ಹುಬ್ಬಳ್ಳಿ: ಪ್ರತಿಷ್ಠಿತ ಎನ್‌ಜಿಇಎಫ್ ಸಂಸ್ಥೆ ಪುನಶ್ಚೇತನಕ್ಕೆ ಸರಕಾರದಿಂದ 30 ಕೋಟಿ ರೂ. ನೆರವು ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಹೇಳಿದರು.
ರಾಯಾಪುರದಲ್ಲಿ ಎನ್‌ಜಿಇಎಫ್ ಕಾರ್ಖಾನೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಂತರ ಮಾತನಾಡಿದ ಅವರು, ಕಳೆದ ನವಲತ್ತು ವರ್ಷಗಳ ಹಿಂದಿನ ಯಂತ್ರಗಳ ಮೇಲೆ ಕಾರ್ಯಗಳು ನಡೆಯುತ್ತಿವೆ. ಇದರಿಂದ ಹೆಚ್ಚಿನ ಗುಣಮಟ್ಟದ ಕಾರ್ಯ ನಿರೀಕ್ಷಿಸಲು ಸಾಧ್ಯವಿಲ್ಲ. ಇಂತಹ ವ್ಯವಸ್ಥೆಯಲ್ಲೇ ಸಂಸ್ಥೆ ಲಾಭದತ್ತ ಮುಖ ಮಾಡಿದೆ. ಸರಕಾರದಿಂದ 30 ಕೋಟಿ ರೂ. ಆರ್ಥಿಕ ನೆರವು ನೀಡಿದರೆ ಉತ್ತಮ ಸ್ಥಿತಿಗೆ ತಲುಪುವ ಭರವಸೆಯಿದೆ ಎಂದರು.
ಬೆಂಗಳೂರಿನಲ್ಲಿದ್ದ ಕೇಂದ್ರ ಕಚೇರಿ ನಷ್ಟದಿಂದ ಮುಚ್ಚಿದರೂ ಇಲ್ಲಿನ ಸಂಸ್ಥೆಗೆ ಬೀಗ ಹಾಕಲು ಬಿಡದೆ ಹಿಂದಿನ ಅವಧಿಯಲ್ಲಿ ಒಂದಿಷ್ಟು ಆರ್ಥಿಕ ನೆರವು ನೀಡಿ ಹೆಸ್ಕಾಂ ವ್ಯಾಪ್ತಿಯ ವಿದ್ಯುತ್ ಪರಿವರ್ತಕಗಳ (ಟಿಸಿ) ದುರಸ್ತಿ ಹಾಗೂ ಹೊಸ ಪರಿವರ್ತಕಗಳ ಖರೀದಿ ಕುರಿತು ಒಪ್ಪಂದ ಮಾಡಿಕೊಂಡ ನಂತರ ಸಂಸ್ಥೆ ಲಾಭದತ್ತ ಮುಖ ಮಾಡಿದೆ. 2017-18ರಲ್ಲಿ 31.20 ಕೋಟಿ ರೂ. ವಹಿವಾಟು ಆಗಿದ್ದು, 38.96 ಲಕ್ಷ ರೂ. ಲಾಭ ಮಾಡಿದೆ. 2018-19ರಲ್ಲಿ ವಹಿವಾಟು ಪ್ರಮಾಣ 132.36 ಕೋಟಿ ರೂ. ತಲುಪಿದ್ದು, 1.78 ಕೋಟಿ ರೂ. ಲಾಭ ಮಾಡಿದೆ. ಎನ್‌ಜಿಇಎಫ್ ಉತ್ಪನ್ನಗಳು ಗುಣಮಟ್ಟದಿಂದ ಕೂಡಿರುವುದರಿಂದ ಇಂದಿಗೂ ಬೇಡಿಕೆಯಿದೆ. ಹೀಗಾಗಿ ಈ ಸಂಸ್ಥೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಹೇಳಿದರು. ಕೈಗಾ, ಇಸ್ರೋ, ಎಚ್‌ಎಂಟಿ ಸೇರಿದಂತೆ ವಿವಿಧ ಸಂಸ್ಥೆಗಳ ಪರಿವರ್ತಕಗಳ ದುರಸ್ತಿಗೆ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಅಗತ್ಯಬಿದ್ದರೆ ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ಎನ್ ಜಿಎಫ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಹಕಾರ ನೀಡುತ್ತದೆ.
