ಕಲಬುರಗಿ: ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಮಹಾನಗರದ ನಗರದ ಔಟರ್ ರಿಂಗ್‌ರೋಡ್ (ಬೈಪಾಸ್) ನಿರ್ಮಿಸಲು ಒಪ್ಪಿಗೆ ನೀಡಿ, ಆದಷ್ಟು ಬೇಗಕಾಮಗಾರಿ ಆರಂಭಿಸಲಾಗುವುದು ಎಂದು ಕೇಂದ್ರದ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ತಿಳಿಸಿದರು.
ದೆಹಲಿಗೆ ತೆರಳುವ ಮುನ್ನ ನಗರದ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜತೆಗೆ ಮಾತನಾಡಿದ ಅವರು, ಈಗಾಗಲೇ ಬೈಪಾಸ್ ರಸ್ತೆ ನಿರ್ಮಿಸುವ ಪ್ರಸ್ತಾವನೆ ಬಂದಿದೆ. ಅದಕ್ಕೆ ಅನುಮೋದನೆ ನೀಡಿ, ಅಗತ್ಯವಿರುವ ಭೂಸ್ವಾಧೀನ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಮುಂಚೆ ಔಟರ್ ರಿಂಗ್‌ರೋಡ್ ನಿರ್ಮಿಸಲು ಉದ್ದೇಶಿಸಿದಾಗ ಅದರ ಮೊತ್ತ ಕಡಿಮೆಯಿತ್ತು. ನಂತರ ಅದು 1182 ಕೋಟಿ ರೂ.ಗಳಾಗಿತ್ತು. ಈಗ ಅದರ ಮೊತ್ತ ಹೆಚ್ಚಳವಾಗಿ 1782 ಕೋಟಿ ರೂ.ಗೆ ಏರಿಕೆಯಾಗಿದೆ. ಒಟ್ಟಾರೆ ಮುಂದಿನ ದಿನ ಕಾಲಹರಣ ಮಾಡದೇ ಅನುಮೋದನೆ ನೀಡಲಾಗುವುದು ಎಂದು ಸ್ಪಷ್ಟ ಭರವಸೆ ನೀಡಿದರು.
ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸುವ ಯೋಜನೆಗಳಿಗೆ ಅನುಮೋದನೆ ನೀಡಲಿದೆ ಎಂದು ಪುನರುಚ್ಚರಿಸಿದ ಸಚಿವ ಗಡ್ಕರಿ, ರಾಜ್ಯಕ್ಕೆ ಇನ್ನಷ್ಟು ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ಮಂಜೂರು ಮಾಡುವ ಭರವಸೆ ನೀಡಿದರು.
ಕೇಂದ್ರ ಸಚಿವ ನಿತೀನ್ ಗಡ್ಕರಿ ಏರ್‌ಪೋರ್ಟ್‌ಗೆ ಬರುತ್ತಲೇ ಅವರನ್ನು ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ದೇವಲ ಗಾಣಗಾಪುರದ ಶ್ರೀ ದತ್ತಾತ್ರೇಯನ ಪುತ್ಥಳಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಬಸವೇಶ್ವರ ಭಾವಚಿತ್ರ ನೀಡಿ ಸ್ವಾಗತಿಸಿದರು.
ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರು, ಡಿಸಿಪಿ ಅಡ್ಮೂರು ಶ್ರೀನಿವಾಸಲು ಮುಂತಾದವರಿದ್ದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ನರಿಬೋಳ-ಚಾಮನಾಳ ನಡುವಿನ ಸೇತುವೆ ನಿರ್ಮಾಣದ ಬಾಕಿ ಮೊತ್ತ ಬಿಡುಗಡೆಗೊಳಿಸುವಂತೆ ಕೇಂದ್ರ ಸಚಿವ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದರು.