Advertisement

ನಗರಸಭೆ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲು ಕ್ರಮ

09:30 PM Sep 28, 2019 | Team Udayavani |

ಅರಸೀಕೆರೆ: ನಗರಸಭೆಗೆ ಚುನಾವಣೆ ನಡೆದು ವರ್ಷ ಕಳೆದರೂ ಚುನಾಯಿತ ಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಾರದ ಕಾರಣ ನಗರಸಭೆ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

Advertisement

ನಗರಸಭೆಗೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗಾಗಿ ನಗರಸಭೆ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮೇತ ವಾರ್ಡು ನಂಬರ್‌ 2 ಮತ್ತು 3 ಹಾಗೂ 4 ಕ್ಕೆ ಭೇಟಿ ನೀಡಿ ಶಾಸಕರು ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರಲ್ಲದೇ ಬಡಾವಣೆ ಜನತೆಯ ಸಮಸ್ಯೆಗಳನ್ನ ಆಲಿಸಿ ಮುಂದೆ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸ್ಥಳದಲ್ಲೇ ಸ್ಥಳಿಯ ವಾರ್ಡ್‌ನ ಸದಸ್ಯರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಅಧಿಕಾರಿಗಳು, ಸದಸ್ಯರ ನಡುವೆ ಹೊಂದಾಣಿಕೆ ಅಗತ್ಯ: ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈಗಾಗಲೇ ನಗರದ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಸೇರಿದಂತೆ ನೂರಾರು ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಆದರೆ ಕಳೆದ ನಗರಸಭೆ ಚುನಾವಣೆಯಲ್ಲಿ ಚುನಾಯಿತ ವಾರ್ಡ್‌ಗಳ ಪ್ರತಿನಿಧಿಗಳನ್ನು ನಗರಸಭೆ ಸದಸ್ಯರೆಂದು ಇನ್ನೂ ಅಧಿಕೃತವಾಗಿ ಘೋಷಣೆಯಾಗದ ಕಾರಣ ಅಧಿಕಾರಿಗಳು ಹಾಗೂ ಸದಸ್ಯರ ನಡುವೆ ಹೊಂದಾಣಿಕೆ ಕೊರತೆಯ ಪರಿಣಾಮ ಅಭಿವೃದ್ಧಿ ಕಾಮಗಾರಿಗಳ ಮೇಲೆ ಪ್ರಭಾವ ಬೀರಬಾರದು ಹಾಗೂ ಜನತೆಯ ಸಮಸ್ಯೆ ಆಲಿಸುವುದು ಸದ್ಯ ನನ್ನ ಕರ್ತವ್ಯ ಎಂದು ಭಾವಿಸಿ ನಾನೇ ವಾರ್ಡ್‌ವಾರು ಪರಿಶೀಲನೆ ಮಾಡುತ್ತೇನೆ ಎಂದರು.

