Advertisement

ಪೊಲೀಸ್‌ ತರಬೇತಿ ಬಲವರ್ಧನೆಗೆ ಕ್ರಮ

03:20 PM Mar 09, 2018 | |

ಕಲಬುರಗಿ: ರಾಜ್ಯದಲ್ಲಿ ಎರಡು ಕೆಎಸ್‌ಆರ್‌ಪಿ ಹಾಗೂ 12 ಸಿವಿಲ್‌ ಪೊಲೀಸರ ಹಾಗೂ ಪೊಲೀಸ್‌ ಅಧಿಕಾರಿಗಳ ತರಬೇತಿ ಕೇಂದ್ರಗಳಿದ್ದು, ಇವುಗಳ ಮೂಲ ಸೌಕರ್ಯ ಕಲ್ಪಿಸಲು ಬಜೆಟ್‌ನಲ್ಲಿ 50 ಕೋಟಿ ರೂ. ತೆಗೆದಿರಿಸಲಾಗಿದ್ದರಿಂದ ತರಬೇತಿ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Advertisement

ಗುರುವಾರ ಇಲ್ಲಿನ ನಾಗನಹಳ್ಳಿ ಪೊಲೀಸ್‌ ತರಬೇತಿ ಮಹಾವಿದ್ಯಾಲಯದಲ್ಲಿ 3ನೇ ತಂಡದ 45 ವಿಶೇಷ ಆರ್‌.ಎಸ್‌.ಐ/ 45 ಆರ್‌.ಎಸ್‌.ಐ ಮತ್ತು 9ನೇ ತಂಡದ 377 ಸಿಪಿಸಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

ರಾಜ್ಯದಲ್ಲಿರುವ ತರಬೇತಿ ಕೇಂದ್ರಗಳಲ್ಲಿಂದು 3000-3500 ಪೊಲೀಸರಿಗೆ ತರಬೇತಿ ನೀಡುವುದನ್ನು ಈಗ 5 ಸಾವಿರ ಪೊಲೀಸರಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಕಳೆದ ಐದು ವರ್ಷದಲ್ಲಿ 30 ಸಾವಿರ ಪೇದೆಗಳನ್ನು ಒಟ್ಟಾರೆ 4000 ಪಿಎಸ್‌ಐ ಭರ್ತಿ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ 11 ಸಾವಿರ ಪೊಲೀಸ್‌ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದ್ದು, 2019ರೊಳಗೆ ಎಲ್ಲವೂ ಪೂರ್ಣಗೊಳ್ಳಲಿವೆ ಎಂದು ಸಚಿವರು ತಿಳಿಸಿದರು.

ಪ್ರತಿಜ್ಞಾ ವಿಧಿಯಂತೆ ನಡೆದುಕೊಳ್ಳಿ: ಕಠಿಣ ತರಬೇತಿ ಪಡೆದು ನಾಗರಿಕ ಪೊಲೀಸ್‌ ಅಧಿಕಾರಿಗಳಾಗಿ ಹಾಗೂ ಪೇದೆಗಳಾಗಿ ಹೊರಹೊಮ್ಮಿದ ನಿರ್ಗಮಿತ ಪ್ರಶಿಕ್ಷಣಾರ್ಥಿಗಳೆಲ್ಲ ಸತ್ಯ, ಪ್ರಮಾಣಿಕತೆಯಿಂದ, ಸ್ವಜನ ಪಕ್ಷಪಾತ ರಹಿತ ಸೇವೆ ಕುರಿತಾಗಿ ಪಡೆಯಲಾದ ಪ್ರತಿಜ್ಞಾವಿಧಿಯಂತೆ ಸೇವೆ ಸಲ್ಲಿಸಬೇಕೆಂದು ಗೃಹ ಸಚಿವರು ನೀಡಿದರು.

