Advertisement

ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕ್ರಮ

06:49 PM Oct 02, 2020 | Team Udayavani |

ಬೀದರ: ಹೆಚ್ಚಿನ ಮಳೆಯಿಂದಾಗಿ ಕೆರೆ ಮತ್ತು ಬಾವಿಗಳು ತುಂಬಿಕೊಂಡಿವೆ. ರಸ್ತೆಗಳು ಹಾಳಾಗಿದ್ದು, ಚರಂಡಿಗಳು ಅಲ್ಲಲ್ಲಿ ತುಂಬಿಕೊಂಡಿವೆ. ಈ ಬಗ್ಗೆ ಪಿಡಿಒಗಳು ಗಮನ ಕೊಡುತ್ತಿಲ್ಲವೆಂಬ ದೂರು ಬರುತ್ತಿವೆ. ಪಿಡಿಒಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಯಾದಗಿರಿ ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಎಚ್ಚರಿಸಿದ್ದಾರೆ.

Advertisement

ಗ್ರಾಮಗಳಲ್ಲಿ ಚರಂಡಿಗಳನ್ನು ಶುಚಿಗೊಳಿಸದೇ ಇದ್ದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುವುದಲ್ಲದೇ ಮಲೇರಿಯಾ, ಡೆಂಘೀಯಂತಹ ವಿವಿಧ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸರಿಯಾಗಿ ಕರ್ತವ್ಯ ನಿರ್ವಹಿಸದ ಪಿಡಿಒಗಳನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಅಮಾನತುಮಾಡಲು ಕ್ರಮ ವಹಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕುಡಿಯುವ ನೀರಿನ ಬಾವಿಗಳಿಗೆ ಬ್ಲೀಚಿಂಗ್‌ ಪೌಡರ್‌ ಹಾಕಬೇಕು. ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛ ಗೊಳಿಸಬೇಕು. ಗ್ರಾಮ ಗಳಲ್ಲಿ ಕೊಳಚೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸ ಬೇಕು. ಸಾರ್ವಜನಿಕರು ಓಡಾಡುವ ರಸ್ತೆಗಳಲ್ಲಿ ಕೆಸರು ತುಂಬಿಕೊಂಡಿದ್ದರೆ ಕೂಡಲೇ ಸರಿಪಡಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 10-12 ಪಿಡಿಒಗಳ ವಿರುದ್ಧ ಕರ್ತವ್ಯ ನಿರ್ಲಕ್ಷ್ಯದ ದೂರುಗಳಿವೆ. ಮುಂದಿನ ದಿನಗಳಲ್ಲಿ ದೂರುಗಳು ಪುನರಾವರ್ತನೆಯಾದಲ್ಲಿ ಅಂಥವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಅಮಾನತು ಮಾಡಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಧಿಕಾರಿಗಳು ಜನಹಿತದ ದೃಷ್ಟಿಕೋನದಿಂದ ಸೇವೆ ಸಲ್ಲಿಸಬೇಕು. ಗ್ರಾಮಗಳಿಗೆ ಪಿಡಿಒಗಳು ಭೇಟಿ ಕೊಡದಿದ್ದಲ್ಲಿ, ಮೂಲಭೂತ ಸೌಕರ್ಯ ಒದಗಿಸಲು ವಿಫಲರಾದಲ್ಲಿತಮಗೆ ದೂರು ನೀಡುವಂತೆ ಸಚಿವರು ಸಾರ್ವಜನಿಕರಲ್ಲಿ ಕೋರಿದ್ದಾರೆ.

ಶೀಘ್ರ ಬೆಳೆ ಹಾನಿ ಪರಿಹಾರ ಒದಗಿಸಿ :

Advertisement

ಬೀದರ: ಅತಿವೃಷ್ಟಿಯಿಂದಾಗಿ ತೋಟಗಾರಿಕೆ ಬೆಳೆಗಳನ್ನು ಕಳೆದು ಕೊಂಡಿರುವ ಜಿಲ್ಲೆಯ ರೈತರಿಗೆ ಶೀಘ್ರ ಪರಿಹಾರ ಕಲ್ಪಿಸಲು ಕ್ರಮ ವಹಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಮನವಿ ಮಾಡಿದ್ದಾರೆ. ಈ ಕುರಿತು ತೋಟಗಾರಿಕೆ ಇಲಾಖೆ ಸಚಿವ ನಾರಾಯಣ ಗೌಡ ಅವರಿಗೆ ಪತ್ರ ಬರೆದಿರುವ ಅವರು, ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆಗಳಾದ ಟೊಮ್ಯಾಟೋ, ಶುಂಠಿ,ಪಪ್ಪಾಯಿ, ಬಾಳೆ ಸೇರಿ ಅನೇಕ ಬೆಳೆಗಳು ಹಾನಿಯಾಗಿ ಕೃಷಿಕರು ಕಂಗಾಲಾಗಿದ್ದಾರೆ. ಜಿಲ್ಲೆಯ 21,600 ಹೆಕ್ಟೇರ್‌ ತೋಟಗಾರಿಕೆ ಜಮೀನಿನ ಪೈಕಿ 5 ಸಾವಿರ ಹೆಕ್ಟೇರ್‌ ಬೆಳೆ ಹಾಳಾಗಿದೆ. ಕಳೆದ 8-10 ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ಜಿಲ್ಲೆಯ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಬೆಳೆ ಹಾನಿ ಸಮೀಕ್ಷೆ ಕೈಗೊಂಡು ಬೆಳೆಗೆ ಸೂಕ್ತ ಪರಿಹಾರ ಒದಗಿಸಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next