Advertisement

ಲಾಕ್‌ಡೌನ್‌ ಉಲ್ಲಂಘಿಸಿದ್ರೆ ಮುಲಾಜಿಲ್ಲದೆ ಕ್ರಮ

06:23 PM Apr 03, 2020 | Suhan S |

ಹರಿಹರ: ದೇವರು, ಧರ್ಮದ ಹೆಸರಲ್ಲಿ ಲಾಕ್‌ ಡೌನ್‌ ನಿಯಮ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌ ಈಶ್ವರಪ್ಪ ಸೂಚನೆ ನೀಡಿದರು.

Advertisement

ನಗರಸಭಾ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ವೈರಾಣು ಹರಡದಂತೆ ತಡೆಯಲು ಸಾಮೂಹಿಕ ಪ್ರಾರ್ಥನೆ ಸೇರಿದಂತೆ ಜನರು ಗುಂಪಾಗಿ ಸೇರದಂತೆ ಆದೇಶಿಸಿದ್ದರೂ ಕೆಲವರು ಪ್ರಾರ್ಥನೆ ಮಾಡಲು ಮುಂದಾಗುತ್ತಿದ್ದಾರೆ. ಇದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಯಾವುದೇ ಜಾತಿ, ಧರ್ಮದವರು ಹಬ್ಬ, ಹರಿದಿನ, ಜಾತ್ರೆ, ನಮಾಜು, ಪ್ರಾರ್ಥನೆ ಮಾಡಿದರೂ ಅಂತಹವರ ವಿರುದ್ಧ ಮುಲಾಜಿಲ್ಲದೆ, ಯಾರ ಒತ್ತಡಕ್ಕೂ ಮಣಿಯದೆ ಕ್ರಮ ಕೈಗೊಳ್ಳಿ ಎಂದರು.

ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಬೇಕಿಲ್ಲ, ಆದಷ್ಟು ಅಂತರ ಕಾಯ್ದುಕೊಂಡು ಖರೀದಿಸಿದರೆ ಸಾಕು. ಯಾರೂ ಸಹ ಆಹಾರವಿಲ್ಲದೆ ಬಳಲಬಾರದು. ಗ್ರಾಮಸ್ಥರಿಗೂ ಎಲ್ಲಾ ಅಗತ್ಯ ವಸ್ತು, ಆಸ್ಪತ್ರೆ ಸೇವೆ ಸಿಗುವಂತೆ ನೋಡಿಕೊಳ್ಳಬೇಕು. ನಗರ ಪ್ರದೇಶಗಳ ಸ್ಲಂ ವಾಸಿಗಳಿಗೆ ಉಚಿತ ಹಾಲು ವಿತರಿಸಲಾಗುತ್ತಿದೆ. ಹಕ್ಕಿಜ್ವರದ ಹಿನ್ನೆಲೆಯಲ್ಲಿ ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಳಿ ಮಾಂಸ, ಮೊಟ್ಟೆ ಮಾರಾಟವನ್ನು ನಿಷೇಧಿಸಲಾಗಿತ್ತು. ಶಿವಮೊಗ್ಗದಲ್ಲೀಗ ನಿಯಮವನ್ನು ಸಡಿಲಗೊಳಿಸಿದ್ದು, ಪ್ರಯೋಗಾಲಯದ ವರದಿ ಬಂದ ಮೇಲೆ ದಾವಣಗೆರೆಯಲ್ಲೂ ಮಾಂಸ, ಮೊಟ್ಟೆ ಮಾರಾಟಕ್ಕೆ ಅವಕಾಶ ಕೊಡಲಾಗುವುದು. ಖಾಸಗಿ ಆಸ್ಪತ್ರೆ, ಕ್ಲಿನಿಕ್‌ ತೆರೆಯಲು ಈಗಾಗಲೇ ನೋಟಿಸ್‌ ನೀಡಲಾಗಿದೆ. ಸೇವೆ ಆರಂಭಿಸದ ವೈದ್ಯರ ಹಾಗೂ ಆಸ್ಪತ್ರೆಯ ಲೈಸೆನ್ಸ್‌ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬಿಳಿಗಿ ಮಾತನಾಡಿ, ಮಾಸ್ಕ್, ಸ್ಯಾನಿಟೈಸರ್‌ ಕೊರತೆಯಾದ ಹಿನ್ನೆಲೆಯಲ್ಲಿ ಹರಿಹರದ ಪಿ.ಎಸ್‌. ಕೆ. ಫಾರಂನವರೊಂದಿಗೆ ಮಾತನಾಡಿ ಲೀಟರ್‌ ಗೆ 600 ರೂ. ಇರುವ ಸ್ಯಾನಿಟೈಸರ್‌ ಅನ್ನು ಕೇವಲ 250 ರೂ.ಗೆ ಪೂರೈಸಲು ಒಪ್ಪಿಸಲಾಗಿದೆ ಎಂದರು.

ಡಿವೈಎಸ್ಪಿ ಮಂಜುನಾಥ ಗಂಗಲ್‌ ಮಾತನಾಡಿ, ನಗರದ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದ 9 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಬೈಕ್‌ಗಳಲ್ಲಿ ತಿರುಗುತ್ತಾ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಕೆಲ ಪುಂಡರ ಮೇಲೆ ಕೇಸ್‌ ದಾಖಲು ಮಾಡಿ ಜೈಲಿಗೆ ಕಳಿಸಲಾಗಿದೆ. ಪೊಲೀಸ್‌ ಸಿಬ್ಬಂದಿಗಳಿಂದಲೂ ಕೋವಿಡ್ 19 ವೈರಸ್‌ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

Advertisement

ನಂತರ ಸಚಿವರು ಗಾಂಧಿ  ಮೈದಾನದಲ್ಲಿ ರೈತರು ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಸಗಟು ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಒಂದೊಂದು ಕೌಂಟರ್‌ ಮಾಡಿರುವುದನ್ನು ವೀಕ್ಷಿಸಿದರು. ಶಾಸಕ ಎಸ್‌. ರಾಮಪ್ಪ, ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಲಕ್ಷ್ಮೀ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next