ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇರೆ, ಬೇರೆ ಹೆಸರುಗಳಿಂದ ಕರೆಯಲ್ಪಡುವ ಕೋಲಿ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಕೇಂದ್ರದ ಮೇಲೆ ಒತ್ತಡ ಹೇರು ವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್ ಹಾಗೂ ಡಾ ಎ.ಬಿ.ಮಾಲಕರೆಡ್ಡಿ ನೇತೃತ್ವದಲ್ಲಿ ಕಲಬುರಗಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಕೋಲಿ ಸಮಾಜದ ಮುಖಂಡರ ನಿಯೋಗ ಗುರುವಾರ ಮುಖ್ಯ ಮಂತಿಯನ್ನು ಭೇಟಿ ಮಾಡಿ, ಕೋಲಿ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸು ವಂತೆ ಮನವಿ ಸಲ್ಲಿಸಿತು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ನಿಯೋಗದ ಮುಖಂಡರು, ಕೋಲಿ ಸಮಾಜವನ್ನು ಬೆಸ್ತ, ಕಬ್ಬಲಿಗ, ಗಂಗಾಮತ ಸೇರಿದಂತೆ 39 ಪರ್ಯಾಯ ಹೆಸರುಗಳಿಂದ ಕರೆಯಲಾಗುತ್ತಿದೆ. ಈ ಸಮುದಾಯ ಸುಮಾರು 50 ಲಕ್ಷ ಜನಸಂಖ್ಯೆ ಹೊಂದಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ನೀವೇ ಪತ್ರ ಬರೆದಿದ್ದೀರಿ. ಆದರೆ, ಇದುವರೆಗೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಅಲ್ಲದೇ ರಾಜಕೀಯವಾಗಿಯೂ ಸಮುದಾಯಕ್ಕೆ ಸಂಪುಟದಲ್ಲಿ ಯಾವುದೇ ಸ್ಥಾನಮಾನ ದೊರೆತಿಲ್ಲ. ಪಕ್ಷದಲ್ಲಿನ ಹಿರಿಯ ನಾಯಕರನ್ನು ಗುರುತಿಸಿ, ವಿಧಾನ ಪರಿಷತ್ ಸದಸ್ಯ, ನಿಗಮ -ಮಂಡಳಿ ಅಧ್ಯಕ್ಷ, ಕೆಪಿಎಸ್‌ಸಿ ಸದಸ್ಯರನ್ನಾಗಿ ನೇಮಿಸುವಂತೆ ಮನವಿ ಮಾಡಿದರು.
ಅವರ ಮನವಿಗೆ ಸ್ಪಂದಿಸಿದ ಯಡಿಯೂರಪ್ಪ, ಈ ವಿಚಾರವನ್ನು ಮತ್ತೂಮ್ಮೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಕೋಲಿ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಂಸದ ಉಮೇಶ್ ಜಾಧವ್, ಕೋಲಿ ಸಂಘದ ಅಧ್ಯಕ್ಷ ಮೌಲಾಲಿ, ಉಪಾಧ್ಯಕ್ಷ ಸೀತಾರಾಮ್ ಮಾಗಡಿ, ಸಂಘಟನಾ ಕಾರ್ಯದರ್ಶಿ ಗವಿರಾಜು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಬಿಜೆಪಿಗೆ ಪೂರ್ಣ ಪ್ರಮಾಣದಲ್ಲಿ ಬಹುಮತ ಬಂದರೆ ಸರ್ಕಾರದಲ್ಲಿ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ದೊರೆಯಲಿದೆ . ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲ. ಬಹುಮತ ಬಂದಿದ್ದರೆ ಎಲ್ಲರಿಗೂ ಪ್ರಾತಿನಿಧ್ಯ ಸಿಗುತ್ತಿತ್ತು.
-ಮಾಲೀಕಯ್ಯ ಗುತ್ತೇದಾರ್, ಮಾಜಿ ಸಚಿವ