ಮುಳಬಾಗಿಲು: ಉತ್ತಮ ಸಮಾಜಕ್ಕೆ ಪ್ರತಿಯೊಬ್ಬ ನಾಗರಿಕರು ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಬೇಕಿದ್ದು ಯಾರೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನೂತನ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್‌ರೆಡ್ಡಿ ಎಚ್ಚರಿಕೆ ನೀಡಿದರು.
ಎಚ್ಚರವಾಗಿರಿ: ಮನೆಯ ಬಾಗಿಲಿಗೆ ಒಳಗಡೆಯಿಂದ ಡೋರ್ ಲಾಕ್ ಅಳವಡಿಸಿ ಕಳುವಾಗುವುದನ್ನು ತಪ್ಪಿಸಿ, ಅಪರಿಚಿತರು ಮನೆಗೆ ಬಂದರೆ ಪರೀಕ್ಷಿಸದೇ ಒಳಗೆ ಕರೆದುಕೊಳ್ಳಬಾರದು, ಮಹಿಳೆಯರು ರಸ್ತೆಯಲ್ಲಿ ನಡೆದು ಹೋಗುವಾಗ ನಿಮ್ಮ ಹಿಂದೆ ಮತ್ತು ಮುಂದೆ ಓಡಾಡುವ ಅಪರಿಚಿತರ ಬಗ್ಗೆ ಎಚ್ಚರವಾಗಿರಬೇಕೆಂದರು.
ಡಕಾಯಿತರು ನುಗ್ಗಿದರೆ ಕಾರದ ಪುಡಿ ಎರಚಿ: ನಿಮ್ಮ ಮನೆಯ ಹತ್ತಿರ ಬೆಲೆಬಾಳುವ ಚಿನ್ನದ ಆಭರಣಗಳಿಗೆ ಪಾಲೀಶ್ ಮಾಡುವವರನ್ನು ಟಿವಿ, ಫ್ರಿಜ್ಡ್, ಗ್ಯಾಸ್, ಸ್ಟವ್ ರಿಪೇರಿ ಮಾಡುವವರೆಂದು ಬರುವವರ ಬಗ್ಗೆ ಎಚ್ಚರದಿಂದಿರಿ, ಆಟೋ ರಿಕ್ಷಾ, ಟ್ಯಾಕ್ಸಿಗಳಲ್ಲಿ ಹತ್ತುವ ಮೊದಲು ಅದರ ಸಂಖ್ಯೆ ಗುರುತು ಮಾಡಿಕೊಳ್ಳಿ. ಮನೆಯಲ್ಲಿ ಬೆಲೆ ಬಾಳುವ ಬಂಗಾರ, ಬೆಳ್ಳಿ ಆಭರಣ, ಹಣ ಇಡದೇ ಬ್ಯಾಂಕ್ ಲಾಕರ್‌ನಲ್ಲಿಡಿ, ಮನೆಗಳಿಗೆ-ಅಂಗಡಿಗಳಿಗೆ ಸಿ.ಸಿ ಕ್ಯಾಮೆರಾ ಅಳವಡಿಸಿಕೊಳ್ಳಿ ಒಂದು ವೇಳೆ ಮನೆಗೆ ಅಪರಿಚಿತ ಡಕಾಯಿತರು ನುಗ್ಗಲು ಪ್ರಯತ್ನಿಸಿದರೆ ಕಣ್ಣಿಗೆ ಕಾರದ ಪುಡಿ ಎರಚಿ ಹೊಡೆದು ಹಿಡಿಯಿರಿ ಎಂದು ಹೇಳಿದರು.
