Advertisement

ಕೆಜಿ ಮಕ್ಕಳಿಗೆ ಆನ್‌ಲೈನ್‌ ಪಾಠ ಮಾಡಿದರೆ ಕ್ರಮ

08:44 AM May 18, 2020 | Sriram |

ಬೆಂಗಳೂರು: ಪೂರ್ವ ಪ್ರಾಥಮಿಕ ತರಗತಿ (ಎಲ್‌ಕೆಜಿ, ಯುಕೆಜಿ) ಮಕ್ಕಳಿಗೆ ಆನ್‌ಲೈನ್‌ ತರಗತಿ ನಡೆಸುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಶಿಕ್ಷಣ ಸಚಿವರು ಈ ಸಂಬಂಧ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

Advertisement

ಶಾಲಾ ಮಕ್ಕಳಿಗೆ ಆನ್‌ಲೈನ್‌ ತರಗತಿ ನಡೆಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಆದರೆ ಈ ನೆಪದಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು ಎಂದು ಸೂಚಿಸಿದೆ. ಆದರೆ ಕೆಲವು ಖಾಸಗಿ ಶಾಲೆಗಳು ಎಲ್‌ಕೆಜಿ, ಯುಕೆಜಿ ಮಕ್ಕಳಿಗೂ ಆನ್‌ಲೈನ್‌ ತರಗತಿ ನಡೆಸುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಇಂಥ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಇಲಾಖೆಯ ಅಧಿಕಾರಿಗಳು ಗಂಭೀರ ಚಿಂತನೆ ನಡೆಸುತ್ತಿದ್ದಾರೆ.

ಕಠಿನ ಕ್ರಮಕ್ಕೆ ಸೂಚನೆ
ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಆನ್‌ಲೈನ್‌ ತರಗತಿ ಸರಿಯಲ್ಲ. ಆ ವಯಸ್ಸಿನ ಮಕ್ಕಳಿಗೆ ಆನ್‌ಲೈನ್‌ ತರಗತಿ ಎಂಬುದು ಹಾಸ್ಯಾಸ್ಪದ. ಇದು ಕ್ರೂರ ಪದ್ಧತಿ, ಹಿಂಸೆ. ಎಲ್ಲ ಪೋಷಕರು ಕಂಪ್ಯೂಟರ್‌ ಖರೀದಿಸಲು ಸಾಧ್ಯವೇ? ಆ ವಯಸ್ಸಿನ ಮಕ್ಕಳು ಆಟದ ಮೂಲಕ ಕಲಿಯುತ್ತಾರೆಯೇ ವಿನಾ ಆನ್‌ಲೈನ್‌ನಲ್ಲಿ ಅಲ್ಲ. ಇದಕ್ಕೆ ಕಡಿವಾಣ ಹಾಕುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಶಾಲೆ ತರಾತುರಿ ಆರಂಭ ಇಲ್ಲ
ಶಾಲೆಗಳನ್ನು ತರಾತುರಿಯಲ್ಲಿ ಪುನರಾರಂಭಿಸು ವುದಿಲ್ಲ. ವಿದ್ಯಾರ್ಥಿಗಳು, ಪಾಲಕ, ಪೋಷಕರು ಅನಗತ್ಯ ಗೊಂದಲಕ್ಕೆ ಒಳಗಾಗುವುದು ಬೇಡ ಎಂದೂ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಇದೇವೇಳೆ, ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳ ಪರೀಕ್ಷೆ ಕುರಿತಾಗಿ ಜೂನ್‌ ಮೊದಲ ವಾರ ನಿರ್ಧಾರ ಪ್ರಕಟಿಸಲಾಗುವುದು ಎಂದು ಡಿಸಿಎಂ ಡಾ| ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

ಇದ್ದಲ್ಲೇ ಪಿಯುಸಿ ಪರೀಕ್ಷೆ
ಲಾಕ್‌ಡೌನ್‌ನಿಂದ ಊರು ಸೇರಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಾವಿರುವ ಸ್ಥಳದಲ್ಲೇ ಬಾಕಿ ಉಳಿದಿರುವ ಒಂದು ಪರೀಕ್ಷೆ ಬರೆಯಬಹುದು. ಇದಕ್ಕಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿಕೊಂಡಿದ್ದು, ಎಲ್ಲ ಜಿಲ್ಲೆಗಳ ಉಪನಿರ್ದೇಶಕರಿಗೆ ಇಲಾಖೆಯಿಂದ ಸೂಚನೆ ರವಾನಿಸಲಾಗಿದೆ.

ಕಾಲೇಜು ಇರುವೆಡೆಯಿಂದ ಬೇರೆ ಕಡೆ ಹೋಗಿರುವ ವಿದ್ಯಾರ್ಥಿ ಗಳು, ತಾವಿರುವ ಜಿಲ್ಲೆಗಳಲ್ಲೇ ಪರೀಕ್ಷೆ ಬರೆಯಲು ಇಚ್ಛಿಸಿದರೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಇಲಾಖೆ ಚಿಂತನೆ ನಡೆಸಿದೆ. ಕಾಲೇಜಿನ ಪ್ರಾಂಶುಪಾಲರೇ ಈ ಕಾರ್ಯವನ್ನು ಮಾಡಬೇಕಾಗಿರುವುದರಿಂದ ಗೌಪ್ಯವಾಗಿ ನಡೆಸಲು ಸೂಚನೆ ನೀಡಲಾಗಿದ್ದರೂ ಕೆಲವು ಜಿಲ್ಲೆಗಳಲ್ಲಿ ಈ ವಿಚಾರ ಬಹಿರಂಗಗೊಂಡಿದೆ.

ಎಸೆಸೆಲ್ಸಿ ಪರೀಕ್ಷೆ ಯಾವಾಗ?
ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಕೇರಳ ರಾಜ್ಯಗಳು ಈಗಾಗಲೇ ರಾಜ್ಯ ಪಠ್ಯಕ್ರಮದ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿವೆ. ಆದರೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಯಾವಾಗ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಆಂಧ್ರಪ್ರದೇಶದಲ್ಲಿ ಜು.10ರಿಂದ 17ರ ವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ತೆಲಂಗಾಣದಲ್ಲಿ ಲಾಕ್‌ಡೌನ್‌ಗೆ ಮುನ್ನವೇ ಕೆಲವು ವಿಷಯಗಳ ಪರೀಕ್ಷೆ ಮುಗಿದಿದ್ದು, ಉಳಿದವು ಮೇ ಕೊನೆಯ ವಾರ ಅಥವಾ ಜೂನ್‌ ಮೊದಲ ವಾರದಲ್ಲಿ ನಡೆಯಲಿವೆ. ಕೇರಳದಲ್ಲಿ ಮೇ 26ರಿಂದ 28ರ ವರೆಗೆ ನಡೆಯಲಿದೆ. ತಮಿಳುನಾಡಿನಲ್ಲಿ ಜೂ.1ರಿಂದ 10ರ ವರೆಗೆ ನಡೆಯಲಿದೆ. ಕರ್ನಾಟಕದಲ್ಲಿ ಎಸೆಸೆಲ್ಸಿ ಪರೀಕ್ಷೆ ಕುರಿತಂತೆ ಸೋಮವಾರ ನಿರ್ಧಾರ ಹೊರ ಬೀಳಲಿದೆ ಎಂದು ಸಚಿವ ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next