ಜಮಖಂಡಿ: ತಾಲೂಕಿನಲ್ಲಿ ಡೆಂಘೀ, ಚಿಕೂನ್ ಗುನ್ಯಾ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಾಲೂಕು ಮಟ್ಟದ ಸರ್ಕಾರಿ ಇಲಾಖೆಗಳ ಸಹಕಾರ-ಸಹಯೋಗ ಅತೀ ಅವಶ್ಯವಾಗಿದೆ. ನಗರಸಭೆ ಮತ್ತು ನೀರು ಪೂರೈಕೆ ಮಂಡಳಿ ಸಿಬ್ಬಂದಿ ಅಚ್ಚುಕಟ್ಟಾಗಿ ತಮ್ಮ-ತಮ್ಮ ಕೆಲಸ ನಿರ್ವಹಿಸಿದರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಜಿ.ಎಸ್.ಗಲಗಲಿ ಹೇಳಿದರು.
ನಗರದ ಕುಡಚಿ ರಸ್ತೆಯಲ್ಲಿರುವ ಮಿನಿ ವಿಧಾನಸೌಧ ಕಚೇರಿ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲ ಪ್ರಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳಗಳು ಉತ್ಪತ್ತಿಯಾಗುತ್ತಿದ್ದು, ಮನೆ ಮುಂದೆ ನೀರು ಸಂಗ್ರಹ ಮಾಡಿಕೊಳ್ಳಬಾರದು. ಈಗಾಗಲೇ ತಾಲೂಕಿನಲ್ಲಿ 31 ಚಿಕೂನ್ ಗುನ್ಯಾ ಪ್ರಕರಣಗಳ ಬಗ್ಗೆ ಸಂಶಯ ಪಡಲಾಗಿದ್ದು, ತಾಲೂಕಿನ ಹಿಪ್ಪರಗಿ, ಶಿರಗುಪ್ಪಿ, ರಬಕವಿ-ಬನಹಟ್ಟಿ, ತೇರದಾಳಗಳಲ್ಲಿ ಆಶಾ ಕಾರ್ಯಕರ್ತೆಯರು ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುತ್ತಿದ್ದಾರೆ. 74 ಡೆಂಘೀ ಬಗ್ಗೆ ಸಂಶಯ ಪಡೆಲಾಗಿದ್ದು, ಅದರಲ್ಲಿ 11 ಪ್ರಕರಣ ಗುರುತಿಸಲಾಗಿದ್ದು, ಅದರಲ್ಲಿ ಒಂದು ಮಲೇರಿಯಾ ರೋಗ ಕೇಸ್ ದಾಖಲಾಗಿದೆ ಎಂದರು.
ಡಾ|ಎಚ್.ಜಿ. ದಡ್ಡಿ ಮಾತನಾಡಿ, ತಾಲೂಕಿನಲ್ಲಿ ಉಣ್ಣೆ ಜ್ವರ ಪತ್ತೆಯಾಗಿದ್ದು, ಜಮಖಂಡಿ-ಬನಹಟ್ಟಿಗಳಲ್ಲಿ ವೈದ್ಯರ ಸಭೆ ಕರೆದು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಜಮಖಂಡಿ-ರಬಕವಿ-ಬನಹಟ್ಟಿ ನಗರಸಭೆಗಳಲ್ಲಿ ಚರಂಡಿ ಸ್ವಚ್ಛತೆ ಬಗ್ಗೆ ತಿಳಿವಳಿಕೆ ಮೂಡಿಸುವ ಶಿಬಿರ ನಡೆಸಬೇಕು. ಅಲ್ಲದೇ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಹಾಗೂ ಸ್ವತ್ಛ-ಶುದ್ಧ ನೀರು ಪೂರೈಕೆ ಮಾಡಬೇಕು. ಕಾಟಾಚಾರಕ್ಕೆ ಸಭೆ ನಡೆಸದೆ ಪ್ರತಿಯೊಬ್ಬರು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು. ಕಂದಾಯ ಇಲಾಖೆ ಶಿರಸ್ತೇದಾರ್ ಎ.ಎಸ್. ಗೋಟ್ಯಾಳ, ಸಮಾಜ ಕಲ್ಯಾಣಾಧಿ ಕಾರಿ ಟಿ.ವಿ. ಮಂಟೂರ, ಎಸ್.ಎಸ್. ಕಡ್ಲಿಮಟ್ಟಿ, ಪ್ರಕಾಶ ಗೌಡರ, ಸಿಡಿಪಿಒ ಎಸ್.ಆರ್.ವಾಲೇಕರ, ತಾಪಂ ಅ ಧಿಕಾರಿ
ಬಿ.ಎ.ಬಿರಾದಾರ, ರಬಕವಿ-ಬನಹಟ್ಟಿ, ಜಮಖಂಡಿ ನಗರಸಭೆ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾ ಧಿಕಾರಿಗಳು ಪಾಲ್ಗೊಂಡಿದ್ದರು.