ನಗರಕ್ಕೆ ಅಗತ್ಯ ಮೂಲ ಸೌಕರ್ಯ: ಪುರಸಭೆಯಾಗಿದ್ದ ಅರಸೀಕೆರೆ ಸ್ಥಳಿಯ ಸಂಸ್ಥೆಯನ್ನ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಿದ ಬಳಿಕ ನಗರ ಜನತೆ ಅಪೇಕ್ಷೆಯಂತೆ ಕುಡಿಯುವ ನೀರು ರಸ್ತೆ ಚರಂಡಿಗಳ ನಿರ್ಮಾಣ ಸೇರಿದಂತೆ ಅಗತ್ಯಮೂಲ ಸೌಕರ್ಯಗಳನ್ನ ಕಲ್ಪಿಸುವ ಜೊತೆಗೆ ನಗರ ವ್ಯಾಪ್ತಿಯಲ್ಲಿ ಉದ್ಯಾನವನಗಳ ನಿರ್ಮಾಣ ಹಾಗೂ ಕಂತೇನಹಳ್ಳಿ ಕೆರೆ ಅಂಗಳದಲ್ಲಿ ಈಜುಕೊಳ ನಿರ್ಮಾಣ ಕ್ರೀಡಾಪಟುಗಳಿಗಾಗಿ ಜೇನುಕಲ್‌ ಕ್ರೀಡಾಂಗಣ ಅಭಿವೃದ್ಧಿ ಹೀಗೆ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರರಾದ ಶಿವಾನಂದ್‌ ನಗರಸಭೆ ಪೌರಾಯುಕ್ತ ಕಾಂತರಾಜ್‌ ನಗರಸಭೆ ಸದಸ್ಯರಾದ ಮನೋಹರ್‌, ಜಾಹೀರ್‌ ಹುಸೇನ್‌, ಜಿ.ರಾಮು ಮೇಲಗಿರಿಗೌಡ, ಪುಟ್ಟರಾಜು, ದಯಾನಂದ್‌ ಮುಖಂಡರಾದ ಸಿಖಂದರ್‌, ಶಾಂತರಾಜು, ನಗರಸಭೆ ಸಹಾಯಕ ಅಭಿಯಂತರ ಆನಂದ್‌, ಪರಿಸರ ಅಭಿಯಂತರ ಯೋಗೀಶ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

ಅಭಿವೃದ್ಧಿ ಕಾರ್ಯಕ್ಕೆ ಹಣದ ಕೊರತೆಯಿಲ್ಲ: ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿಗೆ ಕಾರ್ಯಗಳ ಅನುಷ್ಠಾನಕ್ಕೆ ಯಾವುದೇ ರೀತಿಯಲ್ಲಿ ಹಣದ ಕೊರತೆಯಿಲ್ಲ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು. ನಗರಸಭೆಯ ಮೂರನೇ ನಗರೋತ್ಥಾನ ಯೋಜನೆ ಅಡಿ 25 ಕೋಟಿರೂ. ವಿಶೇಷ ಅನುದಾನವಿದ್ದು, ಈ ಅನುದಾನವನ್ನ ಪಕ್ಷ ಭೇದ ಮಾಡದೆ ಪ್ರತಿಯೊಂದು ವಾರ್ಡ್‌ನ ಚುನಾಯಿತ ಜನಪ್ರತಿನಿಧಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳಿಯವಾಗಿ ಆಗಬೇಕಿರುವ ಕೆಲಸ ಕಾರ್ಯಗಳಿಗೆ ಒತ್ತು ನೀಡಿ ಅರಸೀಕೆರೆ ನಗರವನ್ನು ಮಾದರಿ ನಗರವನ್ನಾಗಿ ಮಾಡುವ ಸಂಕಲ್ಪ ತಮ್ಮದಾಗಿದೆ ಎಂದರು.

ನಗರದ ಅಭಿವೃದ್ಧಿಗೆ ಸಹಕಾರಿ: ನಗರಸಭೆಯ ಮಾಜಿ ಅಧ್ಯಕ್ಷ ಎಂ.ಸಮೀವುಲ್ಲಾ ಮಾತನಾಡಿ ಸ್ವತಃ ಶಾಸಕರೇ ವಾರ್ಡ್‌ಗಳಿಗೆ ಭೇಟಿ ನೀಡಿ ಜನರು ಹಾಗೂ ಜನಪ್ರತಿನಿಧಿಗಳ ಸಮಸ್ಯೆ ಕೇಳಲು ಮುಂದಾಗಿರುವುದು ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಶಾಸಕ ನಡುವೆ ಉತ್ತಮ ಬಾಂಧವ್ಯ ವಿದ್ದರೆ ನಗರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಂಯ್ಯಲು ಸಾಧ್ಯವಾಗಲಿದೆ. ಶಾಸಕರೊಂದಿಗೆ ನಗರಸಭೆ ಸದಸ್ಯರಿಗೂ ಉತ್ತಮ ಹೆಸರು ಬರಲಿದೆ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next