ಮಾಲೂರು: ಮಾರಕ ಕೋವಿಡ್ 19 ಸೋಂಕಿನಿಂದ ರಾಷ್ಟ್ರ ಮತ್ತು ರಾಜ್ಯದಲ್ಲಿ ತುರ್ತು ಪರಿಸ್ಥಿತಿ ವಾತಾವರಣ ನಿರ್ಮಾಣವಾಗಿದ್ದು, ಇಂತಹ ಪರಿಸ್ಥಿತಿಯ ಲಾಭ ಪಡೆಯದೇ ನ್ಯಾಯಬೆಲೆ ಅಂಗಡಿ ಮಾಲೀಕರು ಅರ್ಹರಿಗೆ ಪಡಿತರ ಧಾನ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ. ಗೋಪಾಲಯ್ಯ ಸೂಚಿಸಿದರು.
ಪಟ್ಟಣದ ಹೊರ ವಲಯದ ದ್ಯಾಪ ಸಂದ್ರದ ಬಳಿಯಲ್ಲಿ ಅದಾನಿ ಗೋಧಿ ಸಂಸ್ಕ ರಣ ಘಟಕಕ್ಕೆ ಭೇಟಿ ನೀಡಿ ಪಡಿತರ ಧಾನ್ಯಗಳ ಗೋಧಿ ಸಂಸ್ಕರಿಸುವ ಬಗ್ಗೆ ಹಾಗೂ ಚೀಲಗಳಿಗೆ ತುಂಬುವ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು. ನ್ಯಾಯ ಬೆಲೆ ಅಂಗಡಿ ಮಾಲೀಕರು ಗ್ರಾಹಕರಿಂದ ಹೆಚ್ಚುವರಿಯಾಗಿ 10-20 ರೂ. ಸಂಗ್ರಹಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಂತಹವರ ಮೇಲೆ ಕ್ರಮ ಜರುಗಿಸುವುದಾಗಿ ಸಚಿವರು ಎಚ್ಚರಿಸಿದರು.
ತೂಕ ಪರಿಶೀಲನೆ: ಬಡ ಜನತೆಯ ಆಹಾರ ಭದ್ರತೆಗಾಗಿ ಸರ್ಕಾರ ನೀಡುತ್ತಿರುವ ಪಡಿತರ ಧಾನ್ಯ ಬಡ ಜನರ ಉಪಯೋಗಕ್ಕೆ ಯೋಗ್ಯವಾಗಿರಬೇಕು. ಆ ನಿಟ್ಟಿನಲ್ಲಿ ಸಂಸ್ಕರಣೆ ಮತ್ತು ಚೀಲ ತುಂಬುವ ಕಾರ್ಯದ ಜೊತೆಗೆ ನಿಗದಿತ ತೂಕ ಪರಿಶೀಲಿಸುತ್ತಿರುವುದಾಗಿ ತಿಳಿಸಿದರು.
10 ಜಿಲ್ಲೆಗೆ ಗೋಧಿ ಪೂರೈಕೆ: ರಾಜ್ಯದ 10 ಜಿಲ್ಲೆಗಳಿಗೆ ಇಲ್ಲಿಂದಲೇ 8300 ಮೆಟ್ರಿಕ್ ಟನ್ ಸಂಸ್ಕರಿಸಿದ ಗೋಧಿ ಸರಬರಾಜು ಮಾಡುತ್ತಿದ್ದು, ಇದುವರೆಗೂ 5 ಸಾವಿರ ಮೆಟ್ರಿಕ್ ಟನ್ ಗೋಧಿ ಸರಬರಾಜು ಮಾಡಲಾಗಿದ್ದು, ಉಳಿದ 3300 ಮೇ. ಟನ್ ಗೋಧಿ ಒಂದು ದಿನದಲ್ಲಿ ಪೂರೈಕೆಯಾಗುತ್ತದೆ ಎಂದರು.
ಓಟಿಪಿ ಇಲ್ಲದೆ ಧಾನ್ಯ ವಿತರಿಸುವಂತೆ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲಾ ನ್ಯಾಯಾಬೆಲೆ ಅಂಗಡಿಗಳಿಗೆ ಮಾಹಿತಿ ರವಾನೆಯಾಗಿದೆ. ಅದರಂತೆ ವಿತರಣೆ ಆಗಲಿದೆ. ಲಾಕ್‌ಡೌನ್ ಮುಂದುವರಿಯುತ್ತದೆಯೇ ಎಂಬ ಪ್ರಶ್ನೆಗೆ ಈ ಬಗ್ಗೆ ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಪರಿಸ್ಥಿತಿಯ ಅವಲೋಕನದ ನಂತರ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ವಿ.ಮಂಜುಳಾ, ಆಹಾರ ಇಲಾಖೆಯ ಆಯುಕ್ತರಾದ ಶಂಮ್ಲ ಇಕ್ಬಾಲ್, ಉಪನಿದೇರ್ಶಕ ನಾಗರಾಜು ಕೆಳಗಿನಮನೆ, ವ್ಯವಸ್ಥಾಪಕ ಶಿವಣ್ಣ, ತಹಶೀಲ್ದಾರ್ ಮಂಜುನಾಥ್, ಆಹಾರ ನಿರೀಕ್ಷಕ ಚಂದ್ರಶೇಖರ್ ಇದ್ದರು.