ಬಸವನಬಾಗೇವಾಡಿ: ತಾಲೂಕಿನ ರೈತರಿಗೆ ಸಮರ್ಪಕವಾದ ಬೀಜ-ರಸಗೊಬ್ಬರ ಪೂರೈಕ್ಕೆ ಮಾಡಬೇಕು. ಒಂದು ವೇಳೆ ರೈತರಿಗೆ ಹೆಚ್ಚಿನ ದರದಲ್ಲಿ ಬೀಜ-ರಸಗೊಬ್ಬರ ಮಾರಾಟ ಮಾಡಿದಲ್ಲಿ, ಹಂತವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್. ಯರಝರಿ ಹೇಳಿದರು.
ಬುಧವಾರ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಕೆಲ ರೈತರಿಂದ ಹೆಚ್ಚಿನ ದರದಲ್ಲಿ ಬೀಜ, ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿದ್ದು, ಕೃಷಿ ಪರಿಕರಣ ಮಾರಾಟಗಾರರು ಸರ್ಕಾರ ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡಬೇಕು. ಒಂದು ವೇಳೆ ರೈತರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದಲ್ಲಿ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾರಾಟಗಾರರು ತಮ್ಮ ಮಳಿಗೆಗಳಲ್ಲಿ ರೈತರಿಗೆ ಕಾಣುವ ಹಾಗೆ ದರಪಟ್ಟಿ ಹಾಗೂ ದಾಸ್ತಾನು ಲಭ್ಯತೆಯ ಫಲಕಗಳನ್ನು ಕಡ್ಡಾಯವಾಗಿ ಹಾಕಬೇಕು. ಇಲಾಖೆ ನಿಯಮ ಉಲ್ಲಂಘನೆ ಮಾಡಿದಲ್ಲಿ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಿದರು.
ರಸಗೊಬ್ಬರ ನಿಯಂತ್ರಣ ಕಾಯ್ದೆ ಅನುಸಾರ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಪರವಾನಗಿ ಪ್ರಮಾಣ ಪತ್ರ ಪಡೆದಿರಬೇಕು. ಪ್ರತಿ ತಿಂಗಳ ವಹಿವಾಟಿನ ವಿವರಗಳನ್ನು ಇಲಾಖೆಗೆ ಮಾಹಿತಿ ನೀಡಬೇಕು ಎಂದರು.
ಕೃಷಿ ಪರಿಕರ ಮಾರಾಟಗಾರ ಶಾಮರಾವ್ ಕುಲಕರ್ಣಿ ಮಾತನಾಡಿ, ರಸಗೊಬ್ಬರಗಳನ್ನು ರೈತರಿಗೆ ನಿಗದಿತ ದರದಲ್ಲಿ ಮಾರಾಟ ಮಾಡುವ ಭರವಸೆ ನೀಡಿದರು. ಬೀಜ ರಸಗೊಬ್ಬರ ಮಾರಾಟಗಾರರ ತಾಲೂಕು ಅಧ್ಯಕ್ಷ ಅಶೋಕ ಕಲ್ಲೂರ, ಮುರುಗೇಶ ನಾಯ್ಕೋಡಿ, ಶಿವಾನಂದ ಚೆಟ್ಟೇರ, ಬಸವರಾಜ ಬಾಗೇವಾಡಿ, ಜಿತೇಂದ್ರ ಅಗರವಾಲ, ಮಹೇಂದ್ರ ಐಹೋಳ್ಳಿ, ಸಂಗಮೇಶ ಉಳ್ಳಾಗಡ್ಡಿ, ಭೀಮಣ್ಣ ಚಟ್ಟೇರ, ಮಲ್ಲು ಗುಡದಿನ್ನಿ, ಬಿ.ಎಂ. ಶಾಮಗೊಂಡ, ಶಿವಾನಂದ ಸಜ್ಜನ, ದಿನೇಶ ಗೊಂಗಡಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಚಿದಾನಂದ ಹಿರೇಮಠ ಸೇರಿದಂತೆ ಅನೇಕರು ಇದ್ದರು.