ಈಗಿನ ಸೇವಾ ಉತ್ಸಾವ ಸೇವಾ ನಿವೃತ್ತಿವರೆಗೂ ಇರಬೇಕು. ಯಾವುದೇ ಸಂದರ್ಭದಲ್ಲಿ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಿ. ಈ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರವೇ ಬಹುಮುಖ್ಯವಾಗಿದೆ. ಉತ್ತಮ ಸೇವೆ ಸಲ್ಲಿಸಿದಲ್ಲಿ ಮಾತ್ರ ಸರ್ಕಾರದಿಂದ ಹಾಗೂ ಸಮಾಜದಿಂದ ಮನ್ನಣೆ ಹಾಗೂ ಪ್ರಶಸ್ತಿಗಳು ದೊರಕುತ್ತವೆ. ಆದ್ದರಿಂದ ದಿನಾಲು ಪ್ರತಿಜ್ಞಾವಿಧಿ ನೆನಪಿನಲ್ಲಿಟ್ಟುಕೊಂಡು ಸೇವೆಗೈಯ ಬೇಕೆಂದು ಸಚಿವರು ಹಿತ ನುಡಿಗಳನ್ನಾಡಿದರು.

Advertisement

ನಾಗನಹಳ್ಳಿ ಪೊಲೀಸ್‌ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸವಿತಾ ಹೂಗಾರ ಮಾತನಾಡಿ, 2003ರಲ್ಲಿ ನಾಗನಹಳ್ಳಿ ಪೊಲೀಸ್‌ ತರಬೇತಿ ಮಹಾವಿದ್ಯಾಲಯ ಪ್ರಾರಂಭವಾಗಿ ಇಲ್ಲಿಯವರೆಗೆ 1164 ಪಿಎಸ್‌ಐ ಹಾಗೂ 4701 ಪೊಲೀಸ್‌ ಪೇದೆಗಳಿಗೆ ತರಬೇತಿ ನೀಡಲಾಗಿದೆ. ತರಬೇತಿ ಎಲ್ಲ ಹಂತದಲ್ಲಿ ಎಲ್ಲ ರೀತಿಯ ಸಮರೋಭ್ಯಾಸ ನಡೆಸಲಾಗಿದೆಯಲ್ಲದೇ ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ಉಪನ್ಯಾಸ ಕೊಡಿಸಲಾಗಿದೆ ಎಂದು ವಿವರಣೆ ನೀಡಿದರು. 

ತರಬೇತಿ ವಿಭಾಗದ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪದಮ್‌ ಕುಮಾರ್‌ ಗರ್ಗ, ಕೆಎಸ್‌ ಆರ್‌ಪಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಭಾಸ್ಕರ್‌ರಾವ್‌, ಈಶಾನ್ಯ ವಲಯ ಐಜಿಪಿ ಮುರುಗನ್‌, ಕಲಬುರಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಶಿಕುಮಾರ ಸೇರಿದಂತೆ ಅನೇಕ ಹಿರಿಯ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು. ಸೇಡಂ ಸಿಪಿಐ ಪಿ.ಎಂ. ಸಾಲಿಮಠ ಹಾಗೂ ಲಕ್ಷ್ಮೀ ನಿರೂಪಿಸಿದರು. ಪೊಲೀಸ್‌ ತರಬೇತಿ ಮಹಾವಿದ್ಯಾಲಯದ ಡಿವೈಎಸ್ಪಿ ಎಂ.ಎಂ. ಯಾದವಾಡ ವಂದಿಸಿದರು. 

ಬಂಧು-ಬಳಗದವರು ಭಾಗಿ ನಾಗನಹಳ್ಳಿ ಪೊಲೀಸ್‌ ತರಬೇತಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ 84 ಪಿಎಸ್‌ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳ ಬಂಧು-ಬಳಗದವರು
ಅದರಲ್ಲಿ ಅವರ ತಂದೆ-ತಾಯಿ, ಸಹೋದರರು ಬಂಧು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿ ಕಂಡು ಬಂತು. ವರ್ಷವೀಡಿ ಮನೆಯಿಂದ ದೂರವಿದ್ದಿರುವುದರಿಂದ ಹಾಗೂ ಸಮಾರಂಭದಲ್ಲಿ ಗೃಹ ಸಚಿವರ ಸಮ್ಮುಖದಲ್ಲಿ ಪ್ರತಿಜ್ಞಾವಿಧಿಯೊಂದಿಗೆ ಪೊಲೀಸ್‌ ಅಧಿಕಾರಿಯಾಗಿ ಹೊರಹೊಮ್ಮಿರುವುದನ್ನು ಕಂಡು ಕೆಲವರು ಪುಳಕಿತಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next