯಲ್ ನವನೀತ್‌, ವಿಜಯಗೋವಿಂದ್‌, ಗ್ರಾಪಂ ಅಧ್ಯಕ್ಷೆ ಶಶಿಕಲಾ ನಾಗೇಶ್‌, ಉಪಾಧ್ಯಕ್ಷ ಗಣೇಶ್‌, ಮುಖ್ಯಶಿಕ್ಷಕರ ಸಂಘದ ಜಿ.ಶ್ರೀನಿವಾಸ್‌, ಇಸಿಒ ಆರ್‌.ಶ್ರೀನಿವಾಸನ್‌, ಶಿಕ್ಷಕ ಗೆಳೆಯರ ಬಳಗದ ವೀರಣ್ಣಗೌಡ, ಮುಖ್ಯ ಶಿಕ್ಷಕ ಆರ್‌.ಸದಾನಂದ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next