Advertisement

ಸಹಕಾರ ಸಂಘಗಳು ತಪ್ಪು ತಿದ್ದಿಕೊಳ್ಳದಿದ್ದರೆ ಕ್ರಮ

09:13 PM Feb 26, 2020 | Lakshmi GovindaRaj |

ಕೆ.ಆರ್‌.ನಗರ: ತಾಲೂಕಿನ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಅವುಗಳ ಉಸ್ತುವಾರಿ ವಹಿಸುವ ಜಿಲ್ಲಾ ಬ್ಯಾಂಕಿನ ಪ್ರತಿನಿಧಿಗಳು ಹೊಸಬರಿಗೆ ಸಾಲ ನೀಡುವತ್ತ ಗಮನ ಹರಿಸಬೇಕು ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

Advertisement

ಪಟ್ಟಣದ ನವನಗರ ಅರ್ಬನ್‌ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಬ್ಯಾಂಕಿನ ಪ್ರತಿನಿಧಿಗಳು ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನ ಬ್ಯಾಡರಹಳ್ಳಿ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದು 6 ವರ್ಷ ಕಳೆದರೂ ತನಿಖೆ ಕೈಗೊಂಡಿಲ್ಲ ಎಂದು ಸಹಾಯಕ ಉಪನಿಬಂಧಕ ಗೋಪಾಲಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕೂಡಲೇ ವರದಿ ನೀಡಬೇಕು ಎಂದು ಸೂಚಿಸಿದರು.

ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಾಲ ನೀಡಲು ಎಂಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕರು ಸ್ವಂತ ಸಾಲ ಮಾಡಿ ಹಣ ನೀಡುವುದಿಲ್ಲ. ಸರ್ಕಾರ ಮತ್ತು ಅಪೆಕ್ಸ್‌ ಬ್ಯಾಂಕುಗಳು ನೀಡಿದ ಹಣವನ್ನು ಅವರು ರೈತರಿಗೆ ನೀಡುತ್ತಾರೆ. ಸಂಘಗಳಲ್ಲಿ ರಾಜಕೀಯ ಮಾಡಿದರೆ ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಕಳೆದ 11 ವರ್ಷಗಳಿಂದ ನಾನು ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಅಧಿಕಾರಿಗಳು ಮತ್ತು ಸಹಕಾರ ಸಂಘದವರ ಸಭೆ ಕರೆದಿರಲಿಲ್ಲ. ಆದರೆ, ಇತ್ತೀಚೆಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದ್ದು, ಮುಂದಿನ ದಿನಗಳಲ್ಲಿ ತಪ್ಪುಗಳು ಪುನರಾವರ್ತನೆಯಾದರೆ ಸಹಿಸುವುದಿಲ್ಲ ಎಂದರು.

Advertisement

ತಿಪ್ಪೂರು ಸಹಕಾರ ಸಂಘದಲ್ಲೂ ಗೊಬ್ಬರ ಮಾರಾಟದಲ್ಲಿ ಅಕ್ರಮ ನಡೆದಿರುವುದು ವರದಿಯಾಗಿದ್ದು, ಅದನ್ನು ಸರಿಪಡಿಸಬೇಕು ಎಂದು ತಾಕೀತು ಮಾಡಿದರು.
ನವನಗರ ಅರ್ಬನ್‌ ಬ್ಯಾಂಕಿನ ಅಧ್ಯಕ್ಷ ಕೆ.ಎನ್‌.ಬಸಂತ್‌, ನಿರ್ದೇಶಕರಾದ ಎಂ.ಕೆ.ಮಹದೇವ್‌, ಕೇಶವ, ಪಿಕಾರ್ಡ ಬ್ಯಾಂಕಿನ ನಿರ್ದೇಶಕ ಎಂ.ಎಸ್‌.ಹರಿಚಿದಂಬರ,

ಸಹಕಾರ ಅಭಿವೃದ್ಧಿ ಅಧಿಕಾರಿ ಎನ್‌.ಮಂಜುನಾಥ್‌, ಎಂಸಿಡಿಸಿಸಿ ಬ್ಯಾಂಕಿನ ಅಭಿವೃದ್ಧಿ ಅಧಿಕಾರಿಗಳಾದ ಪ್ರಕಾಶ್‌, ದಿನೇಶ್‌, ಸುಧೀರ್‌, ಮುಖಂಡರಾದ ಕೃಷ್ಣೇಗೌಡ, ನಾರಾಯಣಗೌಡ, ಬಾಬು, ಆಪ್ತ ಸಹಾಯಕ ಹೆಚ್‌.ಆರ್‌.ಅರುಣ್‌ಕುಮಾರ್‌ ಇತರರಿದ್ದರು.

ಅಧ್ಯಕ್ಷರು, ನಿರ್ದೇಶಕರ ಆಣತಿಯಂತೆ ಕೆಲಸ: ಕೆ.ಆರ್‌.ನಗರ ತಾಲೂಕಿನ 23 ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರ ಒಟ್ಟು 70 ಕೋಟಿ ರೂ. ಸಾಲಮನ್ನಾ ಆಗಿದ್ದು, ಮತ್ತೆ 10 ಕೋಟಿ ಮನ್ನಾ ಆಗಲಿದೆ. ಕೆಲವು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಎಂಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕರ ಆಣತಿಯಂತೆ ನಡೆದುಕೊಳ್ಳುತ್ತಿರುವ ಬಗ್ಗೆ ದೂರುಗಳಿದ್ದು, ಆ ವರ್ತನೆಯನ್ನು ತಿದ್ದಿಕೊಳ್ಳಬೇಕು ಎಂದು ಶಾಸಕ ಸಾ.ರಾ.ಮಹೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next