Advertisement

ಜಲ ಮೂಲ ಸಂರಕ್ಷಣೆಗೆ ಕ್ರಮ: ರೂಪಾ

09:20 PM Mar 16, 2020 | Lakshmi GovindaRaj |

ಅರಸೀಕೆರೆ: ಜಲಸಾಕ್ಷರತೆ, ಜಲಸಂರಕ್ಷಣೆ ಆಂದೋಲನದ ಮೂಲಕ ಜಲ ಮೂಲಗಳಾದ ಕೆರೆ,ಕಟ್ಟೆಗಳು ಹಾಗೂ ಕಲ್ಯಾಣಿಗಳ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಕಳೆದ 3 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಾಹಿತಿ ರೂಪಾ ಹಾಸನ ತಿಳಿಸಿದರು.

Advertisement

ನಗರದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ತಾಲೂಕು ಆಡಳಿತ ಹಾಗೂ ಹಸಿರು ಭೂಮಿ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಗ್ರಾಪಂ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಕಳೆದ 3 ವರ್ಷಗಳ ಹಿಂದೆ ಪ್ರಾರಂಭಗೊಂಡ ಹಸಿರು ಭೂಮಿ ಪ್ರತಿಷ್ಠಾನ ಜೀವಜಲದ ಸಂರಕ್ಷಣೆಗೆ ಕಂಕಣಬದ್ಧವಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಜನಸಮುದಾಯವು ಸ್ವಯಂಪ್ರೇರಣೆಯಿಂದ ಕೆರೆಕಟ್ಟೆಗಳು ಮತ್ತು ಕಲ್ಯಾಣಿಗಳ ಪುನಶ್ಚೇತನಗೊಳಿಸಲು ಪ್ರೇರಣೆ ನೀಡುತ್ತಿದೆ ಎಂದರು.

ಕೆರೆ, ಕಟ್ಟೆಗಳ ಪುನಶ್ಚೇತನ: ಅರಸೀಕೆರೆ ತಾಲೂಕಿನ ಬಾಣಾವರ,ಯಾದಾಪುರ, ಚಗಚಗೆರೆ ಸೇರಿದಂತೆ ಜಿಲ್ಲೆಯಲ್ಲಿನ 13 ಕೆರೆಗಳನ್ನು ಹಾಗೂ 45 ಪುರಾತನ ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಲಾಗಿದೆ. ಅಲ್ಲದೆ 100ಕ್ಕೂ ಹೆಚ್ಚಿನ ಜಾಗದಲ್ಲಿ 35 ಸಾವಿರಕ್ಕೂ ಹೆಚ್ಚಿನ ಗಿಡಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿಗೆ ನಾಂದಿ ಹಾಡಿದೆ ಎಂದರು.

ಜಲಾಂದೋಲನ: ಮಾ.22 ರ ವಿಶ್ವಜಲ ದಿನದಿಂದ ಏ.22ರ ವಿಶ್ವ ಭೂ ದಿನದವರೆಗೆ ಜಿಲ್ಲೆಯಲ್ಲಿ ಪಾರಂಪರಿಕ ಜಲಮೂಲಗಳ ಹೂಳೆತ್ತು ಮೂಲಕ ಪುನಶ್ಚೇತನಗೊಳಿಸುವ ಜಲಾಂದೋಲನ ಕಾರ್ಯವನ್ನು ವಿವಿಧ ಸಂಘ ಸಂಸ್ಥೆಗಳು ಮತ್ತು ಮಹಿಳಾ ಸ್ವಹಾಯ ಸಂಘಗಳ ಸಹಕಾರದಲ್ಲಿ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ನಮ್ಮ ಪ್ರತಿಷ್ಠಾನವು ಕ್ರೀಯಾಯೋಜನೆಯನ್ನು ರೂಪಿಸಿದ್ದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹಕಾರ ನೀಡಬೇಕೆಂದು ಕೋರಿದರು.

Advertisement

ಹಸಿರು ಭೂಮಿ ಪ್ರತಿಷ್ಠಾನದ ಉಪಾಧ್ಯಕ್ಷೆ ಸೌಭಾಗ್ಯಮ್ಮ ಅವರು ಕಳೆದ 3 ವರ್ಷಗಳಿಂದ ಪ್ರತಿಷ್ಠಾನದ ಮೂಲಕ ಪುನಶ್ಚೇತನಗೊಂಡ ಕೆರೆಗಳು ಕಲ್ಯಾಣಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಅಪ್ಪಾಜಿ ಗೌಡ ತಾಲೂಕು ಪಂಚಾಯಿತಿ ಅಧ್ಯಕ್ಷೆ ರೂಪಾ, ತಾಪಂ ಇಒ ಎಸ್‌.ಪಿ.ನಟರಾಜು ಮಾತನಾಡಿದರು. ಕಾರ್ಯಾಗಾರದಲ್ಲಿ ತಾಲೂಕಿನ ಎಲ್ಲಾ ಗ್ರಾಪಂ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇನ್ನಿತರರು ಭಾಗವಹಿಸಿದ್ದರು.

ನೈಸರ್ಗಿಕ ಸಂಪತ್ತು ರಕ್ಷಿಸಿ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್‌.ಚಂದ್ರಶೇಖರ್‌ ಮಾತನಾಡಿ, ನೈಸರ್ಗಿಕ ಸಂಪತ್ತು ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಹಣಗಳಿಕೆಗಾಗಿ ಪರಿಸರ ನಾಶ ಮಾಡಿದರೆ ಮುಂದಿನ ದಿನಗಳಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ತಾಲೂಕಿನ ಕೆರೆಗಳು, ಕಲ್ಯಾಣಿಗಳನ್ನು ಸ್ಥಳೀಯ ಸಂಘ ಸಂಸ್ಥೆಗಳು ಮಹಿಳಾ ಸ್ವಹಾಯ ಸಂಘಗಳ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಪುನಶ್ಚೇತನಗೊಳಿಸಲು ಗ್ರಾಪಂ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಮುಂದಾಗುವ ನಿಟ್ಟಿನಲ್ಲಿ ಭವಿಷ್ಯದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಜೀವಜಲವನ್ನು ಸಂರಕ್ಷಣೆ ಮಾಡಲು ಸಂಕಲ್ಪ ಮಾಡಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.

Next