ಇಂಫಾಲ/ಹೊಸದಿಲ್ಲಿ: ಮಣಿಪುರ ಸಹಜ ಸ್ಥಿತಿಗೆ ಮರಳುವ ನಿಟ್ಟಿನಲ್ಲಿ ಕೇಂದ್ರ ಸರಕಾರಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಗಲಭೆಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿ ಸಲಾಗಿದೆ. ಭದ್ರತಾ ಪಡೆಗಳು ಗಸ್ತು ಹೆಚ್ಚಿಸಿದ್ದಾರೆ. ಜತೆಗೆ ಹಿರಿಯ ಅಧಿಕಾರಿ ಗಳು ಪರಿಸ್ಥಿತಿಯ ನಿಕಟ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೊಸದಿಲ್ಲಿಯಲ್ಲಿ ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ಅವಲೋಕಿಸಲು, ಭದ್ರತಾ ಪಡೆಗಳ ನಡುವೆ ಸಮನ್ವಯ ಸಾಧಿಸಲು ಮತ್ತು ಪಡೆಗಳ ಪೂರ್ಣ ಬಳಕೆಗಾಗಿ ಸಿಆರ್‌ಪಿಎಫ್ ಪ್ರಧಾನ ನಿರ್ದೇಶಕ ಎಸ್.ಎಲ್.ಥಾಸೆನ್ ಅವರನ್ನು ಕೇಂದ್ರ ಗೃಹ ಸಚಿವಾಲಯ ಮಣಿಪುರಕ್ಕೆ ಕಳುಹಿಸಿದೆ ಎಂದು ಮಾಹಿತಿ ನೀಡಿದ್ದಾರೆ.
30,000 ಸಿಬ್ಬಂದಿ ನಿಯೋಜನೆ: ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾರ್ಯಕ್ಕಾಗಿ ಪ್ರಸ್ತುತ ರಾಜ್ಯ ಪೊಲೀಸರಲ್ಲದೇ ಕೇಂದ್ರ ಭದ್ರತಾ ಪಡೆಗಳ ಸುಮಾರು 30,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಪೈಕಿ ಕೇಂದ್ರ ಅರೆಸೇನಾ ಪಡೆ, ಭೂಸೇನೆ ಮತ್ತು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಸೇರಿದ್ದಾರೆ. ಅಗತ್ಯವಿರುವ ಕಡೆಗಳಲ್ಲಿ ಕೂಡಲೇ ಹೆಚ್ಚುವರಿ ಸಿಬ್ಬಂದಿಯನ್ನು ಕಳುಹಿಸಲಾಗುತ್ತಿದೆ ಎಂದರು,
ಅಗತ್ಯ ವಸ್ತುಗಳಿಗೆ ತತ್ತರ: ಕುಕಿ ಉಗ್ರರು ಪ್ರಮುಖ ಹೆದ್ದಾರಿಗಳನ್ನು ಮತ್ತು ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಇದರಿಂದ ಆಹಾರ, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ವಾಗಿದೆ. ಕೇವಲ ರಾಷ್ಟ್ರೀಯ ಹೆದ್ದಾರಿ 37 ಮಾತ್ರ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ ಒಂದು ವಾರದಲ್ಲಿ ಅಗತ್ಯ ವಸ್ತುಗಳನ್ನು ಹೊತ್ತ 4,000 ಟ್ರಕ್‌ಗಳು ಮಣಿಪುರ ತಲುಪಿವೆ. ಉಗ್ರರು ಅಲ್ಲಲ್ಲಿ ರಸ್ತೆಗಳನ್ನು ಬಂದ್ ಮಾಡಿದ್ದು, ರಸ್ತೆ ತೆರವು ಕಾರ್ಯವೇ ಭದ್ರತಾ ಪಡೆಗಳಿಗೆ ಸವಾಲಾಗಿದೆ.
ರಾಜ್ಯದ ಖಮೆನಾಕ್ ಪ್ರದೇಶದಲ್ಲಿ 9 ಮಂದಿ ಯುವಕರನ್ನು ಹತ್ಯೆ ಮಾಡಿದ ಕುಕಿ ಉಗ್ರರ ಹೆಡೆಮುರಿ ಕಟ್ಟಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ. ಈ ಕೃತ್ಯದಲ್ಲಿ ಭಾಗಿಯಾದ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಎನ್.ಬಿರೇನ್ ಸಿಂಗ್, ಮಣಿಪುರ ಸಿಎಂ