ಧಾರವಾಡ: ಮಕ್ಕಳಲ್ಲಿ ಕನಿಷ್ಠ ಕಲಿಕೆಗೆ ಶ್ರಮಿಸದ ಹಾಗೂ ಬೋಧನೆ ಅಲಕ್ಷಿಸುವ ಶಿಕ್ಷಕರ ಮೇಲೆ ಶಿಸ್ತುಕ್ರಮ ಕೈಕೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಎಚ್ಚರಿಸಿದರು.
ನಗರದ ಡಯಟ್‌ದಲ್ಲಿ ಶುಕ್ರವಾರ ಜರುಗಿದ ಸಮಾರಂಭದಲ್ಲಿ 2017-18 ನೇ ಸಾಲಿನ ಚಿಂತನಾಶೀಲ ಚಟುವಟಿಕೆಗಳ ದಾಖಲೀಕರಣದ ಕೃತಿ ದರ್ಪಣ ಬಿಡುಗಡೆಗೊಳಿಸಿ ಮಾತನಾಡಿ, ಶಾಲೆ ನಡೆದ ದಿನಗಳನ್ನು ಸಮರ್ಥವಾಗಿ ಬಳಸಿಕೊಳ್ಳದ, ತಮ್ಮ ಬೋಧನಾ ಅವಧಿ ಸಾರ್ಥಕಗೊಳಿಸಿಕೊಳ್ಳದ ಶಿಕ್ಷಕರ ಮೇಲೆ ಕ್ರಮ ಅನಿವಾರ್ಯ. ಶಾಲಾ ಮಕ್ಕಳಲ್ಲಿ ಸ್ಪಷ್ಟ ಓದು, ಬರಹ, ಲೆಕ್ಕಾಚಾರಗಳ ಕೊರತೆ ಇರುವುದನ್ನು ಕಂಡುಕೊಂಡಿದ್ದು, ವಿದ್ಯಾರ್ಥಿಗಳಲ್ಲಿ ಕನಿಷ್ಠ ಕಲಿಕೆಯೂ ಸಾಧ್ಯವಾಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.
ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ನಿತ್ಯವೂ ಶಾಲಾ ಸಂದರ್ಶನ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇಲಾಖೆಯ ಉಳಿವು ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆಯನ್ನೇ ಅವಲಂಬಿಸಿದೆ. ಸರಕಾರಿ ಶಾಲೆಗಳ ಬಗ್ಗೆ ಮಕ್ಕಳ ಪಾಲಕರಿಗೆ ಹಾಗೂ ಪೋಷಕರಿಗೆ ಭರವಸೆ ಮೂಡಬೇಕಾಗಿದೆ ಎಂದು ಹೇಳಿದರು.
ಕನಿಷ್ಠ ಮೂಲಸೌಕರ್ಯಗಳಿಲ್ಲದೇ ಹುಟ್ಟುವ ಖಾಸಗಿ ಶಾಲೆಗಳ ಬಗ್ಗೆ ಇಲಾಖೆಯ ಮೃದು ಧೋರಣೆ ಸರಕಾರಿ ಶಾಲೆಗಳತ್ತ ಸಾರ್ವಜನಿಕರ ಚಿತ್ತ ಗೌಣವಾಗಲು ಕಾರಣವಾಗಿದೆ. ಶಿಕ್ಷಣದ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗಳ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮಕೈಕೊಳ್ಳಬೇಕು. ಶಿಕ್ಷಣ ವ್ಯಾಪಾರೀಕರಣದತ್ತ ವಾಲುತ್ತಿದ್ದು, ಎಲ್ಲರಿಗೂ ಶಿಕ್ಷಣ ಸಾಧ್ಯವಾಗುತ್ತಿಲ್ಲ. ಶುಲ್ಕರಹಿತ ಶಿಕ್ಷಣ ನೀಡಿಕೆ ಜೊತೆಗೆ ಹಲವಾರು ಉಚಿತ ಯೋಜನೆಗಳು ಜಾರಿಯಲ್ಲಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿಗೆ ಅಗತ್ಯವಾದ ಗುಣಾತ್ಮಕ ಶಿಕ್ಷಣದ ಕೊರತೆ ಸರಕಾರಿ ಶಾಲೆಗಳಲ್ಲಿ ಎದ್ದುಕಾಣುತ್ತಿದೆ ಎಂದರು.
ಸಾ.ಶಿ. ಇಲಾಖೆ ಜಂಟಿ ನಿರ್ದೇಶಕ ಡಾ| ಬಿ.ಕೆ.ಎಸ್.ವರ್ಧನ್ ಡಯಟ್ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಇಂದು ಶೈಕ್ಷಣಿಕ ನಾಯಕತ್ವ ಜಾಗತಿಕ ಮಟ್ಟದಲ್ಲಿ ಚಿಂತನಾ ವಿಷಯವಾಗಿದೆ. 6-14 ವಯೋಮಾನದ ವಿದ್ಯಾರ್ಜನೆಯ ಹಕ್ಕುಳ್ಳ ಮಗು ಗುಣಾತ್ಮಕ ಶಿಕ್ಷಣದಿಂದ ವಂಚಿತವಾಗದಂತೆ ಕಾಳಜಿ ವಹಿಸಬೇಕು ಎಂದರು.
ಡಯಟ್ ಪ್ರಿನ್ಸಿಪಾಲ್ ಸುಮಂಗಳಾ ಕುಚಿನಾಡ, ಡಿಡಿಪಿಐ ಎನ್.ಎಚ್. ನಾಗೂರ ಮಾತನಾಡಿದರು. ಪ್ರಗತಿ ಪರಿಶೀಲನೆ: ಬಳಿಕ ಡಯಟ್ ಹೊಂದಿರುವ ಎಲ್ಲ ವಿಭಾಗಗಳ ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನೆ ಹಾಗೂ ವರದಿ ಮಂಡನೆಯು ವಿಭಾಗಗಳ ನೋಡಲ್ ಅಧಿಕಾರಿಗಳಿಂದ ಜರುಗಿತು. ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾ ಧಿಕಾರಿಗಳು, ಬಿಆರ್‌ಸಿ. ಸಮನ್ವಯಾ ಧಿಕಾರಿಗಳು, ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಸಮೂಹ ಸಂಪನ್ಮೂಲ ವ್ಯಕ್ತಿಗಳು, ಡಯಟ್ ಹಿರಿಯ ಉಪನ್ಯಾಸಕರು,
ಉಪನ್ಯಾಸಕರು ಹಾಗೂ ಸಿಬ್ಬಂದಿ ಇದ್ದರು. ವೈ.ಬಿ. ಬಾದವಾಡಗಿ ಸ್ವಾಗತಿಸಿದರು. ಗುರುಮೂರ್ತಿ ಯರಗಂಬಳಿಮಠ ನಿರೂಪಿಸಿದರು.