ಬೀದರ: ಜಿಲ್ಲೆಯಲ್ಲಿ ಅನಧಿಕೃತವಾಗಿ ಲೆಟ್ ರೈಟ್ ಕಲ್ಲು ಗಣಿಗಾರಿಕೆ ಮಾಡುವವರು ಒಂದು ವಾರದೊಳಗೆ ಅರ್ಜಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಗೆ ಸಲ್ಲಿಸಿ, ನಿಯಮಾನುಸಾರ ಕಾರ್ಯಾದೇಶ ಪಡೆದುಕೊಳ್ಳಬೇಕು ಎಂದು ಡಿಸಿ ರಾಮಚಂದ್ರನ್ ಆರ್. ತಿಳಿಸಿದ್ದಾರೆ.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ (ಗಣಿ) ಮತ್ತು ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರ ಜಿಲ್ಲಾ ಮರಳು ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಉಪ ಖನಿಜ ನಿಯಾಮಾವಳಿ 2020ರ 3ಎ(ಬಿ)ನಲ್ಲಿ ಲೆಟ್‌ರೈಟ್ ಕಲ್ಲನ್ನು ವ್ಯವಸಾಯದ ಜಮೀನುಗಳಿಂದ ಗಟ್ಟಿ ಕಲ್ಲಿನಿಂದ ಕೂಡಿರುವ ಪ್ರದೇಶದಲ್ಲಿ ನಿಯಮಾನುಸಾರವಾಗಿ ಕಲ್ಲನ್ನು ತೆಗೆಯಲು ಇಲಾಖೆಯಿಂದ ಕಾರ್ಯಾದೇಶ ಪಡೆದು ಕಾರ್ಯನಿರ್ವಹಿಸಬೇಕು ಎಂದು ಅನಧಿಕೃತ ಗಣಿಗಾರಿಕೆ ಮಾಡುವವರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ನಿಯಮಾನುಸಾರ ಕಾರ್ಯಾದೇಶ ಪಡೆಯದೇ ಗಣಿಗಾರಿಕೆ ನಡೆಸಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ವಶಪಡಿಸಿಕೊಂಡಿರುವ ಮರಳನ್ನು ಲೋಕೋಪಯೋಗಿ ಇಲಾಖೆಯಿಂದ ಮಾರಾಟ ಮಾಡಲು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಬಿಳಿ ಮರಳಿಗೆ ಪ್ರತಿ ಟನ್‌ಗೆ 900 ರೂ.ದಂತೆ ಮತ್ತು ಕಪ್ಪು ಮರಳಿಗೆ ಪ್ರತಿ ಟನ್ ಗೆ 500 ರೂ.ಗಳಂತೆ ವಿಲೇವಾರಿ ಮಾಡಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಜಿಲ್ಲೆಯಲ್ಲಿ ಅನಧಿಕೃತವಾಗಿ ಮರಳು ಸಾಗಣೆ ಕಂಡು ಬಂದಲ್ಲಿ ಕ್ರಮ ಜರುಗಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಿ.ಎಲ್. ನಾಗೇಶ ಎಚ್ಚರಿಕೆ ನೀಡಿದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ,ಸಹಾಯಕ ಆಯುಕ್ತ ಗರೀಮಾ ಪನವಾರ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.