Advertisement

ಬರ ಪರಿಸ್ಥಿತಿ ಸಮರ್ಥ ನಿರ್ವಹಣೆಗೆ ಕ್ರಮ

12:41 PM May 20, 2019 | pallavi |

ಗದಗ: ಬರದಂತಹ ಸಂಕಷ್ಟ ಸ್ಥಿತಿಯಲ್ಲಿ ತಾಲೂಕು ಹಾಗೂ ಗ್ರಾಪಂ ಮಟ್ಟದ ಅಧಿಕಾರಿ, ಸಿಬ್ಬಂದಿ ಹಾಗೂ ಕಂದಾಯ ನಿರೀಕ್ಷಕರು ಪ್ರತಿ ಹಳ್ಳಿ ಹಳ್ಳಿಗೆ ತೆರಳಿ ಜನರ ಸಮಸ್ಯೆಗಳನ್ನು ನೈಜವಾಗಿ ಅರಿತುಕೊಳ್ಳಬೇಕು. ಅದನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಜನರ ಸಮಸ್ಯೆ ಪರಿಹರಿಸುವ ಮೂಲಕ ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಸೂಚಿಸಿದರು.

Advertisement

ಜಿಲ್ಲಾಡಳಿತ ಭವನದ ಜಿ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲೆಯ ಬರ ನಿರ್ವಹಣೆ ಕುರಿತ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ವರ್ಷಗಳಲ್ಲಿ ಜಿಲ್ಲೆಯ ಸಮಗ್ರ ಗ್ರಾಮಗಳಿಗೆ ನೀರು ಪೂರೈಸುವ ಡಿ.ಬಿ.ಒ.ಟಿ ಯೋಜನೆಯಿಂದಾಗಿ ಜಿಲ್ಲಾಡಳಿತ ನಿರಾಳವಾಗಿ ಕೆಲಸ ಮಾಡುವ ಸ್ಥಿತಿ ಇರುವುದು ನೆಮ್ಮದಿಯ ವಿಷಯವಾಗಿದೆ. ಆದರೂ ಜನತೆಯ ಅವಶ್ಯಕತೆಗಳಾದ ಉದ್ಯೋಗ ಮತ್ತು ರೈತರ ಜಾನುವಾರುಗಳಿಗೆ ಮೇವು ಕುರಿತಂತೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.

ಬಿಸಿಲಿನ ಜಳದಿಂದ ಪ್ರಾಣ ಹಾನಿಗಳಾದ್ದಲ್ಲಿ ನಿಯಮಾನುಸಾರ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಟಾಸ್ಕ´ೋರ್ಸ್‌ ಅನುದಾನದಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆ ಪೈಪ್‌ಗ್ಳು ಮನೆ ಮನೆಗೂ ತಲುಪುವಂತೆ ಕ್ರಮ ಜರುಗಿಸಬೇಕು. ಇದರಿಂದ ಭವಿಷ್ಯದಲ್ಲಿ ಪಂಚಾಯತಿಗಳಿಗೆ ಆದಾಯ ಹೆಚ್ಚಿಸುವುದಕ್ಕೆ ಅವಕಾಶ ಒದಗಲಿದೆ. ಮೇವು ಬ್ಯಾಂಕ್‌ಗಳನ್ನು ಬೇಡಿಕೆಗೆ ಅನುಗುಣವಾಗಿ ಹಾಗೂ ರೈತರಿಗೆ ಸಮೀಪವಾಗುವ ಕೇಂದ್ರವನ್ನು ಆಯ್ಕೆ ಮಾಡಿ ಪ್ರಾರಂಭಿಸಲು ಸೂಚಿಸಿದ ಸಚಿವರು, ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ರೈತರ ಜಮೀನುಗಳಲ್ಲಿ ಹಾಗೂ ಗ್ರಾಮಗಳಲ್ಲಿ ಜಲ ಸಂವರ್ಧನೆ ಹೆಚ್ಚಿಸುವ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು. ಮುಂಗಾರು ಹಂಗಾಮಿನಲ್ಲಿ ಮಳೆ ಆದ ತಕ್ಷಣ ರೈತರಿಗೆ ಅಗತ್ಯದ ಗುಣಮಟ್ಟದ ಬೀಜ ಹಾಗೂ ಗೊಬ್ಬರ ಸಿಗುವುದಕ್ಕೆ ಈಗಿನಿಂದಲೇ ಬೇಡಿಕೆಗೆ ತಕ್ಕಂತೆ ದಾಸ್ತಾನು ಮಾಡಿಕೊಳ್ಳಲು ಕ್ರಮ ಜರುಗಿಸಲು ಸಚಿವ ದೇಶಪಾಂಡೆ ನಿರ್ದೇಶನ ನೀಡಿದರು.

