ಬೆಳಗಾವಿ: ಪೊಲೀಸ್ ಇಲಾಖೆಯನ್ನು ಸಶಕ್ತಗೊಳಿಸಲು ಮತ್ತು ದೇಶದಲ್ಲಿಯೇ ನಂಬರ್ ಒನ್ ಆಗಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಣಕಾಸಿನ ವ್ಯವಹಾರ, ಅಪರಾಧಗಳನ್ನು ತಡೆಗೆ ಪೊಲೀಸ್ ವ್ಯವಸ್ಥೆ ಇತರರಿಗೆ ಮಾದರಿ ಆಗಲಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಕಾನೂನು ಮತ್ತು ಸುವ್ಯವಸ್ಥೆ ಹಾಗೂ ತನಿಖೆಗಾಗಿ ತಲಾ ಒಬ್ಬರನ್ನು ನೇಮಕ ಮಾಡಲಾಗುವುದು. ತನಿಖೆ ಚುರುಕು ಪಡೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲ ಸರ್ಕಾರಿ ಅಭಿಯೋಜಕರ ಜೊತೆಗೆ ಚರ್ಚಿಸಲಾಗಿದೆ. ಈ ಬಗ್ಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಬೆಳಗಾವಿ ವಿಭಾಗ ಮಟ್ಟದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಅಪರಾಧ ಚಟುವಟಿಕೆ, ಕಾನೂನು ಮತ್ತು ಸುವ್ಯವಸ್ಥೆ, ಕೊಲೆ, ಡಕಾಯಿತಿ, ಕಳ್ಳತನ, ಸರಗಳ್ಳತನ, ವಾಹನ ಕಳ್ಳತನ, ದನ-ಕರುಗಳ ಕಳವು, ಸಂಶಯಾಸ್ಪದ ಸಾವು, ಆತ್ಮಹತ್ಯೆ, ನಾಪತ್ತೆ, ಅತ್ಯಾಚಾರ, ವರದಕ್ಷಿಣೆ, ಮಹಿಳೆಯರ ಶೋಷಣೆ ದೂರು, ಜೂಜಾಟ ಹೀಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ವಿವಿಧ ಕಡೆಗೆ 25 ಸಾವಿರ ಪೊಲೀಸ್ ಪೇದೆಗಳ ನೇಮಕ ಮಾಡಬೇಕಿದೆ. ಅಪರಾಧ ತಡೆಗೆ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಒತ್ತು ನೀಡಲಾಗಿದೆ. ಪ್ರಕರಣ ದಾಖಲಾದಾಗ ಪೊಲೀಸರಿಂದ ತನಿಖೆ ನಡೆದು ಶಿಕ್ಷೆ ಆಗುವ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಈ ಎಲ್ಲ ವಿಷಯಗಳ ಬಗ್ಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಮತ್ತೆ ಮೂರು ತಿಂಗಳು ಬಳಿಕ ಸಭೆ ನಡೆಸಲಾಗುವುದು ಎಂದರು.
Advertisement
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಬೆಳಗಾವಿ ವಿಭಾಗ ಮಟ್ಟದ ಐದು ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆಯನ್ನು ಸುಧಾರಿಸಲು ಅಗತ್ಯ ಕ್ರಮಕ್ಕೆ ಮುಂದಾಗಿದ್ದು, ಎಲ್ಲ ಅಪರಾಧಗಳ ಸೂಕ್ತ ತನಿಖೆ ನಡೆಸುವ ನಿಟ್ಟಿನಲ್ಲಿ ಪ್ರತಿ ಪೊಲೀಸ್ ಠಾಣೆಗೆ ಇಬ್ಬರು ಪಿಎಸ್‌ಐಗಳನ್ನು ನೇಮಕ ಮಾಡಲಾಗುವುದು ಎಂದರು.
