Advertisement

ಶಿಕ್ಷಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ಕ್ರಮ

10:07 PM Sep 14, 2019 | Lakshmi GovindaRaju |

ಚಾಮರಾಜನಗರ: ಹಿಂದಿ ಪ್ರೌಢಶಾಲಾ ಶಿಕ್ಷಕರು ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಶಿಕ್ಷಕರ ಸಂಘದ ಪದಾಧಿಕಾರಿಗಳೊಂದಿಗೆ ಶೀಘ್ರವೇ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ‌ ಎಸ್‌. ಸುರೇಶ್‌ಕುಮಾರ್‌ ಭರವಸೆ ನೀಡಿದರು.

Advertisement

ನಗರದ ನಂದಿ ಭವನದಲ್ಲಿ ಶನಿವಾರ, ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘ ಹಾಗೂ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಹಾಗೂ ಹಿಂದಿ ದಿವಸ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೇರಿಕೆ ಸಲ್ಲದು: ಹಿಂದಿ ಪ್ರೌಢಶಾಲಾ ಶಿಕ್ಷಕರು ವಿಷಯ ಪರಿವೀಕ್ಷಕರ ನೇಮಕ, ವೃಂದ ಮತ್ತು ನೇಮಕಾತಿ ನಿಯಮ ಸೇರಿದಂತೆ 10 ವಿಷಯಗಳಿಗೆ ಸಂಬಂಧಿಸಿದಂತೆ ಬೇಡಿಕೆ ಸಲ್ಲಿಸಿದ್ದಾರೆ. ಈ ಸಂಬಂಧ ಶೀಘ್ರವೇ ಶಿಕ್ಷಕರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಸಚಿವರು ತಿಳಿಸಿದರು.

ಕನ್ನಡ ಭಾಷೆಗೆ ಅಗ್ರಸ್ಥಾನವಿದ್ದು, ಗೌರವ ಕೊಟ್ಟಿದ್ದೇವೆ. ಬೇರೆ ಭಾಷೆಗಳಿಗೂ ಗೌರವ ಕೊಟ್ಟಿದ್ದೇವೆ. ಪ್ರೀತಿ ಅಕ್ಕರೆಯಿಂದ ಭಾಷೆ ಕಲಿಸುವ ವಾತಾವರಣ ನಿರ್ಮಾಣವಾಗಬೇಕು. ಹೇರಿಕೆ ಸಲ್ಲದು ಎಂದು ಸಚಿವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಮಾತೃಭಾಷೆ ಕನ್ನಡಕ್ಕೆ ಪ್ರಾಧಾನ್ಯತೆ ಇದೆ. ಜಿಲ್ಲಾ ಕೇಂದ್ರದಲ್ಲಿ ರಾಜ್ಯಮಟ್ಟದ ಹಿಂದಿ ಭಾಷಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಆಯೋಜಿತವಾಗಿದ್ದು, ಇದು ಯಶಸ್ವಿಯಾಗಲಿ ಎಂದು ಶುಭ ಕೋರಿದರು.

Advertisement

ಶಾಸಕ ಎನ್‌. ಮಹೇಶ್‌ ಮಾತನಾಡಿ, ಹಿಂದಿ ವಿಷಯ ಪರಿವೀಕ್ಷಕರ ನೇಮಕ ಸೇರಿದಂತೆ ಪ್ರೌಢಶಾಲಾ ಹಿಂದಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಬೇಕಿದೆ. ಈ ನಿಟ್ಟಿನಲ್ಲಿ ಸಚಿವರು ಮುಂದಾಗುವುದಾಗಿ ಭರವಸೆ ನೀಡಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯೂ ಇದೆ. ಈ ಬಗ್ಗೆಯು ಗಮನ ಹರಿಸಬೇಕೆಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಹಿಂದಿ ಶಿಕ್ಷಕರ ಬೇಡಿಕೆಗಳಿಗೆ ಪರಿಹಾರ ಸಿಗಬೇಕಿದೆ. ಹಿಂದಿ ವಿಷಯ ಪರಿವೀಕ್ಷಕರ ಹುದ್ದೆಗಳನ್ನು ಸೃಜಿಸಬೇಕು. ಬಡ್ತಿ ವಿಷಯದಲ್ಲೂ ಇರುವ ತೊಂದರೆಯನ್ನು ಪರಿಹರಿಸಬೇಕು ಎಂದರು. ವಿಧಾನ ಪರಿಷತ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿದರು. ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎ. ರಾಜಗೋಪಾಲಾಚಾರ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಗೀತಾಂಬಾ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಪಿ. ಮಂಜುನಾಥ್‌, ಪೊ›. ಡಾ. ಟಿ.ಜಿ. ಪ್ರಭಾಶಂಕರ ಪ್ರೇಮಿ ಉಪಸ್ಥಿತರಿದ್ದರು.

ಶಿಕ್ಷಕರ ವರ್ಗಾವಣೆ ನೀತಿ ಬದಲು?: ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ಶಿಕ್ಷಕರ ವರ್ಗಾವಣೆ ನೀತಿ ಕುರಿತು ಪ್ರಸ್ತಾಪಿಸಿದ ಸಚಿವರು, ಶಿಕ್ಷಕರ ಕಡ್ಡಾಯ ವರ್ಗಾವಣೆಯಿಂದ ರಾಜ್ಯದಲ್ಲಿ ಶಿಕ್ಷಕರಿಂದ ಆಕ್ರೋಶ ವ್ಯಕ್ತವಾಗಿದೆ. ಶಿಕ್ಷಕರ ಕಡ್ಡಾಯ ವರ್ಗಾವಣೆಯೆಂಬುದೇ ಮಹಾ ತಪ್ಪು. ಕಡ್ಡಾಯ ವರ್ಗಾವಣೆಯಿಂದ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ನೋವುಂಟು ಮಾಡಲಾಗುತ್ತಿದೆ.

ಶಿಕ್ಷಕರ ವರ್ಗಾವಣೆ ನೀತಿಯನ್ನು ಏಕೆ ಬದಲಿಸಬಾರದು? ಎಂದು ಚಿಂತಿಸಲಾಗುತ್ತಿದೆ. ಈ ಕುರಿತು ಶೀಘ್ರವೇ ಸಭೆ ನಡೆಸಲಾಗುವುದು. ಮುಂದಿನ ವರ್ಷದಿಂದಲೇ ಶಿಕ್ಷಕ ಸ್ನೇಹಿ ವರ್ಗಾವಣೆ ಜಾರಿಗೊಳಿಸಲು ಚಿಂತನೆ ನಡೆಸಲಾಗುವುದು ಎಂದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next