Advertisement
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ವರ್ಷ ಅಧಿಕ ಮಳೆಯಿಂದಾಗಿ ಜಿಲ್ಲೆಯ ಹಲವು ಪ್ರದೇಶದಲ್ಲಿ ಗುಡ್ಡ ಕುಸಿತದಿಂದ ಹಾಗೂ ನೆರೆಯಿಂದ ಜನರು ತೀವ್ರವಾಗಿ ತೊಂದರೆಗೆ ಸಿಲುಕಿದ್ದರು. ಇಂತಹ ಸಂಭಾವ್ಯ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಪಾಯದ ಜಾಗದಲ್ಲಿ ಇರುವ ಮನೆಗಳನ್ನು ತೆರೆವುಗೊಳಿಸಿ ಅವರಿಗೆ ಸುರಕ್ಷಿತವಾದ ಜಾಗದಲ್ಲಿ ನೆಲೆಸುವಂತೆ ಸೂಚಿಸುವುದು ಅಧಿಕಾರಿಗಳ ಜವಾಬ್ದಾರಿ. ಮೇ ತಿಂಗಳ ಅಂತ್ಯದಲ್ಲಿ ಜಿಲ್ಲೆಗೆ ಎನ್.ಡಿ.ಆರ್.ಎಫ್. ತಂಡವು ಆಗಮಿಸಲಿದೆ ಎಂದರು. ಕಡಲ್ಕೊರೆತ ತಡೆಯಲು ಎಡಿಬಿ ವತಿಯಿಂದ ಶಾಶ್ವತ ತಡೆಗೋಡೆ ಕಾಮಗಾರಿ ನಡೆಸಿದ ಸ್ಥಳದಲ್ಲಿಯೇ ಕಳೆದ ವರ್ಷ ಮತ್ತೆ ಕಡಲ್ಕೊರೆತ ಕಾಣಿಸಿಕೊಂಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಬಾರಿ ಅಂತಹ ಪ್ರಕರಣ ನಡೆಯದಂತೆ ಮುನ್ನಚ್ಚರಿಕೆ ವಹಿಸಲು ಸೂಚಿಸಿದರು.
Related Articles
Advertisement
ವಿಶಾಖಪಟ್ಟಣದಲ್ಲಿ ಅನಿಲ ದುರಂತ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಅನಿಲ ಸಂಸ್ಥೆಗಳು, ಕಾರ್ಯಾಚರಣೆಯಲ್ಲಿ ಯಾವುದೇ ಲೋಪವಾಗದಂತೆ ಮುನ್ನಚ್ಚರಿಕೆ ವಹಿಸಬೇಕು. ಇದರಲ್ಲಿ ಯಾವುದೇ ರಾಜೀ ಮಾಡಿಕೊಳ್ಳಲಾಗದು ಎಂದು ಅವರು ಸಭೆಯಲ್ಲಿದ್ದ ಅನಿಲ ಸಂಸ್ಥೆಗಳ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ, ಮಾತನಾಡಿ ಮಂಗಳೂರು ನಗರದಲ್ಲಿ ಅಪಾರ ಮಳೆ ಯಿಂದ ತೊಂದರೆಗೀಡಾಗುವ ಪ್ರದೇಶವನ್ನು ಈಗಾಗಲೇ ಗುರುತಿಸಲಾಗಿದೆ. ನಗರದಲ್ಲಿರುವ 11 ರಾಜಕಾಲುವೆಗಳ ಹೂಳೆತ್ತಲು 168 ಲಕ್ಷ ರೂ.ನ ಕಾಮಗಾರಿ ನಡೆಯುತ್ತಿದ್ದು, ಶೇ.80 ರಷ್ಟು ಕಾಮಗಾರಿ ಈಗಾಗಲೇ ಮುಗಿದಿದೆ. 24 ಗಂಟೆಗಳ ಕಂಟ್ರೋಲ್ ರೂಂ ಮಹಾನಗರ ಪಾಲಿಕೆಯಲ್ಲಿ ತೆರೆಯಲಾಗಿದ್ದು, ಮಳೆಗಾಲದಲ್ಲಿ ಕಾರ್ಯಾಚರಣೆಗೆ ಪ್ರತಿ 6 ವಾರ್ಡುಗಳಿಗೆ ಒಂದು ತಂಡವನ್ನು ರಚಿಸಲಾಗಿದೆ. 16 ಪರಿಹಾರ ಕೇಂದ್ರಗಳನ್ನು ಗುರುತಿಸಿ, ಸಿದ್ಧಪಡಿಸಲಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಪರಿಹಾರ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಸೂಚಿಸಿದರು. ಅಲ್ಲದೇ, ಕಾರ್ಮಿಕರ ತಂಡವನ್ನು ರಚಿಸಿ ಸದಾ ಸನ್ನದ್ಧ ಸ್ಥಿತಿಯಲ್ಲಿ ಇಡುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ| ಸೆಲ್ವಮಣಿ, ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್, ಕೋಸ್ಟ್‌ಗಾರ್ಡ್ ಡಿಐಜಿ ವೆಂಕಟೇಶ್, ಡಿಸಿಪಿ ಅರುಣಾಂಶಗಿರಿ, ವಿಪತ್ತು ನಿರ್ವಹಣ ಘಟಕದ ಅಧಿಕಾರಿ ವಿಜಯಕುಮಾರ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ತತ್‌ಕ್ಷಣ ನೆರವುಈ ವರ್ಷ ಯಾವುದೇ ತೊಂದರೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಎಲ್ಲ ಕ್ರಮಗಳನ್ನು ವಹಿಸಬೇಕು. ಧಾರಾಕಾರ ಮಳೆಯಿಂದ ಅಪಾಯ ಸಂಭವಿಸುವ ಸ್ಥಳಗಳಲ್ಲಿ ತತ್‌ಕ್ಷಣ ನೆರವಿಗಾಗಿ ಜಿಲ್ಲಾಡಳಿತದಿಂದ ಅಗತ್ಯವಿರುವ ಬೋಟ್, ಲೈಫ್ ಜಾಕೆಟ್, ಟಾರ್ಚ್, ರೋಪ್ ಸೇರಿದಂತೆ ವಿವಿಧ ಉಪಕರಣಗಳನ್ನು ಜಿಲ್ಲಾಡಳಿತ ಒದಗಿಸಲಿದೆ. ಹೆಚ್ಚು ಮಳೆಯಾದರೆ ಜನರಿಗೆ ವ್ಯವಸ್ಥೆ ಕಲ್ಪಿಸಲು ಹಾಸ್ಟೆಲ್, ಸಮುದಾಯ ಭವನ, ಕಲ್ಯಾಣ ಮಂಟಪಗಳನ್ನು ಗುರುತಿಸಿ ಪಟ್ಟಿಯನ್ನು ಮಾಡಬೇಕೆಂದು ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ಗಳಿಗೆ ಸೂಚಿಸಿದರು.