Advertisement
ಸಿಜೆಐ ಇನ್ನು ಮೂರು ದಿನಗಳ ಕಾಲ ಕಾರ್ಯನಿರ್ವಹಿಸಲಿದ್ದು, ಬುಧವಾರ ಮತ್ತೆ ಸುಪ್ರೀಂಕೋರ್ಟ್ ಆರಂಭವಾಗಲಿದೆ. ನ.13ರಂದು ಅನರ್ಹ ಶಾಸಕರ ತೀರ್ಪು ಕೂಡಾ ಪ್ರಕಟವಾಗಲಿದೆ. ಇದನ್ನು ಹೊರತುಪಡಿಸಿ ಕೆಲವು ಮುಖ್ಯವಾದ ತೀರ್ಪು ಪ್ರಕಟವಾಗಲು ಬಾಕಿ ಇದೆ.
Related Articles
Advertisement
ರಾಫೇಲ್ ಪುನರ್ ಪರಿಶೀಲನಾ ಅರ್ಜಿ:
ರಾಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆಯ ವಿಚಾರದಲ್ಲಿ ಪ್ರಧಾನಿ ಸಚಿವಾಲಯ ಹಸ್ತಕ್ಷೇಪ ನಡೆಸಿದೆ ಎಂದು ಆರೋಪಿಸಲಾಗಿದೆ. ರಾಫೇಲ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಈ ವಿಷಯದ ಬಗ್ಗೆ ನ್ಯಾಯಾಂಗ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು.
ಏತನ್ಮಧ್ಯೆ ರಾಫೇಲ್ ಖರೀದಿಯಲ್ಲಿ ಪ್ರಧಾನಿ ಸಚಿವಾಲಯ ಹಸ್ತಕ್ಷೇಪ ನಡೆಸಿದೆ ಎಂಬುದಾಗಿ ರಕ್ಷಣಾ ಸಚಿವಾಲಯದಿಂದ ಸೋರಿಕೆಯಾದ ದಾಖಲೆಯ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯ ತೀರ್ಪು ಪ್ರಕಟವಾಗಲು ಬಾಕಿ ಇದೆ.
ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ:
ರಾಫೇಲ್ ಒಪ್ಪಂದದ ವಿಚಾರದಲ್ಲಿ ಸುಪ್ರೀಂಕೋರ್ಟ್ ಕೂಡಾ ಚೌಕಿದಾರ್ ಚೋರ್ ಹೈ ಎಂಬುದನ್ನು ಒಪ್ಪಿಕೊಂಡಿತ್ತು ಎಂಬುದಾಗಿ ರಾಹುಲ್ ಗಾಂಧಿ ಪತ್ರಿಕಾ ಹೇಳಿಕೆ ನೀಡಿದ್ದರು. ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ರಾಹುಲ್ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದರು.
ರಾಫೇಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಯಾವುದೇ ರಾಜಕೀಯವಾದ ಹೇಳಿಕೆಯನ್ನು ನೀಡಿಲ್ಲ ಎಂದು ಸಿಜೆಐ ರಂಜನ್ ಗೋಗೊಯಿ ಸ್ಪಷ್ಟಪಡಿಸಿದ್ದರು. ಈ ಬಗ್ಗೆ ಕ್ಷಮಾಪಣೆ ಕೇಳಿ ರಾಹುಲ್ ಸುಪ್ರೀಂಗೆ ಅಫಿಡವಿತ್ ಸಲ್ಲಿಸಿದ್ದರು. ಸಿಜೆಐ ಗೋಗೊಯಿ, ಜಸ್ಟೀಸ್ ಎಸ್ ಕೆ ಕೌಲ್ ಮತ್ತು ಜಸ್ಟೀಸ್ ಕೆಎಂ ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು.