ನಷ್ಟದ ಕಾರಣ ಇಲ್ಲಿನ ಸಿಬ್ಬಂದಿಯ ವೇತನ ಪರಿಷ್ಕರಣೆ ಆಗಿರಲಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ಲಾಭವಾಗುತ್ತಿರುವುದಂದ ವೇತನ ಪರಿಷ್ಕರಣೆಗೆ ಸರಕಾರಕ್ಕೆ ಪ್ರಸ್ತಾವನೆ ಬಂದಿದ್ದು, ಆದಷ್ಟು ಬೇಗ ಇದಕ್ಕೆ ಹಣಕಾಸು ಇಲಾಖೆಯಿಂದ ಒಪ್ಪಿಗೆ ಕೊಡಿಸಲಾಗುವುದು. ಸರಕಾರದಿಂದ ಪುನಶ್ಚೇತನಕ್ಕೆ ನೆರವು ದೊರಕಿದ ನಂತರ ಸಿಬ್ಬಂದಿ ನೇಮಕಾತಿಗೆ ಪ್ರಯತ್ನಿಸಲಾಗುವುದು ಎಂದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕಿರಣ ಅಡವಿ ಮಾತನಾಡಿ, ಬೆಂಗಳೂರಿನ ಸಂಸ್ಥೆ ಮುಚ್ಚಿದ ನಂತರ ಅಲ್ಲಿಂದ ತಂದಿರುವ ಯಂತ್ರಗಳು ಹಾಗೂ ನಾಲ್ಕು ದಶಕಗಳ ಹಿಂದಿನ ಯಂತ್ರಗಳ ಮೂಲಕ ಸಂಸ್ಥೆ ನಡೆಯುತ್ತಿದೆ. ಈ ವ್ಯವಸ್ಥೆಯಲ್ಲೇ ಕಳೆದ ಎರಡು ವರ್ಷಗಳಿಂದ ಸಂಸ್ಥೆ ಲಾಭದತ್ತ ಮುಖ ಮಾಡಿದೆ. ಸಂಸ್ಥೆ ಪುನಶ್ಚೇತನಕ್ಕೆ ಸರಕಾರ ಹಣಕಾಸಿನ ನೆರವು ನೀಡಿದರೆ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ. ಕೆಲವೊಂದು ಸಂಸ್ಥೆಗಳ ವಿದ್ಯುತ್ ಪರಿವರ್ತಕಗಳ ದುರಸ್ತಿಗೆ ಸಂಬಂಧಿಸಿದಂತೆ ಮಾತುಕತೆ ನಡೆದಿದ್ದು, ಈ ಯೋಜನೆ ಸಾಕಾರಗೊಂಡರೆ ಸಂಸ್ಥೆಯ ಭವಿಷ್ಯ ಉಜ್ವಲವಾಗಲಿದೆ ಎಂದರು. ಉಪ ವ್ಯವಸ್ಥಾಪಕ ನಿರ್ದೇಶಕ (ಎಚ್‌ಆರ್) ಶಿವಕುಮಾರ, ವ್ಯವಸ್ಥಾಪಕ ಎಚ್.ಎಂ. ಬ್ಯಾಹಟ್ಟಿ, ಎನ್ ಜಿಇಎಫ್ ಮಾಜಿ ಅಧ್ಯಕ್ಷ ರಂಗಾ ಬದ್ದಿ ಇನ್ನಿತರರಿದ್ದರು.