ಬಂಗಾರಪೇಟೆ: ದೇಶದಲ್ಲೇ ಹೆಚ್ಚು ಚಿನ್ನ ಉತ್ಪಾದನೆ ಮಾಡುತ್ತಿದ್ದ ಕೋಲಾರದ ಚಿನ್ನದ ಗಣಿಯನ್ನು 20 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದರಿಂದ ಕೇಂದ್ರ ಸರ್ಕಾರವು ಚಿನ್ನದ ಗಣಿಯನ್ನು ಪುನರ್ ಪ್ರಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ತಾಲೂಕಿನ ಡಿ.ಕೆ.ಹಳ್ಳಿ ಗ್ರಾಪಂ ವ್ಯಾಪ್ತಿಯ ಆಲದಮರ ಬಳಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸೂಚನೆ ಮೇರೆಗೆ ಚಿನ್ನದಗಣಿ ಪ್ರಾರಂಭಕ್ಕೂ ಮುನ್ನಾ ಇಲ್ಲಿನ ಮಣ್ಣು ಪರೀಕ್ಷೆ ಮಾಡುವುದಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದಲೂ ಸಹ ಚಿನ್ನದ ಗಣಿ ಮುಚ್ಚಿರುವುದರಿಂದ ಸಾವಿರಾರು ಕಾರ್ಮಿಕರು ಬೀದಿಪಾಲಾಗಿರುವುದರಿಂದ ಎಚ್ಚೆತ್ತುಕೊಂಡು ಕೇಂದ್ರ ಸರ್ಕಾರಕ್ಕೆ ಒತ್ತಡ ತಂದಿರುವುದರಿಂದ ಮುಂದಿನಮೂರು ತಿಂಗಳಲ್ಲಿಪ್ರಾರಂಭಮಾಡಲು ವರದಿ ನೀಡಲಿದೆ ಎಂದರು.
ಕೇಂದ್ರ ಸರ್ಕಾರದ ಮೇಲೆ ಒತ್ತಡ: ಈ ಹಿಂದೆ ಬ್ರಿಟೀಷರ ಕಾಲದಿಂದಲೂ ಅಗತ್ಯಕ್ಕೂ ಮೀರಿ ಚಿನ್ನ ಸಿಗುತ್ತಿತ್ತು. 1999ರಲ್ಲಿ ಚಿನ್ನ ಸಿಗುವುದಿಲ್ಲ ಎಂಬ ವರದಿ ಆಧಾರದ ಮೇಲೆ ಚಿನ್ನದ ಗಣಿ ಮುಚ್ಚಲಾಗಿತ್ತು. ಅನಂತರ ಸಾಕಷ್ಟು ಬಾರಿ ಕಾರ್ಮಿಕರ ಸಂಘಟನೆಗಳು ಹೋರಾಟ ನಡೆಸಿದ್ದರೂ ಕಾರ್ಯಗತವಾಗಿಲ್ಲ. ಕಳೆದ ಒಂದು ವರ್ಷದಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದಿರುವ ಫಲವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಹಕಾರದಿಂದ ಚಿನ್ನದ ಗಣಿ ಪ್ರಾರಂಭಕ್ಕೆ ಚಾಲನೆ ನೀಡಲು ಬಿಜೆಪಿ ಸರ್ಕಾರವು ಬದ್ಧವಾಗಿದೆ ಎಂದರು.
ಚಿನ್ನದ ಗಣಿಯಲ್ಲಿ ಹಲವಾರು ವರ್ಷಗಳಿಂದ ಸಂಗ್ರಹವಾಗಿರುವ ಸೈನೆಡ್ ಮಣ್ಣನ್ನು ಪರೀಕ್ಷೆ ಮಾಡಿ ಉಳಿದಿರುವ ಚಿನ್ನವನ್ನು ಸಂಗ್ರಹಿಸಲು ಹೈದರಾಬಾದ್‌ಗೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈ ಪರೀಕ್ಷೆಯ ವರದಿ ಬಂದ ನಂತರ ಕೇಂದ್ರ ಸರ್ಕಾರವು ಕ್ರಮಕೈಗೊಳ್ಳಲಿದೆ. ಪ್ರಸ್ತುತ ಚಾಲನೆ ನೀಡಿರುವ ಚಿನ್ನದ ಗಣಿ ಪ್ರಾರಂಭಕ್ಕೆ ಮೂರು ತಿಂಗಳ ನಂತರ ಬರುವ ವರದಿ ಆಧಾರದ ಮೇಲೆ ಗಣಿ ಪ್ರಾರಂಭ ಮಾಡಲಾಗುವುದು ಎಂದರು. ಕೆಜಿಎಫ್ ತಾಲೂಕು ಬಿಜೆಪಿ ಅಧ್ಯಕ್ಷ ಕಮಲನಾಥ್, ಜಿಪಂ ಸದಸ್ಯ ಜಯಪ್ರಕಾಶ್, ಕೆಜಿಎಫ್ ನಗರಸಭೆ ಪೌರಾಯುಕ್ತ ರಾಜು ಮುಂತಾದವರು ಹಾಜರಿದ್ದರು.