ಕಾರವಾರ: ಡಾಂಬರು ಕಾಣದ ಮತ್ತು ಹದಗೆಟ್ಟ ರಸ್ತೆಗಳಿರುವಲ್ಲಿ ಜನರ ಸುಗಮ ಸಂಚಾರಕ್ಕಾಗಿ ಸಮರ್ಪಕ ರಸ್ತೆಗಳನ್ನು ಆದ್ಯತೆಯ ಮೇಲೆ ನಿರ್ಮಿಸಲಾಗುತ್ತಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಶಿರವಾಡ, ಕಡವಾಡ, ಕಿನ್ನರ, ವೈಲವಾಡ, ದೇವಳಮಕ್ಕಿ, ಕೆರವಡಿ ಹಾಗೂ ಮಲ್ಲಾಪುರ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಗ್ರಾಮಗಳ ರಸ್ತೆಗೆ ಡಾಂಬರ್ ಅಥವಾ ಕಾಂಕ್ರೀಟ್‌ನ್ನು ಕಂಡಿಲ್ಲ. ಅವುಗಳಲ್ಲಿ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ರಸ್ತೆಗಳಿಲ್ಲದೆ ಜನರು ಅನುಭವಿಸುವ ಕಷ್ಟಗಳನ್ನು ಊಹಿಸವುದಕ್ಕೂ ಸಾಧ್ಯವಿಲ್ಲ. ಅವರ ಕಷ್ಟಗಳನ್ನು ನಿವಾರಣೆ ಮಾಡಲು ರಸ್ತೆ ಸಂಪರ್ಕ ಅವಶ್ಯಕವಾಗಿದೆ ಎಂದರು.
ಗ್ರಾಮೀಣ ಭಾಗದ ಜನರ ಸ್ಥಿತಿ ಅರಿಯಲು ಅಲ್ಲಿಗೇ ಭೇಟಿ ಮಾಡುತ್ತಿರಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಗ್ರಾಮಗಳ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಾಲ್ಕೈದು ತಿಂಗಳಿನಿಂದ ಈಚೆಗೆ ರಸ್ತೆಗೆ ಹೆಚ್ಚಿನ ಅನುದಾನ ಒದಗಿಸಿದ್ದಾರೆ. ಜನರ ಕಷ್ಟಗಳನ್ನು ನಿವಾರಿಸಲು ನಾನು ಸದಾ ಬದ್ಧಳಾಗಿದ್ದೆನೆ ಎಂದು ಹೇಳಿದರು.
ಕಾಮಗಾರಿಗಳ ವಿವರ: ಶಿರವಾಡ ಗ್ರಾಪಂ ವ್ಯಾಪ್ತಿಯ ಜಾಂಬಾಬೇಳೂರು ರಸ್ತೆ ಕಿ.ಮೀ 2ರಲ್ಲಿ ಕೆಳ ಸೇತುವೆ ಪುನರ್ ನಿರ್ಮಾಣ, ಶೇಜವಾಡ ಜಾಂಬಾ ಬೆಳೂರು ರಸ್ತೆ ನಿರ್ಮಾಣ ಕಾಮಗಾರಿ, ಗಾಂವಕರವಾಡ ರಸ್ತೆ ಸುಧಾರಣೆ, ಬಂಗಾರಪ್ಪನಗರದ ಬಾಷಾ ಮನೆಯಿಂದ ಡಿಐಸಿವರೆಗೆ ರಸ್ತೆ ನಿರ್ಮಾಣ ಕಾಮಗಾರಿ, ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯ ನೈತಿಸಾವರ ಪಾಗಿವಾಡ ಶಾಲೆಯಿಂದ ಬಂದರುವರೆಗೆ 10 ಲಕ್ಷ ವೆಚ್ಚದ ರಸ್ತೆ ನಿರ್ಮಾಣ, ಕೈಗಾ ಮುಖ್ಯ ರಸ್ತೆಯಿಂದ ನಿವಳಿ 25 ಲಕ್ಷ ವೆಚ್ಚದ ರಸ್ತೆ ಸುಧಾರಣೆ, ನಗೆ ಶಾಲೆಯಿಂದ ಮಾದೇವಸ್ಥಾನದವರೆಗೆ 10 ಲಕ್ಷ ವೆಚ್ಚದ ರಸ್ತೆ ನಿರ್ಮಾಣ ಹಾಗೂ ಬೆಳೂರು ಗ್ರಾಮದ ಕನ್ನಡ ಶಾಲೆ ಹಿಂದುಗಡೆಯಿಂದ ಕಡಸಿನಕಲ್ ಘಟ್ಟದ ಸೇತುವೆವರೆಗೆ 10 ಲಕ್ಷ ವೆಚ್ಚದ ರಸ್ತೆ ನಿರ್ಮಾಣ ಮತ್ತು ಬೇಕಾರವಾಡದಿಂದ ಕೆಮ್ಮಣ್ಣುಗದ್ದೆ ದೇವಸ್ಥಾನದವರೆಗೆ 15 ಲಕ್ಷ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ, ತಾರಿಗದ್ದೆಯಿಂದ ದೇವಳಿವಾಡ ಅಂದಾಜು 20 ಲಕ್ಷ ವೆಚ್ಚದ ರಸ್ತೆಯ ಮರು ಡಾಂಬರೀಕರಣ ಕಾಮಗಾರಿ, ಕೆರವಡಿ ಪಂಚಾಯತಿ ವ್ಯಾಪ್ತಿಯ ದುರ್ಗಾದೇವಿ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ 6 ಲಕ್ಷ ವೆಚ್ಚದ ರಸ್ತೆ ನಿರ್ಮಾಣ, ಕೈಗಾ ಮುಖ್ಯ ರಸ್ತೆಯಿಂದ ಸರ್ಕಲ್ ಕೂಡುವ 15 ಲಕ್ಷ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ, ಕೆರವಡಿ-2 ರಲ್ಲಿ ಅಂಗನವಾಡಿ 17 ಲಕ್ಷ ರೂ. ವೆಚ್ಚದ ನಿರ್ಮಾಣ ಕಾಮಗಾರಿ ಹಾಗೂ ತಾನಾಜಿವಾಡದಿಂದ ಮದೇವಾಡ ಬಂದರ 30 ಲಕ್ಷ ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗಳಿಗೆ, ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಕೈಗಾವಾಡ ರಸ್ತೆ ಸುಧಾರಣೆ, ಕೈಗಾ ಮುಖ್ಯ ರಸ್ತೆಯಿಂದ ಮಳಾರ ರಸ್ತೆ ಸುಧಾರಣೆ ಕಾಮಗಾರಿಗಳು ಸೇರಿದಂತೆ ಕಡವಾಡ, ಕಿನ್ನರ ಹಾಗೂ ವೈಲವಾಡ ಗ್ರಾಪಂಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಬಿಜೆಪಿ ಕಾರವಾರ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ ಗುನಗಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು, ಸಾರ್ವಜನಿಕರು, ಲೋಕೋಪಯೋಗಿ ಇಲಾಖೆ ಹಾಗೂ ಕೆಆರ್‌ಐಡಿಎಲ್ ಇಲಾಖೆ ಅಧಿಕಾರಿಗಳು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.