ರಾಜ್ಯದ ಕೌಶಲಾಭಿವೃದ್ಧಿ, ಮುಜರಾಯಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಸಮಗ್ರ ಹಳ್ಳಿಗಳಿಗೆ ಮಲಪ್ರಭಾ ಹಾಗೂ ತುಂಗಭದ್ರಾ ನದಿಗಳಿಂದ ನೀರು ಸರಬರಾಜು ಮಾಡುವ ಡಿ.ಬಿ.ಓ.ಟಿ. ಯೋಜನೆಯಿಂದಾಗಿ ಬರಗಾಲದಲ್ಲೂ ಕೂಡ ಜನರಿಗೆ ನೀರು ಪೂರೈಕೆ ಆಗುತ್ತಿರುವುದು ಉತ್ತಮ ಕಾರ್ಯವಾಗಿದೆ. ಆದರೂ, ಮಳೆಗಾಲದ ವರೆಗೂ ಜನರಿಗೆ ಕುಡಿಯುವ ನೀರು, ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದರು.

ಇದಕ್ಕೂ ಮುನ್ನ ಮಾನಾಡಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲೆಯಲ್ಲಿ 2018-19ರ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಆಗಿದ್ದ 2.17 ಲಕ್ಷ ಹೆಕ್ಟೇರ್‌ ಪೈಕಿ 1.73 ಲಕ್ಷ ಹೆಕ್ಟೇರ್‌ ಕೃಷಿ ಬೆಳೆ ಹಾನಿಯಾಗಿದ್ದು, 118.60 ಕೋಟಿ ರೂ. ಹಾಗೂ 36 ಸಾವಿರ ಹೆಕ್ಟೇರ್‌ ಪ್ರದೇಶದ ತೋಟಗಾರಿಕೆ ಬೆಳೆಹಾನಿಗಾಗಿ 28.52 ಕೋಟಿ ರೂ.ಗಳ ಇನಪುಟ್ ಸಬ್ಸಿಡಿ ಬೇಡಿಕೆ ಸಲ್ಲಿಸಲಾಗಿದೆ. ಅದರಲ್ಲಿ ಈವರೆಗೆ 46,616 ರೈತರಿಗೆ 13.31 ಕೋಟಿ ರೂ. ವಿತರಣೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ 2 ಲಕ್ಷ ಹೆಕ್ಟೇರ್‌ ಬಿತ್ತನೆ ಪೈಕಿ 1.95 ಲಕ್ಷ ಹೆಕ್ಟೇರ್‌ ಕೃಷಿ ಬೆಳೆ ಹಾನಿಯಾಗಿದ್ದು, 132.23 ಕೋಟಿ ರೂ. ಇನಪುಟ್ ಸಬ್ಸಿಡಿಗೆ ಬೇಡಿಕೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದ ಕೃಷಿ ಸಾಲ ಮನ್ನಾ ಯೋಜನೆಯಡಿ ಈವರೆಗೆ ಜಿಲ್ಲೆಯ 64,473 ರೈತರ ದಾಖಲೆ ಪೂರ್ಣಗೊಂಡಿದ್ದು, 17,906 ಫಲಾನುಭವಿಗಳ 27.53 ಕೋಟಿ ರೂ.ಗಳ ಸಾಲಮನ್ನಾ ಅನುದಾನ ಬ್ಯಾಂಕ್‌ಗಳಿಗೆ ಬಿಡುಗಡೆಯಾಗಿದೆ ಎಂದು ತಿಳಿಸಿದರು.

