ರಾಮನಗರ: ಜಿಲ್ಲೆಯಲ್ಲಿ ನಿರ್ಮಾಣ ಪೂರ್ಣ ಹಂತದಲ್ಲಿರುವ 550 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಗೆ ಅಗತ್ಯ ತಜ್ಞ ವೈದ್ಯರು, ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಿಸುವ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.
ಮಂಗಳವಾರ ನಗರಕ್ಕೆ ಭೇಟಿ ನೀಡಿದ ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಿಂದ ವಿಡಿಯೋಮೂಲಕ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿದರು.
ಹಾಲಿ ಜಿಲ್ಲಾಸ್ಪತ್ರೆ ತಾಯಿ, ಮಕ್ಕಳ ಆಸ್ಪತ್ರೆ: ನೂತನ ಕಟ್ಟಡಕ್ಕೆ ಜಿಲ್ಲಾಸ್ಪತ್ರೆ ಸ್ಥಳಾಂತರವಾದ ನಂತರ ಜಿಲ್ಲಾ ಕೇಂದ್ರ ರಾಮನಗರದಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ 100 ಹಾಸಿಗೆಗಳ ಜಿಲ್ಲಾಸ್ಪತ್ರೆಯನ್ನು ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯಾಗಿ ಪರಿವರ್ತಿಸಬೇಕು. ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ಹೊಸ ಜಿಲ್ಲಾಸ್ಪತ್ರೆಗೆ ನಿಯೋಜಿಸಿಕೊಳ್ಳಬೇಕು ಎಂದು ತಿಳಿಸಿದರು.
ಟ್ರಾಮಾ ಸೆಂಟರ್: ಮೈಸೂರು ಮತ್ತು ಬೆಂಗಳೂರಿನ ನಡುವೆ 10 ಪಥದ ರಸ್ತೆ ನಿರ್ಮಾಣವಾಗುತ್ತಿದ್ದು, ಮೈಸೂರು ಮತ್ತು ಬೆಂಗಳೂರು ಹೊರತು ಪಡಿಸಿದರೆ ಮಧ್ಯಭಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಹಾಗೂ ಟ್ರಾಮಾ ಸೆಂಟರ್‌ಗಾಗಿ ಬೇಕಿರುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇಲ್ಲಿಗೆ ತಜ್ಞ ವೈದ್ಯರನ್ನು ನೇಮಿಸುವ ವಿಚಾರದಲ್ಲಿ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಅವರೊಂದಿಗೆ ಚರ್ಚಿಸಿದರು.
ಮಾವು ಸಂಸ್ಕರಣ ಘಟಕ: ವಿಡಿಯೋ ಸಂವಾದದಲ್ಲಿ ತೋಟಗಾರಿಕೆ ಇಲಾಖೆ ನಿರ್ದೇಶಕರು ಚನ್ನಪಟ್ಟಣ ತಾಲೂಕಿನ ಭೈರಪಟ್ಟಣದಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆ ವಿಚಾರದಲ್ಲಿ ಸಚಿವರ ಗಮನ ಸೆಳೆದರು. ಇಲ್ಲಿ ಮಾವು ಸೇರಿದಂತೆ ವಿವಿಧ ಹಣ್ಣುಗಳ ಸಂಸ್ಕರಿಸುವ ವಿಚಾರದಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಯಾವುದೇ ತೊಂದರೆ ಇದ್ದಲ್ಲಿ ತಮ್ಮ ಗಮನ ಸೆಳೆಯುವಂತೆ ತಿಳಿಸಿದರು. ಸಮಸ್ಯೆ ಪರಿಹರಿಸಿಕೊಂಡು ಶೀಘ್ರವಾಗಿ ಮಾವು ಸಂಸ್ಕರಣ ಘಟಕದ ಕೆಲಸ ಪ್ರಾರಂಭಿಸುವಂತೆಅಧಿಕಾರಿಗಳಿಗೆ ತಿಳಿಸಿದರು.
ರೇಷ್ಮೆ ಗೂಡು ಹೈಟೆಕ್ ಮಾರುಕಟ್ಟೆ: ರೇಷ್ಮೆ ಇಲಾಖೆ ನಿರ್ದೇಶಕರು ಮಾತನಾಡಿ, ಪೊಲೀಸ್ ತರಬೇತಿ ಕೇಂದ್ರದ ಹತ್ತಿರವಿರುವ ರೇಷ್ಮೆ ತರಬೇತಿ ಸಂಸ್ಥೆಗೆ ಸೇರಿದ ಭೂಮಿಯಲ್ಲಿ ರೇಷ್ಮೆ ಗೂಡು ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಕನ್ಸಲ್ಟೆನ್ಸಿ ಸರ್ವಿಸ್ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.ಮಾರುಕಟ್ಟೆ ನಿರ್ಮಾಣಕ್ಕೆ 75 ಕೋಟಿ ರೂ.ಗಳು ವೆಚ್ಚವಾಗಲಿದ್ದು, ಈಗಾಲೇ ನಬಾರ್ಡ್ 35 ಕೋಟಿ ರೂ. ನೀಡಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಹೊಸ ಮಾರುಕಟ್ಟೆ ನಿರ್ಮಾಣ ಶೀಘ್ರ ಕೈಗೆತ್ತಿ ಕೊಳ್ಳಿ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಶಿಧರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಚನ್ನಪಟ್ಟಣ, ಮಾಗಡಿ ತಾಲೂಕಿನಲ್ಲಿ 50 ಹಾಸಿಗೆಯುಳ್ಳ ಆಸ್ಪತ್ರೆಗಳಿದ್ದು, ಈ ಆಸ್ಪತ್ರೆಗಳನ್ನು 100 ಹಾಸಿಗೆಗೆ ಉನ್ನತೀಕರಿಸಿ ಕೊಡಲು ಆರೋಗ್ಯ ಇಲಾಖೆಯ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಬೇಕು.
–ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಉಪಮುಖ್ಯಮಂತಿ