Advertisement

ಮುಖ್ಯಮಂತ್ರಿ-ಶಾಸಕರ ನಡುವಿನ ಕಂದಕ ಮುಚ್ಚುವ ಕ್ರಮ

12:05 AM Oct 02, 2021 | Team Udayavani |

ಸಾಮಾನ್ಯವಾಗಿ ಅಧಿಕಾರಕ್ಕೇರಿದ ಮೇಲೆ ಮುಖ್ಯಮಂತ್ರಿಗಳು ಶಾಸಕರಿಗೆ ಲಭ್ಯವಾಗುವುದಿಲ್ಲ ಎನ್ನುವ ಮಾತು ರಾಜಕೀಯ ಪಡಸಾಲೆ ಯಲ್ಲಿ ಆಗಿಂದಾಗ್ಗೆ ಕೇಳಿಬರುತ್ತದೆ. ಆದರೆ ಇಂಥದ್ದೊಂದು ಆರೋಪ ವನ್ನು ಹೊತ್ತುಕೊಳ್ಳದಿರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ ಹಾಗಿದೆ. ಹೀಗಾಗಿಯೇ ಶಾಸಕರ ಭಾವನೆಗಳನ್ನು ಅರಿತು ಅವರ ಭೇಟಿಗಾಗಿಯೇ ವಾರದಲ್ಲಿ ಒಂದು ದಿನ (ಪ್ರತೀ ಗುರುವಾರ) ಸಮಯ ಮೀಸಲಿಡುವ ಮೂಲಕ ತಾವು ಯಾರಿಂದಲೂ ಅಂತರ ಕಾಪಾಡಿಕೊಳ್ಳುತ್ತಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

Advertisement

ಇದು ಅತ್ಯಂತ ಅಗತ್ಯವಾದ ಕ್ರಮವಾಗಿದೆ. ರಾಜ ಕೀಯವಾಗಿಯೂ ಆಡಳಿತಾತ್ಮಕವಾಗಿಯೂ ಇಂಥದ್ದೊಂದು ಸಮನ್ವಯದ ಅಗತ್ಯವಿದೆ. ಈ ಕ್ರಮದ ಮೂಲಕ ಬೊಮ್ಮಾಯಿ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ. ಮೊದಲನೆಯದಾಗಿ ಆಡಳಿತಾತ್ಮಕವಾಗಿ ಶಾಸಕ ರನ್ನು ಮಾತನಾಡಿದರೆ, ಅವರವರ ಕ್ಷೇತ್ರದ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದು. ಇದರಿಂದ ಸರಕಾರ ಮತ್ತು ಶಾಸಕರ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ರಾಜಕೀಯವಾಗಿಯೂ ಸಹ ಗುಂಪುಗಾರಿಕೆ ಆರಂಭವಾಗುವುದನ್ನು ತಪ್ಪಿಸಲು ಇಂಥ ಪರಸ್ಪರ ಮಾತುಕತೆ ನೆರವಾಗುತ್ತದೆ.