Advertisement

ಜಿಲ್ಲೆಯಲ್ಲಿ ಹಾಲು ಉತ್ಪಾದಕ ಸಹಕಾರ ಮಂಡಳಿ ಮತ್ತು ನೀರಾವರಿ ಸೌಲಭ್ಯವಿರುವ ರೈತರಿಗೆ ಒಟ್ಟು 10,439 ಮೇವಿನ ಬೀಜದ ಕಿರುಪೊಟ್ಟಣಗಳನ್ನು ವಿತರಿಸಲಾಗಿದೆ. ರೈತರ ಜಾನುವಾರುಗಳಿ ಮೇವಿನ ಕೊರತೆ ನೀಗಿಸಲು ಗದಗ ತಾಲೂಕನಲ್ಲಿ 7, ಗಜೇಂದ್ರಗಡ 2, ರೋಣದಲ್ಲಿ ತಲಾ 5, ಮುಂಡರಗಿ ಲಕ್ಷೆ ್ಮೕಶ್ವರದಲ್ಲಿ 4 ಹಾಗೂ ಶಿರಹಟ್ಟಿಯಲ್ಲಿ 5 ಮೇವು ಬ್ಯಾಂಕುಗಳನ್ನು ಸ್ಥಾಪಿಸಿದ್ದು, ರಿಯಾಯಿತಿ ದರದಲ್ಲಿ ಮೇವು ಪೂರೈಸುತ್ತಿದ್ದು, ಈ ವರೆಗೆ 256.65 ಮೆಟ್ರಿಕ್‌ ಟನ್‌ ಸರಬರಾಜು ಆಗಿದ್ದು, 152.38 ಮೆಟ್ರಿಕ್‌ ಟನ್‌ ಮೇವು ಮಾರಾಟ ಮಾಡಲಾಗಿದೆ. ಡಂಬಳದಲ್ಲಿ ಗೋಶಾಲೆ ಆರಂಭಿಸಿದ್ದು, 86 ಜಾನುವಾರುಗಳು ಆಶ್ರಯ ಪಡೆದಿವೆ. ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ಗೋಶಾಲೆ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯ ನಗರ ಅಥವಾ ಗ್ರಾಮೀಣ ಜನತೆಗೆ ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ಜಿಲ್ಲಾಡಳಿತ ಸದಾ ಜಾಗೃತಿ ವಹಿಸಬೇಕು. ಕುಡಿಯುವ ನೀರು, ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವು, ನೀರು ಕೊರತೆಯಾಗದಂತೆ ಅಗತ್ಯ ಕ್ರಮ ಕೈಕೊಳ್ಳಬೇಕು ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡ ನಿರ್ದೇಶನ ನೀಡಿದರು.

ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಸಿಇಒ ಮಂಜುನಾಥ ಚವ್ಹಾಣ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಕುಡಿಯುವ ನೀರಿಗಿಲ್ಲ ಬರ
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಡಿಬಿಓಟಿ ಆಧಾರದ ಮೇಲೆ ಮಲಪ್ರಭಾ ನದಿಯಿಂದ ನರಗುಂದ, ರೋಣ ತಾಲೂಕುಗಳ 128 ಹಾಗೂ ತುಂಗಭಧ್ರಾ ನದಿಯಿಂದ ಮುಂಡರಗಿ, ಶಿರಹಟ್ಟಿ, ಗದಗ ತಾಲೂಕುಗಳ 209 ಗ್ರಾಮ ಮತ್ತು ಮುಂಡರಗಿ ಪಟ್ಟಣಕ್ಕೆ ನೀರು ಪೂರೈಕೆಯಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 1629 ಕೊಳವೆಬಾವಿಗಳು ಕಾರ್ಯಾಚರಣೆಯಲ್ಲಿವೆ. ಜಿಲ್ಲೆಯ ನಗರ ಪ್ರದೇಶಕ್ಕೆ ಸಂಬಂಧಿಸಿ ನರೇಗಲ್- 6, ಗಜೇಂದ್ರಗಡ- 8 ಹಾಗೂ ರೋಣದಲ್ಲಿ 4 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು, ಸ್ಥಳೀಯ ಸಂಸ್ಥೆಗಳ ಸರ್ಕಾರಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ರೋಣ ಮತ್ತು ಗಜೇಂದ್ರಗಡ ನಗರ ಪ್ರದೇಶಗಳಿಗೆ ಡಿಬಿಓಟಿ ಯೋಜನೆಯಡಿ ನೀರು ಪೂರೈಸಲು ಜನರ ಬೇಡಿಕೆ ಹಿನ್ನೆಯಲ್ಲಿ ನೀರು ಪೂರೈಕೆಗೆ ಕ್ರಮ ಕೈಕೊಳ್ಳಲಾಗುತ್ತಿದೆ. ಬರ ನಿರ್ವಹಣೆ ಕುರಿತಂತೆ ಒಟ್ಟು 16.16 ಕೋಟಿ ರೂ. ಜಿಲ್ಲಾಡಳಿತದ ಬಳಿ ಲಭ್ಯವಿದೆ. 2018-19ರ ಸಾಲಿನಲ್ಲಿ ಹಿಂಗಾರು ಅವಧಿಯಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ 2.07 ಕೋಟಿರೂ. ಹಿಂಗಾರು ಅವಧಿಯಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

