Advertisement

ತ್ಯಾಜ್ಯ ಮರುಬಳಕೆಗೆ ಕ್ರಮ: ಮುರುಗನ್‌

02:29 PM May 07, 2022 | Team Udayavani |

ಬಳ್ಳಾರಿ: ಜೆಎಸ್‌ಡಬ್ಲ್ಯು ಸಂಸ್ಥೆ ತನ್ನ ವಿಜಯನಗರ ಸಂಯೋಜಿತ ಉಕ್ಕು ಸ್ಥಾವರದಲ್ಲಿ ಉತ್ಪತ್ತಿಯಾಗುವ ಎಲ್ಲ ಬಗೆಯ ತ್ಯಾಜ್ಯವನ್ನು ಸಂಪೂರ್ಣ ಸಂಸ್ಕರಿಸಿ ಮರುಬಳಕೆ ಮಾಡುತ್ತಿದೆ ಎಂದು ವಿಜಯನಗರ ಉಕ್ಕು ಸ್ಥಾವರದ ಅಧ್ಯಕ್ಷ ಪಿ.ಕೆ. ಮುರುಗನ್‌ ತಿಳಿಸಿದರು.

Advertisement

ಜಿಲ್ಲೆಯ ತೋರಣಗಲ್ಲಿನ ಒಪಿಜೆ ಸೆಂಟರ್‌ ನಲ್ಲಿ ಶುಕ್ರವಾರ ಜೆಎಸ್‌ಡಬ್ಲ್ಯು ಫೌಂಡೇಶನ್‌ ಸಹಯೋಗದೊಂದಿಗೆ ಸ್ಥಳೀಯ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಸ್ಕರಿಸಿ ತಯಾರಿಸಿದ ಹಲವು ಬಗೆಯ ಗೃಹೋಪಯೋಗಿ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಜೆಎಸ್‌ಡಬ್ಲ್ಯು ಸಂಸ್ಥೆ ತನ್ನ ಸ್ಥಾವರದಲ್ಲಿ ಉತ್ಪತ್ತಿಯಾಗುವ ಎಲ್ಲ ಬಗೆಯ ದ್ರವ ಮತ್ತು ಘನ ತ್ಯಾಜ್ಯ ಸಂಪೂರ್ಣವಾಗಿ ಮರು ಸಂಸ್ಕರಣೆಯಾಗಿ, ಮರು ಬಳಕೆಯಾಗಬೇಕೆಂದು ನಿರಂತರವಾಗಿ ಹೊಸ ಆವಿಷ್ಕಾರ ಮತ್ತು ಯೋಜನೆಗಳನ್ನು ಕೈಗೊಂಡಿದ್ದು, ಈ ದಿಸೆಯಲ್ಲಿ ಸಂಸ್ಥೆ ದೇಶದಲ್ಲಿನ ಇತರೆ ಉಕ್ಕು ಕಾರ್ಖಾನೆಗಳಿಗಿಂತಲೂ ಅಗ್ರ ಪಂಕ್ತಿಯಲ್ಲಿದೆ ಎಂದು ತಿಳಿಸಿದರು.

ಸಂಸ್ಥೆಯು ಈಗಾಗಲೇ ಬಳಸಿ ಬಿಸಾಡಿದ ಏಕಬಳಕೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕಲ್ಲಿದ್ದಲಿಗೆ ಪರ್ಯಾಯ ಇಂಧನವಾಗಿ ಉಷ್ಣ ವಿದ್ಯುತ್‌ ಮತ್ತು ಸಿಮೆಂಟ್‌ ಉತ್ಪಾದನಾ ಸ್ಥಾವರಗಳಲ್ಲಿ ಉರುವಲು ಇಂಧನವಾಗಿ ಬಳಸುತ್ತಿದ್ದು, ಇದು ವಾತಾವರಣದಲ್ಲಿ ಇಂಗಾಲದ ಹೊರ ಸೂಸುವಿಕೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಿ, ಪರಿಸರ ಸಂರಕ್ಷಣೆಗೆ ಸಹಕಾರಿಯಾಗಿದೆ ಎಂದರು.

ಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸುವಲ್ಲಿ ಪ್ರತಿ ವ್ಯಕ್ತಿಯೂ ಜವಬ್ದಾರಿ ಹೊರಬೇಕಿದ್ದು, ಈ ಹಿನ್ನೆಲೆಯಲ್ಲಿ ಜೆಎಸ್‌ಡಬ್ಲ್ಯು ಸಂಸ್ಥೆ ಪರಿಸರ ಸಂರಕ್ಷಣೆ, ಸುತ್ತಲಿನ ಸಮುದಾಯದ ಅಭಿವೃದ್ಧಿ ಮತ್ತು ಕಾನೂನಿನ ನಿಯಮಾವಳಿ ಪಾಲನೆಗೆ ಸದಾ ಬದ್ಧವಾಗಿದೆ ಎಂದು ತಿಳಿಸಿದರು.

Advertisement

ಸ್ಥಳೀಯ ಸಮುದಾಯದ ಸಬಲೀಕರಣ ಮಾಡುವ ಆಶಯದಿಂದ ಆರಂಭಿಸಲಾದ ‘ಸಖೀ’ ಯೋಜನೆಯಲ್ಲಿ, ತೋರಣಗಲ್ಲು ಸುತ್ತಲಿನ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಜೆಎಸ್‌ಡಬ್ಲ್ಯು ಫೌಂಡೇಶನ್‌ ನೆರವಿನಿಂದ ಬಳಸಿ ಬಿಸಾಡಿದ ಏಕಬಳಕೆ ಪ್ಲಾಸ್ಟಿಕ್‌ನಿಂದ ಉತ್ತಮ ಗುಣಮಟ್ಟದ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ, ಮಾರಾಟ ಮಾಡುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಜೆಎಸ್‌ಡಬ್ಲ್ಯು ಸಂಸ್ಥೆ ಉಪಾಧ್ಯಕ್ಷ ಸಂಜಯ ಹಂಡೂರ, ಹಿರಿಯ ವ್ಯವಸ್ಥಾಪಕ ಶಿವಕುಮಾರ ಮಾಳಗಿ, ಫೌಂಡೇಶನ್‌ ಮುಖ್ಯಸ್ಥ ವಿನೋದ ಪುರೋಹಿತ, ಇಕೋಕಾರಿ ಸಂಸ್ಥೆ ನಂದನ್‌ ಭಟ್‌ ಮತು ಸೌಖ್ಯ ಬೆಳಕು ಸಂಸ್ಥೆ ಅಧ್ಯಕ್ಷೆ ಲಕ್ಷ್ಮೀ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next