Advertisement

ನಾಲೆಗಳಿಗೆ ನೀರು ಹರಿಸಲು ಕ್ರಮ

04:29 PM Jul 31, 2018 | Team Udayavani |

ಯಳಂದೂರು: ಪ್ರಸಕ್ತ ವರ್ಷ ಕಾವೇರಿ ಹಾಗೂ ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಎಲ್ಲಾ
ಜಲಾಶಯಗಳೂ ಭರ್ತಿಯಾಗಿವೆ. ಕಬಿನಿ ವ್ಯಾಪ್ತಿಯ ನಾಲೆ 41ರಿಂದ 52ವರೆಗಿನ ಎಲ್ಲಾ ವಿತರಣಾ ನಾಲೆಗಳಲ್ಲೂ
ವ್ಯವಸಾಯಕ್ಕೆ ನೀರು ಬಿಡಲು ಸಿಎಂ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್‌.ಮಹೇಶ್‌ ಹೇಳಿದರು.

Advertisement

ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಆದರ್ಶ ಗ್ರಾಮ ಯೋಜನೆಯ ಅಭಿವೃದ್ಧಿ ಸಮಾರಂಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸಂಬಂಧಪಟ್ಟ ಇಲಾಖೆ ಮಂತ್ರಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರ ಬೆಳೆಗಳಿಗೆ ತೊಂದರೆಯಾಗದಂತೆ ಕಾಲುವೆಗೆ ನೀರು ಹರಿಸಲು ಒತ್ತಡ ಹೇರಲಾಗುವುದು ಎಂದರು.

ವಿಶೇಷ ಗ್ರಾಮಸಭೆ: ಸರ್ಕಾರ ರೈತರ ಬಡವರ ಪರ ಅನೇಕ ಯೋಜನೆಗಳನ್ನು ರೂಪಿಸಿದೆ. ಎಲ್ಲರಿಗೂ ನೆರವಾಗುವ
ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು. ನಾನು ಸಚಿವನಾದ ಮೇಲೆ ಈ ಗ್ರಾಮಕ್ಕೆ ಬಂದಿದ್ದೇನೆ. ಹಾಗಾಗಿ ನೇರವಾಗಿ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ವಿಶೇಷ ಗ್ರಾಮಸಭೆ ನಡೆಸುವ ಮೂಲಕ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ಗ್ರಾಮಾಭಿವೃದ್ಧಿಗೆ ಆದ್ಯತೆ: ಸಂಸದ ಧ್ರುವನಾರಾಯಣ ಮಾತನಾಡಿ, ಪ್ರಧಾನಮಂತ್ರಿ ಅದರ್ಶ ಗ್ರಾಮ ಯೋಜನೆಯಡಿ ಗ್ರಾಮಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಚರಂಡಿ, ರಸ್ತೆ, ಕುಡಿಯುವ ನೀರು, ವಿದ್ಯುತ್‌, ಸೋಲಾರ್‌ ದೀಪ, ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ ಯಂತ್ರಗಳನ್ನು ವಿತರಿಸುವುದೂ ಸೇರಿದಂತೆ ಅನೇಕ ಕಾರ್ಯಕ್ರಮಗಳು ಇದಕ್ಕೆ ಸೇರಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೇಶ್‌, ಸದಸ್ಯೆ ಉಮಾವತಿ, ತಾಲೂಕು ಪಂಚಾಯಿತಿ ಅಧ್ಯಕ್ಷ ನಿರಂಜನ್‌, ಉಪಾಧ್ಯಕ್ಷೆ ಮಲ್ಲಾಜಮ್ಮ, ಸದಸ್ಯರಾದ ವೆಂಕಟೇಶ್‌, ನಾಗರಾಜು, ಸಿದ್ದರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜುಂಡಯ್ಯ ಉಪಾಧ್ಯಕ್ಷೆ ಶೋಭಾ, ಸದಸ್ಯರಾದ ಪುಟ್ಟಸ್ವಾಮಿ, ಪುಟ್ಟಬಸವಯ್ಯ, ಸಿದ್ದಪ್ಪಸ್ವಾಮಿ, ರಾಜೇಂದ್ರ, ಸರೋಜಮ್ಮ, ರಾಘವೇಂದ್ರ, ಭಾಗ್ಯ ಕೆಆರ್‌ಐಡಿಎಲ್‌ನ ಉಪನಿರ್ದೇಶಕ ಸುಂದರೇಶ್‌ ಮೂರ್ತಿ, ಎಇಇ ಮಹೇಶ್‌ಕುಮಾರ್‌, ಪಂಚಾಯತ್‌ ರಾಜ್‌ ಎಇಇ ರವಿಕುಮಾರ್‌, ಜೆಇ ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ತಿರುಮಲಾಚಾರಿ ಮೊದಲಾದವರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next