ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ “ರಾಜ ಮಾರ್ತಾಂಡ’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರದ ಡಬ್ಬಿಂಗ್ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಚಿರು ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ಈ ಮೂಲಕ ಅಣ್ಣನ ಕೊನೆಯ ಸಿನಿಮಾಕ್ಕೆ ಧ್ರುವ ಧ್ವನಿ ನೀಡಿದಂತಾಗಿದೆ.
ಈ ಬಗ್ಗೆ ಮಾತನಾಡುವ ನಿರ್ದೇಶಕ ರಾಮ್ ನಾರಾಯಣ್, “ಚಿರು ಅವರು ನಮ್ಮ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದರು. ಡಬ್ಬಿಂಗ್ ಮಾಡುವುದು ಮಾತ್ರ ಬಾಕಿಯಿತ್ತು. ಆನಂತರ ನಡೆಯ ಬಾರದ ನಟನೆ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ನಾನು ಚಿರು ಅವರ ಪಾರ್ಥಿವ ಶರೀರ ನೋಡಲು ಹೋದಾಗ, ಧ್ರುವ ಸರ್ಜಾ ಕೇಳಿದ ಮೊದಲ ಮಾತು, ಅಣ್ಣ ಡಬ್ಬಿಂಗ್ ಮುಗಿಸಿದ್ದಾರಾ? ನಾನು ಇಲ್ಲ ಅಂದೆ. ನಾನು ಮಾಡಿಕೊಡುತ್ತೀನಿ ಅಂದರು. ಅದರಂತೆ ಈಗ ಡಬ್ಬಿಂಗ್ ಮಾಡಿದ್ದಾರೆ. ದರ್ಶನ್ ಅವರು ಕೂಡಾ ವಾಯ್ಸ್ ಓವರ್ ಕೊಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ತ್ರಿವಿಕ್ರಮ ಎಂಟ್ರಿಗೆ ಮುಹೂರ್ತ ಫಿಕ್ಸ್
ಮೇಘನಾರಾಜ್ ಹಾಗೂ ಸುಂದರ ರಾಜ್ ಅವರಂತೂ ನಮ್ಮ ಬೆಂಬಲಕ್ಕೆ ಸದಾ ಇದ್ದಾರೆ. ರಾಯನ್ ರಾಜ್ ಸರ್ಜಾ ಸಹ ನಮ್ಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೂನ್ ನಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು. ಚಿತ್ರ ಬಿಡುಗಡೆಯ ದಿನ ಚಿರು ಅವರ 101 ಅಡಿ ಕಟೌಟ್ ಹಾಗೂ ರಾಯನ್ ಸರ್ಜಾ ಅವರ 51 ಅಡಿ ಎತ್ತರದ ಕಟೌಟ್ ನಿಲ್ಲಿಸುವ ಯೋಚನೆ ಕೂಡಾ ಚಿತ್ರತಂಡಕ್ಕಿದೆ.
ಈ ಚಿತ್ರವನ್ನು ಶಿವಕುಮಾರ್ ನಿರ್ಮಿಸಿದ್ದಾರೆ. ಚಿತ್ರ ಬಿಡುಗಡೆ ಬಗ್ಗೆ ಮಾತನಾಡಿದ ಮೇಘನಾ ರಾಜ್, “ಅದೇನೊ ಗೊತ್ತಿಲ್ಲ. ಅವರು ನಟಿಸುವ ಬೇರೆ ಚಿತ್ರಗಳ ಸಂಭಾಷಣೆಯನ್ನು ಅಲ್ಲೇ ಹೇಳಿ, ಹತ್ತು ನಿಮಿಷಕ್ಕೆ ಮರೆತು ಹೋಗತ್ತಿದ್ದರು. ಆದರೆ ಈ ಚಿತ್ರದ ಸಂಭಾಷಣೆ ಮಾತ್ರ ಯಾವಾಗಲೂ ಹೇಳುತ್ತಿದ್ದರು. ಕೊನೆಗೆ ಚಿರು ಬಂದರೆ ನಾವೆಲ್ಲಾ ಆ ಡೈಲಾಗ್ ಹೇಳುತ್ತಿದ್ದೆವು. ಅಷ್ಟು ಈ ಚಿತ್ರವನ್ನು ಹಚ್ಚಿಕೊಂಡಿದ್ದರು. ಅವರಿಲ್ಲದ ಈ ಸಮಯದಲ್ಲಿ ಚಿತ್ರತಂಡಕ್ಕೆ ಬೆಂಬಲ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ನಮ್ಮ ಎರಡು ಕುಟುಂಬಗಳ ಸಹಕಾರ ಸದಾ ಸಿನಿಮಾಗೆ ಇರುತ್ತದೆ’ ಎಂದರು ಮೇಘನಾರಾಜ್