ಮಂಗಳೂರು: ಕಾನೂನು ಪ್ರಕಾರ ಬುಲ್ ಟ್ರಾಲ್ ಮತ್ತು ಲೈಟ್ ಫಿಶಿಂಗ್ ನಡೆಸುವಂತಿಲ್ಲ. ಈ ವಿಚಾರದಲ್ಲಿ ಒಮ್ಮತದಿಂದ ಮುಂದುವರಿಯುವಂತೆ ಮೀನುಗಾರ ಮುಖಂಡರಿಗೆ ಸೂಚನೆ ನೀಡಲಾಗಿದೆ. ಇದರ ಹೊರತಾಗಿಯೂ ಮನಸ್ತಾಪ ಮಾಡಿಕೊಂಡು ಪ್ರತಿಭಟನೆ ನಡೆಸಿದರೆ ಮೀನುಗಾರಿಕಾ ಇಲಾಖೆ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ರವಿವಾರ ಸುದ್ದಿಗಾರ ಜತೆ ಮಾತನಾಡಿದ ಅವರು, ಬುಲ್ ಟ್ರಾಲ್ ಮತ್ತು ಲೈಟ್ ಫಿಶಿಂಗ್ ವಿಚಾರದಲ್ಲಿ ಎರಡು ತಂಡಗಳು ಪರ -ವಿರೋಧ ಅಭಿಪ್ರಾಯ ವ್ಯಕ್ತಪಡಿಸುತ್ತಿವೆ. ನಿಯಮ ಮೀರಿ ಅನುಮತಿ ನೀಡಲು ಇಲಾಖೆಗೆ ಸಾಧ್ಯವಿಲ್ಲ. ಇಲ್ಲಿ ರಾಜಧರ್ಮವನ್ನು ಇಲಾಖೆ ಪಾಲಿಸಬೇಕಾಗಿದ್ದು, ಇದನ್ನು ಮೀನುಗಾರರು ಅರ್ಥ ಮಾಡಿಕೊಳ್ಳಬೇಕು ಎಂದರು.
ಮೀನುಗಳ ಸಂತತಿ ವೃದ್ಧಿ ದೃಷ್ಟಿಯಿಂದ ಸರಕಾರ ಈ ಕ್ರಮ ಕೈಗೊಂಡಿದೆ. ಮೀನುಗಾರಿಕೆ ಸಂಘಟನೆಗಳು ಹೊಂದಾಣಿಕೆಯಿಂದ ವರ್ತಿಸಿದರೆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ. ನಾನು ವೈಯಕ್ತಿಕವಾಗಿಯೂ ಹಲವು ಬಾರಿ ಮುಖಂಡರಲ್ಲಿ ಮನವಿ ಮಾಡಿ¨ªೇನೆ. ಸರಕಾರಕ್ಕೆ ಸಂಘರ್ಷ ಇಷ್ಟವಿಲ್ಲ. ಇದನ್ನು ನಾಡದೋಣಿ ಮತ್ತು ಪರ್ಸಿನ್ ಮೀನುಗಾರರು ಅರ್ಥಮಾಡಿಕೊಳ್ಳಬೇಕು ಎಂದರು.
ಸರ್ಕಾರದಿಂದಲೇ ನಿರ್ವಹಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ನಲುಗಿದ ಪ್ರದೇಶಗಳಲ್ಲಿ ಪುನರ್ ವಸತಿಯನ್ನು ಸರಕಾರವೇ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಬೆಳ್ತಂಗಡಿ ತಾಲೂಕಿನಲ್ಲಿ ನೈಸರ್ಗಿಕ ದುರಂತದಿಂದ ಅನೇಕ ಮನೆ ಮತ್ತು ಸೊತ್ತು ಹಾನಿ ಸಂಭವಿಸಿದೆ. ಅವುಗಳನ್ನು ಸರಿಪಡಿಸುವ ಕೆಲಸಕ್ಕೆ ಸರಕಾರ ನೆರವು ನೀಡಲಿದೆ. ಕಲ್ಲು, ಮಣ್ಣು, ಮರಳು ತುಂಬಿದ್ದು ಕೃಷಿ ಮಾಡಲು ಅಸಾಧ್ಯ ಎಂಬ ಪರಿಸ್ಥಿತಿ ಇದೆ. ಅಂತಹ ಕಡೆಗಳಿಗೆ ಜೆಸಿಬಿ, ತಲೆಹೊರೆ ಅಥವಾ ಕೈಕೆಲಸದ ಮೂಲಕ ಕಾಮಗಾರಿ ನಡೆಸಬೇಕೇ ಎಂಬ ಬಗ್ಗೆ ಸರಕಾರಿ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಸರಕಾರ ಶೀಘ್ರ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ಕೋಟ ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಪ್ರಕೃತಿ ವಿಕೋಪ ತಾಣಗಳಲ್ಲಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಹೊಸ ಮನೆ ನಿರ್ಮಾಣಕ್ಕೆ ತಲಾ 5 ಲಕ್ಷ ರೂ., ಮನೆ ನಿರ್ಮಾಣದವರೆಗೆ ಬಾಡಿಗೆ ಮನೆಯಲ್ಲಿ ವಾಸಿಸಲು ಮಾಸಿಕ 5 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ ಅರ್ಹರಿಗೆ ಮನೆ ಮಂಜೂರು ಮಾಡಲಾಗುತ್ತಿದೆ. ದಾಖಲೆಗಳ ವ್ಯತ್ಯಾಸವಿದ್ದರೆ ರಾಜೀವ್ ಗಾಂಧಿ ನಿಗಮದಿಂದ ವಸತಿ ನಿರ್ಮಿಸಿ ಕೊಡುವ ಯೋಜನೆ ಇದೆ ಎಂದು ಸಚಿವರು ವಿವರಿಸಿದರು.