Advertisement

ಪ್ರತಿಭಾ ಪಲಾಯನ ತಡೆಗೆ ಕ್ರಮ ಅವಶ್ಯ: ಹೊರಟ್ಟಿ

10:52 AM Apr 14, 2022 | Team Udayavani |

ಹುಬ್ಬಳ್ಳಿ: ಶೈಕ್ಷಣಿಕ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ತೋರುತ್ತಿರುವ ದೇಶದಲ್ಲಿ ಪ್ರತಿಭೆ ಪಲಾಯನವಾಗದಂತೆ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ಆಸ್ಸಾಂನ ಗೌಹಾಟಿಯಲ್ಲಿ ನಡೆಯುತ್ತಿರುವ 8ನೇ ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತ ವಲಯ ಸಮ್ಮೇಳನದಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮತ್ತು ಸಾಮಾನ್ಯ ಒಳಿತಿಗಾಗಿ ಯುವ ಶಕ್ತಿ ಬಳಕೆ ಕುರಿತ ವಿಷಯದಲ್ಲಿ ಮಾತನಾಡಿದ ಅವರು, ಅತ್ಯುತ್ತಮ ಕೌಶಲಯುತ ಸಂಪನ್ಮೂಲ ಸದ್ಬಳಕೆ ಆಗಬೇಕಾಗಿದೆ. ಯುವಪೀಳಿಗೆ ಸರಕಾರದ ಕೋಟಾದಲ್ಲಿ ವೈದ್ಯಕೀಯ, ತಾಂತ್ರಿಕ, ಸ್ನಾತಕೋತ್ತರ ಇನ್ನಿತರೆ ಕೋರ್ಸ್‌ಗಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಪದವಿ ಪಡೆದ ಬಳಿಕ, ದೇಶಕ್ಕೆ ತಮ್ಮ ಸೇವೆ ನೀಡದೆ ವಿದೇಶಗಳಿಗೆ ಹೋಗಿ ಸೇವೆ ಸಲ್ಲಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಕಾಡುತ್ತಿದ್ದು, ದೇಶದ ಬೆಳವಣಿಗೆ ದೃಷ್ಟಿಯಿಂದ ಇದು ಸರಿಯಲ್ಲ. ರೈತರ ಮಕ್ಕಳ ಕೋಟಾದಡಿ ಕೃಷಿ ವಿಜ್ಞಾನ ಪದವಿ ಶಿಕ್ಷಣ ಪ್ರವೇಶ ಪಡೆದು, ಪದವಿ ನಂತರ ಕೃಷಿ ಕಾಯಕಕ್ಕೆ ತೆರಳದೆ ಕಂಪೆನಿಗಳ ನೌಕರರಾಗುತ್ತಿದ್ದಾರೆ ಎಂದರು.

ದೇಶದ ಸೌಲಭ್ಯ, ಸೌಕರ್ಯ, ಸರಕಾರದ ಸಹಾಯ ಪಡೆದು ವಿದ್ಯಾರ್ಜನೆ ನಂತರ ಪ್ರತಿಭೆ ಪಲಾಯನ ಮಾಡುತ್ತಿದ್ದು, ಇದರ ತಡೆಗೆ ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಅವಶ್ಯವಾಗಿದೆ. ಸಾಧಕ ಯುವಪಡೆಯನ್ನು ದೇಶದಲ್ಲಿಯೇ ಉಳಿಸಿಕೊಂಡು ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಅವರ ಸೇವೆ ಬಳಸಿಕೊಳ್ಳಬೇಕಾಗಿದೆ ಎಂದರು.

ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್‌, ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಆಸ್ಸಾಂ ವಿಧಾನಸಭೆ ಸಭಾಧ್ಯಕ್ಷ ಬಿಸ್ವಜೀತ್‌ ದೈಮರಿ, ಆಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಶ್‌Ìಶರ್ಮಾ ಸೇರಿದಂತೆ ದೇಶದ ಎಲ್ಲ ವಿಧಾನಸಭೆ ಸಭಾಧ್ಯಕ್ಷರು-ವಿಧಾನ ಪರಿಷತ್ತು ಸಭಾಪತಿಗಳು ಪಾಲ್ಗೊಂಡಿದ್ದರು ಎಂದು ಸಭಾಪತಿಯವರ ಕಚೇರಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next