Related Articles
Advertisement
ಅಪರಾಧ ತಡೆಯುವ ನಿಟ್ಟಿನಲ್ಲಿ ಜನರಿಗೆ ನ್ಯಾಯ ಒದಗಿಸಿ ಕೊಡುವ ಬಗ್ಗೆ ಆಯಾ ಗ್ರಾಮಗಳಲ್ಲಿ ಗ್ರಾಮ ಸಭೆ, ಸ್ಥಳೀಯರ ಸಹಕಾರ ಪಡೆದುಕೊಂಡು ಉತ್ತಮ ವಾತಾವರಣ ಸೃಷ್ಟಿಸಬೇಕು. ಇಡೀ ರಾಜ್ಯದಲ್ಲಿ ಪೊಲೀಸ್ ಇಲಾಖೆ ಉತ್ತಮ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಯುವಕ ಶಿವು ಉಪ್ಪಾರ ಸಾವಿನ ಬಗ್ಗೆ ಈಗಾಗಲೇ ಇದು ಕೊಲೆ ಅಲ್ಲ. ಆತ್ಮಹತ್ಯೆ ಎಂದು ವರದಿ ಬಂದಿದೆ. ಗೋ ಹತ್ಯೆಗೂ ಯುವಕನ ಸಾವಿಗೂ ಸಂಬಂಧವಿಲ್ಲ. ಪ್ರಚೋದನೆ ಕೊಟ್ಟವರ ಬಗ್ಗೆಯೂ ಪೊಲೀಸ್ ತನಿಖೆ ನಡೆಸುತ್ತಿದೆ. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಅರಣ್ಯ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಗಣೇಶ ಹುಕ್ಕೇರಿ, ಲಕ್ಷ್ಮೀ ಹೆಬ್ಟಾಳ್ಕರ, ಅನಿಲ ಬೆನಕೆ, ಶ್ರೀಮಂತ ಪಾಟೀಲ, ಅಂಜಲಿ ನಿಂಬಾಳ್ಕರ, ಉತ್ತರ ವಲಯ ಐಜಿಪಿ ಎಚ್.ಜಿ ರಾಘವೇಂದ್ರ ಸುಹಾಸ್, ಪೊಲೀಸ್ ಆಯುಕ್ತ ಬಿ.ಎಸ್ ಲೋಕೇಶಕುಮಾರ, ಎಸ್‌ಪಿ ಸುಧೀರಕುಮಾರ್ ರೆಡ್ಡಿ, ಡಿಸಿಪಿ ಸೀಮಾ ಲಾಟ್ಕರ, ಯಶೋದಾ ವಂಟಗೋಡಿ ಸೇರಿದಂತೆ ಎಸಿಪಿ, ಇನ್ಸ್‌ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಇದ್ದರು.
ಪೊಲೀಸರಿಗೆ ಶೀಘ್ರ ಸಿಹಿ ಸಂದೇಶ:
ಪೊಲೀಸರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಔರಾದಕರ ವರದಿಯಲ್ಲಿಯ ಪ್ರಮುಖ ಅಂಶಗಳನ್ನು ಜಾರಿಗೆ ತರುವುದು ಇಶ್ಚಿತ. ಈಗಾಗಲೇ ಹಣಕಾಸು ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಭೆ ನಡೆಸಿದ್ದು, ಸಮಾನಾಂತರವಾಗಿ ನ್ಯಾಯ ನೀಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೆಲವೇ ದಿನಗಳಲ್ಲಿ ಪೊಲೀಸರಿಗೆ ಸಿಹಿ ಸಂದೇಶ ನೀಡಲಾಗುವುದು. • ಎಂ.ಬಿ. ಪಾಟೀಲ,ಗೃಹ ಸಚಿವ
ಕಾರಾಗೃಹ-ಪೊಲೀಸ್ ಇಲಾಖೆ ಒಂದೇ:
ಗೃಹ ಇಲಾಖೆಯಲ್ಲಿ ಪೊಲೀಸ್ ಹಾಗೂ ಕಾರಾಗೃಹ ಎರಡೂ ಬರುತ್ತವೆ. ಔರಾದಕರ ವರದಿ ಜಾರಿಯಾದರೆ ಈ ಎರಡೂ ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ. ನಮ್ಮ ಇಲಾಖೆ ಬಿಟ್ಟು ಕಾರಾಗೃಹ ಹೊರಗಿಲ್ಲ. ಹೆಸರಿನಲ್ಲಿಯೇ ಗೃಹ ಎಂಬುದಿದೆ. ಯಾರಿಗೂ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. ಔರಾದಕರ ವರದಿ ಜಾರಿಯಾಗಿ ನ್ಯಾಯ ಕಲ್ಪಿಸಿ ಕೊಡುವುದು ನಿಶ್ಚಿತ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ನಗರದಲ್ಲಿ ಪೊಲೀಸ್ ಸಿಬ್ಬಂದಿಗಳಿಗಾಗಿ ನಿರ್ಮಿಸಿರುವ ವಸತಿ ಗೃಹಗಳನ್ನು ಗೃಹ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಸೋಮವಾರ 72 ವಸತಿ ಗೃಹಗಳನ್ನು ಉದ್ಘಾಟಿಸಲಾಗಿದೆ. ಇನ್ನು ಎರಡು ವಾರದಲ್ಲಿ ನಿಪ್ಪಾಣಿಯಲ್ಲಿ 24 ಹಾಗೂ ಕಿತ್ತೂರಿನಲ್ಲಿ 24 ವಸತಿ ಗೃಹಗಳು ಉದ್ಘಾಟನೆಗೊಳ್ಳಲಿದ್ದು, ಮೂರನೇ ಹಂತದಲ್ಲಿ ಬೆಳಗಾವಿ ಕಮೀಷನರೇಟ್ ವ್ಯಾಪ್ತಿಯ ಕಾಕತಿ ಠಾಣೆಯಲ್ಲಿ 12 ಕ್ವಾರ್ಟರ್ಸ್, ಹಿರೇಬಾಗೇವಾಡಿಯಲ್ಲಿ 26, ಶಹಾಪುರದಲ್ಲಿ 24 ಹಾಗೂ ನಗರ ವ್ಯಾಪ್ತಿಯಲ್ಲಿ 28 ವಸತಿಗೃಹಗಳು ಉದ್ಘಾಟನೆ ಆಗಲಿವೆ ಎಂದು ತಿಳಿಸಿದರು.