Advertisement

ಶಾಲೆಗಳ ಅಸ್ತಿತ್ವ ಉಳಿಸಲು ಕ್ರಮ: ಕೋಟ

10:59 PM Jan 04, 2020 | mahesh |

ಪುತ್ತೂರು: ರಾಜ್ಯದಲ್ಲಿ ಸುಮಾರು 48 ಸಾವಿರ ಸರಕಾರಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಸರಕಾರಿ ಶಾಲೆಗಳ ಅಸ್ತಿತ್ವದ ಆತಂಕ ದೂರ ಮಾಡಲು ಸರಕಾರ ವಿವಿಧ ಯೋಜನೆಗಳನ್ನು ಕೈಗೊಂಡಿದೆ. ಆಂಗ್ಲ ಮಾಧ್ಯಮ ಆರಂಭಿಸುವ ಮೂಲಕ ಸರಕಾರಿ ಶಾಲೆಗಳ ಪುನಶ್ಚೇತನಕ್ಕೆ ರಾಜ್ಯ ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಕೊಂಬೆಟ್ಟುವಿನಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ (ಬೋರ್ಡ್‌ ಹೈಸ್ಕೂಲ್‌) ನೂತನ ಕಟ್ಟಡದ ಉದ್ಘಾಟನೆ ಮತ್ತು ಶೌಚಾಲಯ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿ, ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಶತಮಾನಕ್ಕೆ ಸಾಕ್ಷಿಯಾಗಿರುವ ಕೊಂಬೆಟ್ಟು ಶಾಲೆ ಅಚ್ಚುಕಟ್ಟುತನ ಮತ್ತು ಪರಿಪೂರ್ಣತೆಯಿಂದ ರಾಜ್ಯಕ್ಕೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತಿ ಡಾ| ಕೋಟ ಶಿವರಾಮ ಕಾರಂತರು ನಾಲ್ಕು ಗೋಡೆಗಳ ನಡುವಣ ಶಿಕ್ಷಣ ಪಠ್ಯದ ಭಾಗವಾದರೆ ಹೊರಗೆ ಪರಿಸರದಲ್ಲಿ ದೊರೆಯುವ ಶಿಕ್ಷಣ ಜೀವನ ಪಾಠವನ್ನು ಕಲಿಸುತ್ತದೆ ಎಂದು ಹೇಳುತ್ತಿದ್ದರು. ಪ್ರಸಕ್ತ ಸಂದರ್ಭದಲ್ಲಿ ಅಮೂಲ್ಯವಾದ ಮಾನವ ಸಂಪನ್ಮೂಲವನ್ನು ಸೃಷ್ಟಿಸಲು ಶಿವರಾಮ ಕಾರಂತರ ಚಿಂತನೆಯ ಶಿಕ್ಷಣ ಅಗತ್ಯವಿದೆ ಎಂದು ಹೇಳಿದರು.

ಪುತ್ತೂರನ್ನು ಮಾದರಿಯಾಗಿ ರೂಪುಗೊಳಿಸಲು ಶಾಸಕ ಸಂಜೀವ ಮಠಂದೂರು ಶ್ರಮಿಸುತ್ತಿದ್ದು, ರಾಜ್ಯ ಸರಕಾರದಿಂದ ಗರಿಷ್ಠ ಅನುದಾನವನ್ನು ಮಂಜೂರು ಮಾಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ರಾಜ್ಯದ ಸಚಿವಾಲಯದಲ್ಲಿ ಮಠಂದೂರು ಹೆಸರು ಪ್ರಚಲಿತವಾಗಿದೆ ಎಂದರು.

ಗೌರವದ ಆಸ್ತಿ
ಅಧ್ಯಕ್ಷತೆ ವಹಿಸಿದ್ದ ಸಂಜೀವ ಮಠಂದೂರು, ಶತಮಾನದ ಶೈಕ್ಷಣಿಕ ಇತಿಹಾಸವನ್ನು ಹೊಂದಿ ಸಾವಿರಾರು ಮಂದಿಗೆ ಶಿಕ್ಷಣವನ್ನು ನೀಡಿದ ಕೊಂಬೆಟ್ಟು ಶಾಲೆ ಪುತ್ತೂರಿನ ಗೌರವದ ಆಸ್ತಿ. ಸಂಸ್ಕಾರಯುತ ಹಾಗೂ ಮೌಲ್ಯಯುತ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುವ ಕೆಲಸ ಇಲ್ಲಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಮುಖ್ಯ ಅತಿಥಿಯಾಗಿದ್ದ ದ.ಕ.ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, 1916ರಲ್ಲಿ ಬೋರ್ಡ್‌ ಹೈಸ್ಕೂಲ್‌ ಆಗಿ ಆರಂಭವಾದ ಕೊಂಬೆಟ್ಟು ಸರಕಾರಿ ಪ.ಪೂ. ಕಾಲೇಜು ಶೈಕ್ಷಣಿಕ ಕ್ಷೇತ್ರದಲ್ಲಿ ಸುದೀರ್ಘ‌ ಇತಿಹಾಸವನ್ನು ಹೊಂದಿದೆ ಎಂದರು.

ತಾ.ಪಂ.ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್‌ ಶುಭ ಹಾರೈಸಿದರು. ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿಷ್ಣುಮೂರ್ತಿ ಕೆ., ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಉಮೇಶ್‌ ಕರ್ಕೇರ, ಪ್ರಾಂಶುಪಾಲ ಸುರೇಶ್‌ ಎನ್‌.ಕೆ., ಉಪಪ್ರಾಂಶುಪಾಲೆ ಮರ್ಸಿ ಮಮತಾ ಮೋನಿಸ್‌ ಉಪಸ್ಥಿತರಿದ್ದರು. ಕಟ್ಟಡದ ಗುತ್ತಿಗೆದಾರ ಅಬ್ದುಲ್‌ ರಝಾಕ್‌ ಅವರನ್ನು ಸಮ್ಮಾನಿ ಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ.ಪೂ. ಕಾಲೇಜಿನ ಉಪನ್ಯಾಸಕಿ ವಾರಿಜಾ ಕೆ. ಸ್ವಾಗತಿಸಿ, ಶಾಲಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಹಾಗೂ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್‌ ರಾವ್‌ ವಂದಿಸಿದರು. ಅಧ್ಯಾಪಕ ಸುಬ್ರಹ್ಮಣ್ಯ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.

ಉದ್ಘಾಟನೆ, ಶಿಲಾನ್ಯಾಸ
ಸ. ಪ.ಪೂ.ಕಾಲೇಜಿನಲ್ಲಿ ನಬಾರ್ಡ್‌ -ಆರ್‌ಐಡಿಎಫ್‌ -2023 ಯೋಜನೆಯಡಿ ನಿರ್ಮಾಣಗೊಂಡ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದ ಕೋಟ ಶ್ರೀನಿವಾ ಪೂಜಾರಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಶೌಚಾಲಯ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next