ಅಪರಾಧ ಪ್ರಕರಣಕ್ಕೆ ಕಡಿವಾಣ ಹಾಕಿ: ನಿಮ್ಮ ಕಾರು ಅಥವಾ ಜೀಪುಗಳಲ್ಲಿ ವಸ್ತುಗಳನ್ನು ಇಟ್ಟು ಬೀಗ ಹಾಕದೇ ಇರಬೇಡಿ. ಎಟಿಎಂ ಕಾರ್ಡ್ ಹಿಂದೆ ನಿಮ್ಮ ಗುಪ್ತ ಪಿನ್ ಕೋಡನ್ನು ಬರೆಯಬೇಡಿ. ಎಟಿಎಂನಲ್ಲಿ ಹಣ ಪಡೆಯುವಾಗ ಅಪರಿಚಿತರ ಸಹಾಯ ಪಡೆಯಬೇಡಿ. ಮೈಮೇಲೆ ಹೇಸಿಗೆ ಎರಚಿ ಗಮನ ಬೇರೆಡೆ ಸೆಳೆದು ಹಣದ ಚೀಲ/ಪೆಟ್ಟಿಗೆ ಕದಿಯುತ್ತಿರುವ ಕಳ್ಳರ ಬಗ್ಗೆ ಎಚ್ಚರವಿರಲಿ. ಅಪರಿಚಿತರು-ಸಂಯಾಸ್ಪದ ವ್ಯಕ್ತಿಗಳು ದಾಖಲೆಯಿಲ್ಲದೇ ಮೊಬೈಲ್ ಅಥವಾ ಇನ್ನಾವುದೇ ಸ್ವತ್ತಿನ ವಸ್ತುಗಳನ್ನು ಮಾರಾಟ ಮಾಡಲು ಅಥವಾ ಅಡ ಇಡಲು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅಪರಾಧಗಳಿಗೆ ಕಡಿವಾಣ ಹಾಕಬೇಕೆಂದರು.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉತ್ತಮ ಕಾನೂನು ಸುವ್ಯವಸ್ಥೆಗಾಗಿ ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ಮುಖ್ಯವಾಗಿ ಅಪರಾಧಗಳ ತಡೆಗೆ ಅಲ್ಲದೇ ಅಪರಾಧ ಪತ್ತೆಗಾಗಿ ಪೊಲೀಸರು ಸಾಕಷ್ಟು ಕ್ರಮ ಕೈಗೊಳ್ಳುತ್ತಿರುವುದರೊಂದಿಗೆ ಜನರೂ ಸಾಕಷ್ಟು ಜಾಗೃತಿ ವಹಿಸಬೇಕೆಂದರು.
Related Articles
ಕೆಲಸದಲ್ಲಿ ನಿರ್ಲಕ್ಷ್ಯಿಸಿದರೆ ದೂರು ಕೊಡಿ:
ಜಿಲ್ಲೆಯಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ ಕಾಪಾಡುವುದೇ ತಮ್ಮ ಮೂಲ ಉದ್ದೇಶ. ಯಾರೇ ಜನಸಾಮಾನ್ಯರು ಪೊಲೀಸ ಠಾಣೆಗೆ ಬಂದರೂ ಪೊಲೀಸರಿಗೆ ಭಯಪಡದೇ ಕಾನೂನು ಸಲಹೆ ಪಡೆದುಕೊಳ್ಳಬಹುದು, ಒಂದು ವೇಳೆ ಯಾವುದೇ ಪೊಲೀಸರು ತಮ್ಮ ಕೆಲಸ ಮಾಡಿಕೊಡದೇ ನಿರ್ಲಕ್ಷ್ಯಿಸಿದ್ದಲ್ಲಿ ಅವರ ಹೆಸರನ್ನು ತಿಳಿದುಕೊಂಡು ಅವರ ವಿರುದ್ಧ ತಮ್ಮ ಕಚೇರಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು, ಅದರೊಂದಿಗೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಜನಸಾಮಾನ್ಯರೂ ಪೊಲೀಸರು ಸೂಚಿಸುವ ಮುಂಜಾಗ್ರತಾ ಕ್ರಮ ಪಾಲಿಸುತ್ತಾ ಉತ್ತಮ ಸಮಾಜಕ್ಕೆ ಪ್ರತಿಯೊಬ್ಬ ನಾಗರಿಕರು ಪೊಲೀಸರೊಂದಿಗೆ ಸಹಕರಿಸಬೇಕೆಂದರು.
Advertisement