Advertisement

ಅತಿಕ್ರಮಣ ತೆರವು ಮಾಡದಿದ್ದರೆ ಕ್ರಮ

03:16 PM Feb 20, 2022 | Shwetha M |

ಮುದ್ದೇಬಿಹಾಳ: ತಾಲೂಕಿನ ಚಲಮಿ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸರ್ಕಾರದ ಜಮೀನು ಅತಿಕ್ರಮಣ ಮಾಡಿಕೊಂಡ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು ವಾರದೊಳಗೆ ಅತಿಕ್ರಮಣ ತೆರುವುಗೊಳಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್‌ ಬಿ.ಎಸ್‌. ಕಡಕಭಾವಿ ಎಚ್ಚರಿಸಿದರು.

Advertisement

ಕಾರ್ಯಕ್ರಮ ನಿಮಿತ್ತ ಗ್ರಾಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿದ್ದ ಅವರು, ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಇದ್ದಿಲು ಭಟ್ಟಿ ಮತ್ತು ಕಟ್ಟಿಗೆ ಸಂಗ್ರಹಿಸಿ ಸ್ಥಳಗಳು ಸರ್ಕಾರಿ ಜಮೀನುಗಳಾಗಿರುವುದನ್ನು, ಯಾವುದೇ ಅನುಮತಿ ಇಲ್ಲದೆ ಕಟ್ಟಿಗೆ ಸಂಗ್ರಹಿಸಿ, ಭಟ್ಟಿ ನಡೆಸುತ್ತಿರುವುದನ್ನು ಪತ್ತೆ ಹಚ್ಚಿ ಇದ್ದಿಲು ಭಟ್ಟಿ ನಡೆಸುವವರನ್ನು ಸ್ಥಳಕ್ಕೆ ಕರೆಸಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಇನ್ನೊಂದು ಪ್ರಕರಣದಲ್ಲಿ ಅಂದಾಜು 2 ಎಕರೆ ಸರ್ಕಾರಿ ಜಾಗ ಅತಿಕ್ರಮಿಸಿ ಅನ್ನಪೂರ್ಣೇಶ್ವರಿ ಅಮ್ಮನವರ ಶಕ್ತಿಮಠದ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕಟ್ಟಡವೊಂದನ್ನು ಕಟ್ಟಲಾಗುತ್ತಿರುವುದನ್ನು ಕೆಲವು ಗ್ರಾಮಸ್ಥರ ದೂರಿನ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು.

ತಹಶೀಲ್ದಾರ್‌ ಅವರು ದೇವರ ವಿಷಯದಲ್ಲಿ ಸ್ವಲ್ಪ ಪ್ರಮಾಣದ ಜಾಗದಲ್ಲಿ ಕಟ್ಟಡ ಕಟ್ಟಿ ಪೂಜೆ, ಪುನಸ್ಕಾರ ನಡೆಸಿದಲ್ಲಿ ಮಾನವೀಯ ನೆಲೆಗಟ್ಟಿನ ಮೇಲೆ ಪರಿಗಣಿಸಬಹುದು, ಆದರೆ 2 ಎಕರೆಯಷ್ಟು ಜಾಗದಲ್ಲಿ ವಿಶಾಲವಾದ ಕಟ್ಟಡ ಕಟ್ಟಲು ಅನುಮತಿ ಕೊಟ್ಟವರು ಯಾರು? ಈಗಾಗಲೇ ಮಠದ ಹೆಸರಿನಲ್ಲಿ ಒಂದು ಸಣ್ಣ ಕಟ್ಟಡ ಇರುವುದು ಸರಿ ಆದರೆ ಮತ್ತೂಂದು ದೊಡ್ಡ ಕಟ್ಟಡದ ಅವಶ್ಯಕತೆ ಏನಿದೆ? ಸರ್ಕಾರಿ ಜಮಿನು ಅತಿಕ್ರಮಿಸುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಕೂಡಲೇ ಕಟ್ಟಡದ ಕೆಲಸ ನಿಲ್ಲಿಸಿ ಅತಿಕ್ರಮಣ ತೆರುವುಗೊಳಿಸಿಕೊಳ್ಳಬೇಕು ಎಂದು ತಿಳಿಸಿ ಈ ಬಗ್ಗೆ ಕ್ರಮದ ಜವಾಬ್ದಾರಿಯನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ವಹಿಸಿಕೊಟ್ಟರು.

ನಂತರ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಅವರು 30ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆ ಅಡಿ ವಿವಿಧ ಸೌಲಭ್ಯಗಳ ಮಾಸಾಶನ ಅರ್ಜಿಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಆದೇಶ ಪತ್ರ ವಿತರಿಸಿದರು. ಆರೋಗ್ಯ ಇಲಾಖೆಯಿಂದ ಮಾಸ್ಕಿಟೋ ನೆಟ್‌ ಸೇರಿ ವಿವಿಧ ಆರೋಗ್ಯ ಸೌಲಭ್ಯ ವಿತರಿಸಲಾಯಿತು.

Advertisement

ಈ ಸಂದರ್ಭ ಸ್ಮಶಾನಕ್ಕೆ ಜಮೀನು ಒದಗಿಸುವುದು, ರೇಷನ್‌ ಕಾರ್ಡ್‌ ಮಾಡಿಕೊಡುವುದು, ಮಾಸಾಶನ ಮಂಜೂರಿಸುವುದು, ಗ್ರಾಮದಲ್ಲಿ ಮೂಲ ಸೌಕರ್ಯ ಒದಗಿಸುವುದು ಸೇರಿ ಹಲವು ಅರ್ಜಿಗಳು ಸಲ್ಲಿಕೆಯಾದವು. ಎಲ್ಲವುಗಳನ್ನು ಕಂದಾಯ ಇಲಾಖೆಯ ಸಿಬ್ಬಂದಿ ಸ್ವೀಕರಿಸಿ ಅವುಗಳಿಗೆ ಹಿಂಬರಹ ನೀಡುವುದರ ಜೊತೆಗೆ ಎಲ್ಲ ದಾಖಲೆ ಇದ್ದ ಅರ್ಜಿಗಳನ್ನು ಸ್ಥಳದಲ್ಲೇ ವಿಲೇ ಮಾಡಿದರು. ಇನ್ನುಳಿದವುಗಳನ್ನು ಪರಿಶೀಲನೆಯ ನಂತರ ವಿಲೇ ಮಾಡುವುದಾಗಿ ತಿಳಿಸಿದರು.

ತಾಪಂ ಇಒ ಶಿವಾನಂದ ಹೊಕ್ರಾಣಿ, ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು, ಗ್ರಾಪಂ ಕಚೇರಿ ಸಿಬ್ಬಂದಿ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಸ್ಥಳೀಯ ಮುಖಂಡರು ಸೇರಿ ಹಲವರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ತಹಶೀಲ್ದಾರ್‌ ಅವರು ಅಧಿಕಾರಿಗಳ ತಂಡದ ಸಮೇತ ಗ್ರಾಮದಲ್ಲೆಲ್ಲ ಸಂಚರಿಸಿ ಅಗತ್ಯ ಮಾಹಿತಿ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next