ಹಣಕಾಸು ಕಾಯ್ದೆ 2017 ಮತ್ತು ಟ್ರಿಬ್ಯೂನಲ್ಸ್ ಮೇಲೆ ಕೇಂದ್ರದ ಹಕ್ಕು ಸ್ಥಾಪನೆ:
ವಿವಿಧ ಟ್ರಿಬ್ಯೂನಲ್ಸ್ ಗಳ ಸದಸ್ಯರ ನೇಮಕದ ವಿಚಾರದಲ್ಲಿ ಕೇಂದ್ರ ಸರ್ಕಾರ ಕಾನೂನು ಉಲ್ಲಂಘಿಸಿ ಆಯ್ಕೆ ಮಾಡುವ ಮೂಲಕ ಟ್ರಿಬ್ಯೂನಲ್ ಗಳ ಮೇಲೆ ಹಕ್ಕು ಸಾಧಿಸಲು ಮುಂದಾಗಿದೆ ಎಂದು ಆರೋಪಿಸಿ ದಾಖಲಾಗಿದ್ದ 18 ಅರ್ಜಿಗಳ ವಿಚಾರಣೆಯನ್ನು ಸಿಜೆಐ ರಂಜನ್ ಗೋಗೊಯಿ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ ನಡೆಸಿ ಏಪ್ರಿಲ್ ನಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು.
ಹಸಿರು ಪೀಠ, ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್, ಆರ್ಮ್ಡ್ ಫೋರ್ಸ್ ಟ್ರಿಬ್ಯೂನಲ್ ಸೇರಿದಂತೆ 17 ಟ್ರಿಬ್ಯೂನಲ್ಸ್ ಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಾಗಿವೆ. ಹೈಕೋರ್ಟ್ ಜಡ್ಜ್ ಗಳ ಸೇವೆಯ ಷರತ್ತಿನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ ಕೇಂದ್ರ ಸರ್ಕಾರ ಟ್ರಿಬ್ಯೂನಲ್ಸ್ ಗಳ ಮೇಲೆ ಹಕ್ಕು ಸ್ಥಾಪಿಸಲು ಮುಂದಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ದೂರಲಾಗಿದೆ.
2017ರ ಹಣಕಾಸು ಕಾಯ್ದೆ(ಹಣಕಾಸು ಮಸೂದೆ)ಯನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿತ್ತು. ಟ್ರಿಬ್ಯೂನಲ್ಸ್ ಸದಸ್ಯರಿಗೆ ನೀಡುವ ಸಂಬಳ ಮತ್ತು ಭತ್ಯೆ ಪಾವತಿ ಬಗೆಗಿನ ನಿಬಂಧನೆ ಬಗ್ಗೆ ವಾದ ಮಂಡಿಸಲಾಗಿತ್ತು. ಕೇಂದ್ರದ ನಿಬಂಧನೆ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.
ಆರ್ ಟಿಐ ಕಾಯ್ದೆಯಡಿ ಸಿಜೆಐ ಕಚೇರಿ?
ಸುಪ್ರೀಂಕೋರ್ಟ್ ನೀಡುವ ಎಲ್ಲಾ ತೀರ್ಪು ಪಾರದರ್ಶಕವಾಗಿದೆ ಎಂಬುದನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಿಜೆಐ ಕಚೇರಿ ಕೂಡಾ ಆರ್ ಟಿಐ ಅಡಿ ಬರಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. 2010ರಲ್ಲಿಯೇ ಸುಪ್ರೀಂಕೋರ್ಟ್ ಸಾರ್ವಜನಿಕ ಉತ್ತರದಾಯಿತ್ವ ಹೊಂದಿದ್ದು, ಸಿಜೆಐ ಕಚೇರಿ ಕೂಡಾ ಆರ್ ಟಿಐ ಕಾಯ್ದೆಯಡಿ ಬರಬೇಕಾಗಿದೆ ಎಂದು ದೆಹಲಿ ಹೈಕೋರ್ಟ್ ತೀರ್ಪನ್ನು ನೀಡಿತ್ತು. ಈ ತೀರ್ಪು ನ್ಯಾಯಾಂಗ ಪ್ರಕ್ರಿಯೆ ಮೇಲೆ ಸಮಸ್ಯೆ ತಂದೊಡ್ಡಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್ ಪ್ರಧಾನ ಕಾರ್ಯದರ್ಶಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದು, ತೀರ್ಪು ಹೊರಬೀಳುವ ನಿರೀಕ್ಷೆ ಇದೆ.