ಬಾಗಲಕೋಟೆ: ಸೈನಿಕರನ್ನು ಗೌರವಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜನರಲ್ ಜಿ.ಜಿ. ಬೇವೂರ ಸ್ಮರಣಾರ್ಥ ಯುದ್ಧ ಸ್ಮಾರಕ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ನವನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಸೈನಿಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯುದ್ಧ ಸ್ಮಾರಕ ನಿರ್ಮಾಣ ಸೇರಿದಂತೆ ಯೋಗ್ಯ ಮಾಜಿಸೈನಿಕರನ್ನು ಸನ್ಮಾನಿಸುವುದು ಮತ್ತು ಜಿಲ್ಲೆಯಲ್ಲಿ ಇಸಿಎಚ್‌ಎಸ್ ಪಾಲಿಕ್ಲಿನಿಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಿದರು.
ಮಾಜಿ ಸೈನಿಕರಿಗೆ ವಿಧಿಸುತ್ತಿರುವ ಸೇವಾ ಶುಲ್ಕ, ಅನುಕಂಪ ಆಧಾರದ ನೇಮಕಾತಿ, ಗ್ರಾಮ ಪಂಚಾಯತಿಗಳಲ್ಲಿ ವಿಧಿಸುತ್ತಿರುವ ಮನೆ ಕರದ ಶೇ. 50 ಶುಲ್ಕ ರಿಯಾಯಿತಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿನ ಸಿಬ್ಬಂದಿಗಳ ನೇಮಕಾತಿ ಕೇಂದ್ರ ಕಚೇರಿಯ ಗಮನಕ್ಕೆ ತಂದು ಬಗೆಹರಿಸಿಕೊಳ್ಳಲು ಸೂಚಿಸಿದರು.
ಮಾಜಿ ಸೈನಿಕರಿಗೆ ಆದಾಯ ಮಿತಿಯನ್ನು 5 ಲಕ್ಷಕ್ಕೆ ಏರಿಸುವುದು, ನೀಡುತ್ತಿರುವ ಆಶ್ರಯ ಮನೆಗಳ ಹಂಚಿಕೆ ಮತ್ತು ಮಾಜಿ ಸೈನಿಕರ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನೀಡುತ್ತಿರುವ ಸೀಟು ಕಾಯ್ದಿರಿಸುವಿಕೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸೈನಿಕ ಮಂಡಳಿ ಸಭೆಯಲ್ಲಿ ಮಂಡಿಸುವಂತೆ ಜಿಲ್ಲೆಯ ಮಾಜಿ ಸೈನಿಕ ಸಂಘದ ಅಧ್ಯಕ್ಷರಿಗೆ ತಿಳಿಸಿದರು.
ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ|ರಮೇಶ ಜಗಾಪುರ ಕುಂದು ಕೊರತೆಗಳಿಗೆ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಸಭೆಗೆ ವಿವರಿಸಿದರು. ಮಾಜಿ ಸೈನಿಕ ಸಂಘದ ಅಧ್ಯಕ್ಷ ರಾಮಪ್ಪ ಯಡಹಳ್ಳಿ, ಮಾಜಿ ಅಧ್ಯಕ್ಷ ಕಾಂಬಳೆ, ಕಾರ್ಯದರ್ಶಿ ಎಚ್.ಆರ್. ಕುಲಕರ್ಣಿ ಹಾಗೂ ಪದಾಧಿಕಾರಿಗಳು, ಮಾಜಿ ಸೈನಿಕರ ಸಮಸ್ಯೆ ವಿವರಿಸಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ಗರಿಮಾ ಪನ್ವಾರ, ಜಿಲ್ಲಾ ಸೈನಿಕ ಮಂಡಳಿ ಉಪಾಧ್ಯಕ್ಷ ಮೇಜರ ಅಪ್ಪಾಸಾಹೇಬ ನಿಂಬಾಳಕರ, ಸದಸ್ಯರಾದ ಅಹ್ಮದ ರಸೂಲ್ ದಾಂಡಿಯಾ, ಕ್ಯಾಪ್ಟನ್ ಅರ್ಜುನ ಕೋರಿ, ಎಸ್.ಬಿ. ಕರಣಿ, ವಿಠಲ ಗೋವಿಂದಪ್ಪನವರ, ಸೈನಿಕ ಇಲಾಖೆ ಎಂ.ಎಸ್. ಬಬಲಾದಿಮಠ, ಪಾಂಡುರಂಗ ಬ್ಯಾಳಿ ಮುಂತಾದವರು ಉಪಸ್ಥಿತರಿದ್ದರು.