ಯಾದಗಿರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೈಗೊಳ್ಳಲಾಗಿರುವ ಕಟ್ಟಡಗಳು, ಭವನಗಳು ಸೇರಿದಂತೆ ವಿವಿಧ ನಿರ್ಮಾಣ ಕಾಮಗಾರಿಗಳಲ್ಲಿ ಕೆಲವು ಇಲಾಖೆಗಳ ಪ್ರಗತಿ ಕುಂಠಿತವಾಗಿದ್ದು, ಆಯಾ ಇಲಾಖೆ ಮುಖ್ಯಸ್ಥರು ಕೂಡಲೇ ಪೂರ್ಣಗೊಳಿಸದಿದ್ದಲ್ಲಿ ಸಂಬಂ ಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಡಿಸಿ ಡಾ| ರಾಗಪ್ರಿಯಾ ಎಚ್ಚರಿಕೆ ನೀಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕಕ ಪ್ರದೇಶಾಭಿವೃದ್ಧಿ ಮಂಡಳಿಯ ಮಾಸಿಕ ಪ್ರಗತಿ ಪರಿಶೀಲಾನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಗದಿತ ಅವಧಿಯೊಳಗೆ ಪೂರ್ಣಗೊಂಡ ಕಾಮಗಾರಿ ಆನ್‌ಲೈನ್‌ನಲ್ಲಿ ನಮೂದಿಸುವಂತೆ ಡಿಸಿ ನಿರ್ದೇಶನ ನೀಡಿದರು. ಕಾಮಗಾರಿ ನಿರ್ವಹಣೆಗೆ ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಳ್ಳಬೇಕು. ಇದೀಗ ಮಳೆ ನಿಂತಿದ್ದು, ಕಾಮಗಾರಿ ಆರಂಭಿಸಬಹುದು ಎಂದು ಸಲಹೆ ನೀಡಿದರು.
ಲೋಕೋಪಯೋಗಿ ಇಲಾಖೆ ಮೂಲಕ ಕೆಕೆಆರ್‌ಡಿಬಿಯಿಂದ ಇದೂವರೆಗೂ ಕೈಗೊಳ್ಳಲಾದ 513 ಕಾಮಗಾರಿಗಳಲ್ಲಿ 438 ಪೂರ್ಣಗೊಂಡಿವೆ, 65 ಕಾಮಗಾರಿಗಳು ಪ್ರಗತಿಯಲ್ಲಿದ್ದು ಉಳಿದ ಕಾಮಗಾರಿ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ದೇವಿದಾಸ್ ಚಹ್ವಾಣ ಸಭೆಗೆ ಮಾಹಿತಿ ನೀಡಿದರು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಲಿಮಿಟೆಡ್‌ನಿಂದ 378 ಕಾಮಗಾರಿ ಕೈಗೊಂಡಿದ್ದು, ಅವುಗಳಲ್ಲಿ 265 ಪೂರ್ಣಗೊಂಡಿವೆ, 113 ಪ್ರಗತಿಯಲ್ಲಿವೆ ಎಂದು ಕಾರ್ಯ ಪಾಲಕ ಇಂಜಿನಿಯರ್ ಸಲೀಂ ಅಹಮದ್ ತಿಳಿಸಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ 916 ವಿವಿಧ ಕಾಮಗಾರಿ ನಿರ್ವಹಿಸಲಾಗುತ್ತಿದ್ದು, 721 ಈಗಾಗಲೇ ಪೂರ್ಣಗೊಂಡಿವೆ. 124 ಕಾಮಗಾರಿಗಳು ಪ್ರಗತಿಯಲ್ಲಿವೆ ಉಳಿದವು ಆರಂಭವಾಗಬೇಕು ಎಂದು ಕಾರ್ಯಪಾಲಕ ಇಂಜಿನಿಯರ್ ಮುಕ್ತರ್ ಮಾಹಿತಿ ನೀಡಿದರು.
ಕೆಕೆಆರ್‌ಡಿಬಿಯಿಂದ ಜಿಲ್ಲೆಯಲ್ಲಿ ಬಾಕಿ ಉಳಿದ ಕಾಮಗಾರಿ ಅವಧಿಯೊಳಗೆ ಪೂರ್ಣಗೊಳಿಸಬೇಕು, ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು, ಕಾಲಕಾಲಕ್ಕೆ ಕೆಕೆಆರ್‌ಡಿಬಿ ನೀಡುವ ಮಾರ್ಗದರ್ಶನ ಪಾಲಿಸಬೇಕು ಎಂದು ಡಿಸಿ ತಿಳಿಸಿದರು. ಈ ವೇಳೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು, ಸಿಬ್ಬಂದಿ ಇದ್ದರು.