96.57 ಕೋಟಿ ವೆಚ್ಚದಲ್ಲಿ ಖಾತ್ರಿ ಕಾಮಗಾರಿ
ರಾಷ್ಟ್ರೀಯ ಮಹಾತ್ಮಾ ಗಾಂಧಿ ಉದ್ಯೊಗ ಖಾತ್ರಿ ಯೋಜನೆಯಡಿ 2018- 19ರಲ್ಲಿ 96.57 ಕೋಟಿ ರೂ. ವೆಚ್ಚದಲ್ಲಿ 26.07 ಲಕ್ಷ ಮಾನವ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಪ್ರಸಕ್ತ 2019-20 ಸಾಲಿನಲ್ಲಿ 140.77 ಕೋಟಿ ರೂ. ಅನುದಾನದ 32.01 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿಯಿದ್ದು, ಮೇ 14ರ ವರೆಗೆ 18.36 ಕೋಟಿ ರೂ. ವೆಚ್ಚದಲ್ಲಿ 2.60 ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿದೆ. ಈ ಯೋಜನೆಯಡಿ 100ರ ಬದಲಾಗಿ 150 ದಿನಗಳ ಉದ್ಯೋಗ ನೀಡಲಾಗುತ್ತಿದೆ. ಜನರು ಕೆಲಸಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ತಾಲೂಕು ಮತ್ತು ಗ್ರಾ.ಪಂ. ಮಟ್ಟದಲ್ಲಿ ವಿವಿಧ ಚಟುವಟಿಕೆ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ಬರುವ ವೈಯಕ್ತಿಕ ಕಾಮಗಾರಿಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಚವ್ಹಾಣ ತಿಳಿಸಿದರು.

ಜಿಲ್ಲೆಯ ಅರಣ್ಯ ಸಂರಕ್ಷಣೆ ಹಾಗೂ ಸಂವರ್ಧನೆ ನಿಟ್ಟಿನಲ್ಲಿ ಕಪ್ಪತಗುಡ್ಡ ಅರಣ್ಯ ಪ್ರದೇಶವನ್ನು ವನ್ಯಧಾಮವಾಗಿ ರಾಜ್ಯ ಸರಕಾರ ಆದೇಶ ಮಾಡಿರುವುದು ಈ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಿದಂತಾಗಿದೆ. ಮಳೆಗಾಗಿ ಪ್ರಾರ್ಥಿಸಿ ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪರ್ಜನ್ಯ ಜಪ ಮಾಡಲಾಗಿತ್ತು. ಅದರಂತೆ ಈ ಬಾರಿಯೂ ರಾಜ್ಯದಲ್ಲಿ ಮಳೆಗಾಗಿ ಪರ್ಜನ್ಯ ಜಪ ನೆರವೇರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತೇನೆ.
ಪಿ.ಟಿ. ಪರಮೇಶ್ವರ ನಾಯಕ್‌, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next