ಕಂಪ್ಲಿ: ಕಂಪ್ಲಿ ಮತ್ತು ಹೊಸಪೇಟೆ ತಾಲೂಕಿನ ಖಾಸಗಿ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಸಾಕಷ್ಟು ಯೂರಿಯಾ ರಸಗೊಬ್ಬರ ದಾಸ್ತಾನು ಇದ್ದು, ರಸಗೊಬ್ಬರ ಮಾರಾಟ ಮಳಿಗೆಗಳ ಮಾಲೀಕರು ಕೃತಕ ಅಭಾವ ಸೃಷ್ಟಿಸಿದರೆ ಹಾಗೂ ಅಧಿಕ ಬೆಲೆಗೆ ಮಾರಿದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೊಸಪೇಟೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ನಾಗರತ್ನ ಹುಲಕೋಟಿ ಎಚ್ಚರಿಕೆ ನೀಡಿದರು.
ತಾಲೂಕಿನ ಹಲವಾರು ರೈತರು ದೂರು ನೀಡಿದ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಮಳಿಗೆಗಳಿಗೆ ಹಾಗೂ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ತಾಲೂಕಿನ ಮಾರಾಟಗಾರರು ಯೂರಿಯಾ ರಸಗೊಬ್ಬರದ ಬಗ್ಗೆ ಕೃತಕ ಅಭಾವ ಹಾಗೂ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆನ್ನುವ ದೂರುಗಳು ಬಂದಿದ್ದು ಪಟ್ಟಣದ ಎಂ.ಆರ್. ಟ್ರೇಡಿಂಗ್ ಕಂಪನಿ, ಕೀರ್ತಿ ಆಗ್ರೋ ಏಜನ್ಸಿಸ್, ವೆಂಕಟಕೃಷ್ಣ ಟ್ರೇಡಿಂಗ್ ಕಂಪನಿ, ಶ್ರೀಗುರು ಬಸವೇಶ್ವರ ಟ್ರೇಡಿಂಗ್ ಕಂಪನಿಯ ಅಂಗಡಿ ಮತ್ತು ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪರಿಶೀಲನೆ ಸಂದರ್ಭದಲ್ಲಿ ಯೂರಿಯಾ ದಾಸ್ತಾನು ಹಾಗೂ ದಾಖಲೆಗಳಲ್ಲಿ ವ್ಯತ್ಯಾಸಗಳು ಕಂಡು ಬಂದ ಮಾಲೀಕರಿಗೆ ನೋಟಿಸ್ ನೀಡಲಾಯಿತು. ರೈತರು ಕೇವಲ ಯೂರಿಯಾ ರಸಗೊಬ್ಬರಕ್ಕೆ ಅಂಟಿಕೊಳ್ಳದೆ, ಅಮೋನಿಯಂ ಸಲ್ಫೆಟನ್ನು ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯಾವಾಗಿ ಬಳಕೆ ಮಾಡುವಂತೆ ರೈತರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕಂಪ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಎಸ್. ರೇಣುಕಾರಾಜ್, ರೈತ ಅನುವುಗಾರರಾದ ಅಂಬ್ರಗೌಡ, ಕರಿಬಸವ, ಫಕ್ಕೀರಪ್ಪ ಸೇರಿದಂತೆ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ರಮೇಶ್.ಕೆ., ಸದಸ್ಯ ಮುರಾರಿ ಇದ್ದರು.