Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದಕ್ಷಿಣ ಆಫ್ರಿಕಾ, ಬೋಟ್ಸ್ವಾನ, ಇಸ್ರೇಲ್, ಹಾಂಗ್ ಕಾಂಗ್ ಮೊದಲಾದ ದೇಶಗಳಲ್ಲಿ ಕಳೆದೊಂದು ವಾರದಿಂದ ಕೋವಿಡ್ ಹೊಸ ರೂಪಾಂತರಿ ವೈರಾಣು ಕಾಣಿಸಿದೆ. ಆದರೆ ರಾಜ್ಯದಲ್ಲಿ ಎಲ್ಲೂ ಇದು ಕಂಡುಬಂದಿಲ್ಲ. ಇದಕ್ಕಾಗಿ ನಿನ್ನೆ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಮಾರ್ಗಸೂಚಿ ರೂಪಿಸಿ ಬಿಡುಗಡೆ ಮಾಡಲಾಗಿದೆ. ಹೊಸ ವೈರಾಣು ಕಂಡುಬಂದಿರುವ ದೇಶಗಳಿಂದ ರಾಜ್ಯದ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕೋವಿಡ್ ವರದಿ ತಂದಿದ್ದರೂ ಕೂಡ, ಅವರಿಗೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲಾಗುವುದು. ಅವರಿಗೆ ನೆಗೆಟಿವ್ ಬಂದರೆ ಮನೆಯಲ್ಲೇ ಒಂದು ವಾರ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು. ಈ ಸಮಯದಲ್ಲಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗುವುದು. ಏಳು ದಿನಗಳ ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು. ಅವರಿಗೆ ರೋಗದ ಲಕ್ಷಣ ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲಾಗುವುದು. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.
Related Articles
Advertisement
ರಾಜ್ಯದಲ್ಲಿ 45 ಲಕ್ಷ ಜನರು ಎರಡನೇ ಡೋಸ್ ಪಡೆಯಬೇಕಿದೆ. ಅವರೆಲ್ಲರೂ ಲಸಿಕೆ ಪಡೆಯಬೇಕು. ಲಸಿಕೆ ಪಡೆಯುವ ವಿಚಾರದಲ್ಲಿ ಯಾರೂ ಉದಾಸೀನ ಮಾಡಬಾರದು. ಒಬ್ಬರಿಗೆ ಕೊರೊನಾ ಬಂದರೆ ಅದು ಇಡೀ ಕುಟುಂಬಕ್ಕೆ ಬರುವ ಸಾಧ್ಯತೆ ಇರುವುದರಿಂದ ಲಸಿಕೆ ಪಡೆಯಬೇಕು. ಮೂರನೇ ಅಲೆ ಬಂದಾಗ ಲಸಿಕೆ ಪಡೆಯದವರಿಗೆ ಸಮಸ್ಯೆಯಾಗಬಹುದು. ದೇಶದಲ್ಲಿ ಮೊದಲ ಡೋಸ್ ಸರಾಸರಿ ಶೇ.80 ಇದ್ದರೆ, ರಾಜ್ಯದಲ್ಲಿ ಶೇ.90 ಕ್ಕೂ ಅಧಿಕವಾಗಿದೆ. ಎರಡನೇ ಡೋಸ್ ನಲ್ಲಿ ದೇಶದ ಸರಾಸರಿ ಶೇ.42-43 ಇದ್ದು, ರಾಜ್ಯದಲ್ಲಿ ಶೇ.57 ಇದೆ. ಜನರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಬೇಕು ಎಂದರು.
ಸೋಮವಾರ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿ ಸಲಹೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ನಂತರ ಚರ್ಚೆ ನಡೆಸಿ ಅಗತ್ಯ ಕ್ರಮ ವಹಿಸಲಾಗುವುದು. ಕಳೆದೆರಡು ವರ್ಷದಿಂದ ಅನೇಕ ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ರಾಜ್ಯ ಸರ್ಕಾರ ಕೂಡ ಕೋವಿಡ್ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದೆ. ಆದರೆ ಬೇರೆ ದೇಶಗಳಲ್ಲಿ ಹೊಸ ವೈರಾಣು ಕಂಡುಬಂದಿರುವುದರಿಂದ ಪ್ರಧಾನಿಗಳು ಸಭೆ ನಡೆಸಲಿದ್ದಾರೆ ಎಂದರು.
25 ರೂಪಾಂತರಿ
ಕೋವಿಡ್ ವೈರಸ್ 25 ಬಗೆಯ ರೂಪಾಂತರಿಗಳನ್ನು ಹೊಂದಿದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ. ಈಗ ಕಂಡುಬಂದಿರುವ ಹೊಸ ವೈರಾಣು ಬಗ್ಗೆಯೂ ಅಧ್ಯಯನಗಳಾಗುತ್ತಿದೆ. ಹೊಸ ವೈರಾಣುವಿನ ಮೇಲೆ ಈಗಿನ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆಯೂ ಅಧ್ಯಯನಗಳು ನಡೆಯಬೇಕಿದೆ. ಆದರೂ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕಿದೆ. ಜೊತೆಗೆ ಸುರಕ್ಷತಾ ನಿಯಮ ಪಾಲಿಸಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ವೈರಾಣುಗೆ ಓಮಿಕ್ರಾನ್ ಎಂಬ ಹೆಸರು ನೀಡಿದ್ದಾರೆ. ಇದು ಎಷ್ಟು ತೀವ್ರತೆ ಹೊಂದಿದೆ ಎಂಬ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ ಎಂದರು.
ಔಷಧಿ ಖರೀದಿ
ಔಷಧಿ ಖರೀದಿ ಕುರಿತು ಸಭೆ ನಡೆಸಲಾಗಿದೆ. ಔಷಧಿಗಾಗಿ ಸುಮಾರು 38 ಕೋಟಿ ರೂ. ಅನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನೀಡಲಾಗಿದೆ. ಕೋವಿಡ್ ನಿಂದಾಗಿ ಜನರಲ್ ಔಷಧಿಗಳನ್ನು ಖರೀದಿಸುವುದು ಈ ವರ್ಷ ಸ್ವಲ್ಪ ವಿಳಂಬವಾಗಿದೆ. ಕೋರ್ಟ್ ನಲ್ಲೂ ಪ್ರಕರಣ ಇದ್ದಿದ್ದರಿಂದ ಕೆಲ ಟೆಂಡರ್ ಗಳೂ ಆಗಿರಲಿಲ್ಲ. ಸ್ಥಳೀಯವಾಗಿಯೇ ಔಷಧಿ ಖರೀದಿಸಲು ಹಣ ನೀಡಲಾಗಿದೆ. ತಾಲೂಕು, ಜಿಲ್ಲಾಸ್ಪತ್ರೆ ಎಲ್ಲ ಆಸ್ಪತ್ರೆಗಳಲ್ಲಿ ಎರಡು ಮೂರು ದಿನಗಳಲ್ಲಿ ಔಷಧಿ ದೊರೆಯಲಿದೆ. ಯಾವುದೇ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ ಎಂದರು.