ಗಜೇಂದ್ರಗಡ: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇತ್ತೀಚೆಗೆ ಹೊಸದಾಗಿ ಕೊರೆಸಿದ್ದ ನಾಲ್ಕು ಕೊಳವೆ ಬಾವಿಗಳ ಪೈಪ್‌ಲೈನ್ ಜೋಡಣೆ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸುವಂತೆ ಸ್ಥಳೀಯ ನೀರು ಸರಬರಾಜು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ ತಿಳಿಸಿದರು.
ಪಟ್ಟಣದ 23ನೇ ವಾರ್ಡ್‌ನ ಉಣಚಗೇರಿ ಬಳಿಯ ಪುರಸಭೆಯ ಪಂಪ್‌ಹೌಸ್‌ಗೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಭೇಟಿ ನೀಡಿ ನೀರಿನ ಸಂಗ್ರಹ ಹಾಗೂ ಪೂರೈಕೆಗೆ ಬೇಕಿರುವ ನೀರಿನ ಪ್ರಮಾಣದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಪಟ್ಟಣದಲ್ಲಿ ಉದ್ಭವಾಗಿರುವ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜಿಲ್ಲಾಡಳಿತ ಈಗಾಗಲೇ 23 ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಪರಿಣಾಮ ಒಂದು ತಿಂಗಳಿಗೆ ಅಂದಾಜು 8 ಲಕ್ಷ ರೂ. ವೆಚ್ಚವಾಗುತ್ತಿದೆ. ಹೀಗಾಗಿ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಟ್ಟಣದಲ್ಲಿ ಕೊರೆಸಲಾಗಿದ್ದ ನಾಲ್ಕು ಕೊಳವೆ ಬಾವಿಗಳಲ್ಲಿ ನೀರು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಪಂಪ್ ಹೌಸ್‌ಗೆ ಪೈಪ್‌ಲೈನ್ ಜೋಡಣೆ ಕಾರ್ಯವು 24 ಗಂಟೆಯಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಪಟ್ಟಣಕ್ಕೆ ಪೂರೈಸಲು ಬೇಕಾಗಿರುವ ನೀರಿನ ಪ್ರಮಾಣವು ನಿರೀಕ್ಷೆಯಂತೆ ಸಂಗ್ರಹವಾದರೆ 6ರಿಂದ 8 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದರು.
ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ಮಾತನಾಡಿ, ಪಟ್ಟಣದ ಜೀರೆ ಲೇಔಟ್‌ನಿಂದ ಜೋಡಣೆಯಾಗುತ್ತಿರುವ ಕೊಳವೆ ಬಾವಿಗಳು ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗುವ ಸಾಧ್ಯತೆಯಿದೆ. ಆದರೆ ಬೇಸಿಗೆ ಇರುವುದರಿಂದ ಮುಂಜಾಗ್ರತ ಕ್ರಮವಾಗಿ ಇನ್ನೂ ನಾಲ್ಕು ಹೊಸದಾಗಿ ಬೋರ್‌ವೆಲ್‌ಗಳನ್ನು ಕೊರೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ.ಎನ್. ಗೋನಾಳ, ಸಹಾಯಕ ಅಭಿಯಂತರ ಎಸ್.ಬಿ. ಮರಿಗೌಡ್ರ, ಕಚೇರಿ ವ್ಯವಸ್ಥಾಪಕ ಸಿ.ವಿ. ಕುಲಕರ್ಣಿ, ಬಸವರಾಜ ಬಳಗಾನೂರ, ಪಿ.ಎನ್. ದೊಡ್ಡಮನಿ, ರಾಜು ನಿಶಾನದಾರ, ನಜೀರ್ ಸಾಂಗ್ಲಿಕರ, ಎಂ.ಎಂ. ತೋಟದ ಇದ್ದರು.
ತಿಂಗಳಿಗೆ 8 ಲಕ್ಷ ರೂ. ವೆಚ್ಚ
ಪಟ್ಟಣದಲ್ಲಿ ಉದ್ಭವಾಗಿರುವ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜಿಲ್ಲಾಡಳಿತ ಈಗಾಗಲೇ 23 ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಪರಿಣಾಮ ಒಂದು ತಿಂಗಳಿಗೆ ಅಂದಾಜು 8 ಲಕ್ಷ ರೂ. ವೆಚ್ಚವಾಗುತ್ತಿದೆ. ಹೀಗಾಗಿ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಟ್ಟಣದಲ್ಲಿ ಕೊರೆಸಲಾಗಿದ್ದ ನಾಲ್ಕು ಕೊಳವೆ ಬಾವಿಗಳಲ್ಲಿ ನೀರು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಪಂಪ್ ಹೌಸ್‌ಗೆ ಪೈಪ್‌ಲೈನ್ ಜೋಡಣೆ ಕಾರ್ಯ ಶೀಘ್ರ ಪೂರ್ಣಗೊಳ್ಳಲಿದೆ. ಬಳಿಕ ಪಟ್ಟಣಕ್ಕೆ ಪೂರೈಸಲು ಬೇಕಾಗಿರುವ ನೀರಿನ ಪ್ರಮಾಣವು ನಿರೀಕ್ಷೆಯಂತೆ ಸಂಗ್ರಹವಾದರೆ 6ರಿಂದ 8 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದು ರುದ್ದೇಶ
ತಿಳಿಸಿದರು.