Advertisement

ಸ್ಕಾಲರ್‌ಶಿಪ್‌ ತಲುಪಿಸಲು ಕ್ರಿಯಾ ಯೋಜನೆ

12:03 PM Sep 16, 2018 | |

ಬೆಂಗಳೂರು: ಒಂದೇ ಒಂದು ಅರ್ಜಿ ಸಲ್ಲಿಸುವ ಮೂಲಕ ವಿದ್ಯಾರ್ಥಿ ವೇತನ ಪಡೆಯಬಹುದಾದ ಸುಧಾರಿತ ವ್ಯವಸ್ಥೆ (ಸ್ಕಾಲರ್‌ಶಿಪ್‌ ಪೋರ್ಟಲ್‌ಯೋಜನೆ)ಯನ್ನು ಸರ್ಕಾರ ಜಾರಿಗೊಳಿಸಿದ್ದು, ಅದರಂತೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿನ ಎಲ್ಲ ಅರ್ಹ ಶಾಲಾ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿದ್ಯಾರ್ಥಿ ವೇತನ ನೀಡಲು ಜಿಲ್ಲಾಡಳಿತ ಕ್ರಿಯಾ ಯೋಜನೆ ರೂಪಿಸಿದೆ.

Advertisement

ಆಧಾರ್‌ ಸಂಖ್ಯೆ ಮತ್ತು ಬ್ಯಾಂಕ್‌ ಅಕೌಂಟ್‌ ವಿವರ ಸಲ್ಲಿಕೆ ವಿಳಂಬ, ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆಯ (ಎಸ್‌ಎಟಿಎಸ್‌) ಗುರುತಿನ ಸಂಖ್ಯೆ ನೀಡಿಕೆಯಲ್ಲಿ ಲೋಪ ಸೇರಿದಂತೆ ಅನೇಕ ಕಾರಣಗಳಿಂದಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಶಾಲೆಗಳಲ್ಲಿನ ಸುಮಾರು 42 ಸಾವಿರಕ್ಕೂ ಹೆಚ್ಚು ಮಕ್ಕಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಇಂತಹ ಲೋಪಗಳು ಮತ್ತೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಮುಂದಾಗಿರುವ ಜಿಲ್ಲಾಡಳಿತ ಸುಧಾರಿತ “ಸ್ಕಾಲರ್‌ಶಿಪ್‌ ಪೋರ್ಟಲ್‌’ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ.

ಮಾಸಾಂತ್ಯದೊಳಗೆ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳನ್ನು ಯೋಜನೆ ವ್ಯಾಪ್ತಿಗೆ ತರುವ ಗುರಿ ಹೊಂದಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು, ಅರ್ಹ ವಿದ್ಯಾರ್ಥಿಗಳನ್ನು ಸ್ಕಾಲರ್‌ಶಿಪ್‌ ಪೋರ್ಟಲ್‌ನಡಿ ಸೇರ್ಪಡೆಗೊಳಿಸಲು ಕಾರ್ಯದಲ್ಲಿ ನಿರತರಾಗಿದ್ದಾರೆ.

ಶಾಲೆಗಳ ವಿವರ: ಬೆಂಗಳೂರು ದಕ್ಷಿಣ, ಪೂರ್ವ, ಉತ್ತರ ಹಾಗೂ ಅನೇಕಲ್‌ ತಾಲೂಕಿನಲ್ಲಿ 4,625 ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಶಾಲೆಗಳಿದ್ದು, 13,61,362 ವಿದ್ಯಾರ್ಥಿಗಳಿದ್ದಾರೆ. ಹಾಗೇ 25,516 ಪ್ರೌಢಶಾಲೆಗಳಲ್ಲಿ 26,92,215 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇದರಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿದ್ದಾರೆ.