ಇದನ್ನೂ ಓದಿ:ವೃದ್ಧಾಶ್ರಮಗಳಿಗೆ ನೀಡುವ ಅನುದಾನ 15 ಲಕ್ಷ ರೂ.ಗೆ ಏರಿಕೆ: ಸಿಎಂ

ತಮ್ಮದೇ ಪಕ್ಷದ ಶಾಸಕರು ತಮಗೆ ಮುಖ್ಯಮಂತ್ರಿ ಭೇಟಿಗೆ ಅವಕಾಶವೇ ಸಿಗುವುದಿಲ್ಲ ಎಂದು ಬಹಳ ಸಮಯದಿಂದ ಹಲವು ಮುಖ್ಯಮಂತ್ರಿಗಳ ಕಾಲದಿಂದಲೂ ವ್ಯಕ್ತವಾದ ಆರೋಪಗಳು. ಶಾಸಕರು ಮತ್ತು ಮುಖ್ಯಮಂತ್ರಿಯ ನಡುವೆ ಸಾಕಷ್ಟು ಅಂತರ ಇದೆ ಎಂಬ ಸಂದೇಶದಿಂದಲೇ ಹಲವು ಸರಕಾರಗಳು ಅಸ್ಥಿರಗೊಂಡದ್ದಿದೆ. ಮುಖ್ಯಮಂತ್ರಿಯಾದವರು ತಮ್ಮದೇ ಪಕ್ಷದ ಶಾಸಕರ ಭೇಟಿಗೆ ಉದ್ದೇಶ ಪೂರ್ವಕವಾಗಿ ನಿರಾಕರಿಸುವ ಸಂದರ್ಭ ಇಲ್ಲದಿದ್ದರೂ ಕೆಲಸದ ಒತ್ತಡದಿಂದಲೋ ಇನ್ಯಾವುದೋ ಕಾರಣದಿಂದ ಪ್ರತಿಯೊಬ್ಬರಿಗೆ ವೈಯಕ್ತಿಕವಾಗಿ ಸ್ಪಂದಿಸಲು ಸಾಧ್ಯವಾಗದಿರಬಹುದು. ಆದರೆ ಅದು ಮುಖ್ಯಮಂತ್ರಿ ಮತ್ತು ಆಡಳಿತ ಪಕ್ಷದ ಶಾಸಕರ ನಡುವೆ ಅಂತರವನ್ನು ಹೆಚ್ಚಿಸುತ್ತದೆ. ನಾಯಕತ್ವದ ಬಗ್ಗೆ ಶಾಸಕರಿಗೆ ಅಸಮಾಧಾನವೂ ಹೆಚ್ಚಾ ಗಲು ಕಾರಣವಾಗುತ್ತದೆ. ಅದರ ಪರಿಣಾಮವೆ. ಗುಂಪುಗಾರಿಕೆ, ಬಂಡಾಯ, ಹೈಕಮಾಂಡ್‌ಗೆ ದೂರು ಎಲ್ಲವೂ ಆರಂಭವಾಗುತ್ತವೆ.

ಪ್ರಸ್ತುತ ಮುಖ್ಯಮಂತ್ರಿ ಕೈಗೊಂಡಿರುವ ಕ್ರಮ ಸ್ತುತ್ಯರ್ಹ. ವಿಶೇಷವಾಗಿ ಆಡಳಿತ ಪಕ್ಷದ ಶಾಸಕರಿಗೆ ಮುಕ್ತವಾಗಿ ಅವರ ಅಹ ವಾಲುಗಳನ್ನು ಹೇಳಿಕೊಳ್ಳಲು ಅವಕಾಶ ನೀಡಿ, ಸಾಧ್ಯವಾದರೆ ಸ್ಥಳ ದಲ್ಲಿಯೇ ಪರಿಹರಿಸುವ ಪ್ರಯತ್ನ ನಡೆಸಿ, ಈಗಿರುವ ಕೊರೊನಾ ಸಂಕಷ್ಟ ಕಾಲದ ಪರಿಸ್ಥಿತಿಯಲ್ಲಿ ತಮಗಿರುವ ಆರ್ಥಿಕ ಇತಿಮಿತಿಯಲ್ಲಿ ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಈ ಮೂಲಕ ಶಾಸಕರ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇವಲ ಆಡಳಿತ ಪಕ್ಷ ಮಾತ್ರವಲ್ಲ ಎಲ್ಲ ಪಕ್ಷಗಳ ಶಾಸಕರನ್ನು ಪರಿಗಣಿಸಿರುವುದು ಉತ್ತಮ ಬೆಳವಣಿಗೆ. ಮುುಖ್ಯಮಂತ್ರಿಗಳ ಈ ಕಾರ್ಯಕ್ರಮವನ್ನು ಶಾಸಕರು ಹಾಗೂ ಸಂಸದರು ಸದುಪಯೋಗ ಪಡಿಸಿಕೊಂಡು ತಮ್ಮ ಕ್ಷೇತ್ರಗಳ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಂಡು ನಾಡಿನ ಅಭಿವೃದ್ಧಿಗೆ ಶ್ರಮಿಸಿದಾಗ ಮಾತ್ರ ಈ ಪ್ರಯತ್ನಕ್ಕೆ ಅರ್ಥ ಬರುತ್ತದೆ. ಮುಖ್ಯಮಂತ್ರಿ ಸಹ ಈ ಕ್ರಮ ವನ್ನು ಪಕ್ಷಾತೀತವಾಗಿ ಹಾಗೂ ನಿರಂತರವಾಗಿ ಮುಂದುವರಿಸಬೇಕು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next