Advertisement

ಬೆಂಗಳೂರು ಒನ್‌ನಲ್ಲೂ ಅರ್ಜಿ ಸಲ್ಲಿಸಬಹುದು: ಇದೇ ಮೊದಲ ಬಾರಿಗೆ ಪೋರ್ಟಲ್‌ ವ್ಯವಸ್ಥೆ ಮೂಲಕ ಅರ್ಜಿ ಸಲ್ಲಿಕೆ ವ್ಯವಸ್ಥೆ ಜಾರಿಯಾಗಿದೆ. ಆದರೆ,  ಆನ್‌ಲೈನ್‌ ವ್ಯವಸ್ಥೆ ಬಗ್ಗೆ ಮಾಹಿತಿ ಇಲ್ಲದ, ಇಲ್ಲವೇ ಸ್ಥಳೀಯವಾಗಿ ಇಂಟರ್‌ನೆಟ್‌ ಸೌಲಭ್ಯವಿಲ್ಲದ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಪೋಷಕರು ಅರ್ಜಿ ಭರ್ತಿ ಮಾಡಲು ನೆರವಾಗುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗೇ ಬೆಂಗಳೂರು ಒನ್‌, ಗ್ರಾ.ಪಂ ಕಚೇರಿಯಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ. ಜತೆಗೆ ಬೆಂಗಳೂರು ಒನ್‌, ತಾ.ಪಂ, ಬಿಇಒ ಕಚೇರಿ ಸೇರಿ ಕೆಲವೆಡೆ ಅರ್ಜಿ ಭರ್ತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಯೋಜನೆ ಉದ್ದೇಶ: ಈ ಹಿಂದೆ ಪೋಷಕರು ಮತ್ತು ಮಕ್ಕಳು, ವಿದ್ಯಾರ್ಥಿ ವೇತನದ ಅರ್ಜಿಗಳಿಗಾಗಿ ಸರ್ಕಾರಿ ಕಚೇರಿಗೆ ಅಲೆಯಬೇಕಿತ್ತು. ಅರ್ಜಿ ಭರ್ತಿ, ಸಲ್ಲಿಕೆಯಲ್ಲಿ ವಿಳಂಬ ಹಾಗೂ ಇತರ ಕಾರಣಗಳಿಂದ ಹಲವು ಮಕ್ಕಳು ವಿದ್ಯಾರ್ಥಿ ವೇತನದಿಂದ ವಂಚಿತರಾಗುತ್ತಿದ್ದರು. ಈ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಸರ್ಕಾರ ಸ್ಕಾಲರ್‌ಶಿಪ್‌ ಪೋರ್ಟಲ್‌ ಜಾರಿಗೊಳಿಸಿದೆ. 

ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಮೆಟ್ರಿಕ್‌ ನಂತರ ವಿದ್ಯಾರ್ಥಿ ವೇತನ, ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ, ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಪೋಷಕರ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಸ್ಕಾಲರ್‌ಶಿಪ್‌ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅದರಂತೆ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ಅನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ: ವೆಬ್‌ಸೈಟ್‌ ವಿಳಾಸ www.scholarships.net.in ದಲ್ಲಿ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ತೆರೆದುಕೊಳ್ಳಲಿದೆ. ಇಲ್ಲಿ ವಿದ್ಯಾರ್ಥಿಯ ಎಸ್‌ಎಟಿಎಸ್‌ ಗುರುತಿನ ಸಂಖ್ಯೆ, ವಿದ್ಯಾರ್ಥಿ ಮತ್ತು ಪೋಷಕರ ಆಧಾರ್‌ ಸಂಖ್ಯೆ ಅಥವಾ ಇಐಡಿ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್‌ ಖಾತೆ ಮಾಹಿತಿ, ಇ-ಸೈನ್‌, ಮೊಬೈಲ್‌ ಸಂಖ್ಯೆ ಸೇರಿದಂತೆ ಪೂರಕ ಮಾಹಿತಿ ಭರ್ತಿ ಮಾಡಬೇಕು. ಅರ್ಜಿ ಸ್ವೀಕೃತಿ ಬಗ್ಗೆ ವಿದ್ಯಾರ್ಥಿಗಳು ನೀಡಿದ ಮೊಬೈಲ್‌ ಸಂಖ್ಯೆಗೆ ಖಾತರಿ ಸಂದೇಶ ರವಾನೆಯಾಗುತ್ತದೆ. ಈ ಪ್ರಕ್ರಿಯೆ ಮುಗಿದ ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ವಿದ್ಯಾರ್ಥಿ ವೇತನ ಸಂದಾಯವಾಗಲಿದೆ.

ಮಕ್ಕಳು ವಿದ್ಯಾರ್ಥಿ ವೇತನದಿಂದ ವಂಚಿತರಾಗದಿರಲಿ ಎಂಬುವುದು ನಮ್ಮ ಆಶಯ. ಆ ಹಿನ್ನೆಲೆಯಲ್ಲಿ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಯೋಜನೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ.
-ಎಂ.ಎಸ್‌.ಅರ್ಚನಾ, ಬೆಂಗಳೂರು ನಗರ ಜಿ.ಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next