Advertisement

ಕಾಲೇಜುಗಳಲ್ಲಿ ಬೇಕು ಕಡ್ಡಾಯ ತಪಾಸಣೆಗೆ ಕ್ರಮ

03:30 PM Jan 14, 2022 | Team Udayavani |

ಹುಬ್ಬಳ್ಳಿ: ಕೊರೊನಾ ಮೂರನೇ ಅಲೆ ಅಪ್ಪಳಿಸಿದ್ದು, ಜಿಲ್ಲೆಯಲ್ಲಿ ತನ್ನದೇ ಪ್ರಭಾವ ತೋರತೊಡಗಿದೆ. ಒಮಿಕ್ರಾನ್‌ ತಡೆ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. 1-8ನೇ ತರಗತಿವರೆಗಿನ ಶಾಲೆಗಳನ್ನು ಕೆಲವು ಕಡೆಗಳಲ್ಲಿ ಬಂದ್‌ ಮಾಡಿದೆ. ಆದರೆ, ಅವಳಿನಗರದ ವಿವಿಧ ಕಾಲೇಜುಗಳಲ್ಲಿ ಕೋವಿಡ್‌ ಸೋಂಕು ದೃಢಪಡುವ ಪ್ರಮಾಣ ಹೆಚ್ಚತೊಡಗಿದ್ದು, ಜಿಲ್ಲಾಡಳಿತ ಎಲ್ಲ ಕಾಲೇಜುಗಳಲ್ಲಿ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ
ನಡೆಸಬೇಕಾಗಿದೆ. ಕೋವಿಡ್‌ ಮೂರನೇ ಅಲೆ ಸಮುದಾಯಕ್ಕೆ ಹರಡುವುದನ್ನು ತಪ್ಪಿಸಲು \ಇನ್ನಷ್ಟು ಕ್ರಮಗಳಿಗೆ ಜಿಲ್ಲಾಡಳಿತ ಮುಂದಾಗಬೇಕಾಗಿದೆ.

Advertisement

ಅವಳಿನಗರದ ವಿವಿಧ ಶಾಲೆಗಳಲ್ಲಿ ಮಕ್ಕಳಿಗೆ ಕೋವಿಡ್‌ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆರಂಭದಲ್ಲಿ ಸೋಂಕು ಕಾಣಿಸಿಕೊಂಡ ಶಾಲೆಯನ್ನು ಬಂದ್‌ ಮಾಡಲು ಸೂಚಿಸಿದ್ದ ಜಿಲ್ಲಾಡಳಿತ, ನಂತರದಲ್ಲಿ ಸೋಂಕು ವಿವಿಧ ಶಾಲೆಗಳಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡ ತಾಲೂಕುಗಳಲ್ಲಿ 1-8ನೇ ತರಗತಿ ಶಾಲೆಗಳ ಭೌತಿಕ ಬೋಧನೆ ರದ್ದುಗೊಳಿಸಿ, ಆನ್‌ ಲೈನ್‌ ಬೋಧನೆ ಆರಂಭಿಸಲಾಗಿದೆ. ಆದರೆ, ಕಾಲೇಜು ವಿದ್ಯಾರ್ಥಿಗಳಲ್ಲಿಯೂ ಕೋವಿಡ್‌ ಸೋಂಕು ಹೆಚ್ಚಿನ ಪ್ರಮಾಣದಲ್ಲಿಯೇ ಕಂಡುಬರುವ ಸಾಧ್ಯತೆ ಇದ್ದು, ಈಗಾಗಲೇ ಕೆಲವು ಕಾಲೇಜು ಹಾಗೂ ಹಾಸ್ಟೆಲ್‌ಗ‌ಳಲ್ಲಿ ಕೋವಿಡ್‌ ಮೂರನೇ ಅಲೆ ಸ್ಫೋಟಗೊಂಡಿದೆ.

ಆತಂಕ ಮೂಡಿಸುತ್ತಿದೆ ಪ್ರಮಾಣ: ಶಾಲೆಗಳಲ್ಲಿ ಕೊರಾನಾ ಹೆಚ್ಚುತ್ತಿರುವುದು ಆತಂಕ ಮೂಡಿಸುತ್ತಿದೆ. ಅವಳಿನಗರದ ಕೆಲ ಶಾಲೆಗಳ ವಿದ್ಯಾರ್ಥಿಗಳಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿತ್ತು. ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬ ಅನಿಸಿಕೆಗೆ ಇದು ಪುಷ್ಟಿ ನೀಡಿದಂತೆ ಭಾಸವಾಗಿತ್ತು. ಆರಂಭದಲ್ಲಿ ಒಂದು, ಎರಡು ಶಾಲೆಗಳಲ್ಲಿ ಕಾಣಿಸಿಕೊಂಡಿದ್ದ ಸೋಂಕು ನಿಧಾನಕ್ಕೆ ಬೇರೆ ಬೇರೆ ಶಾಲೆಗಳಿಗೂ ವ್ಯಾಪಿಸಲು ಆರಂಭಿಸಿತ್ತು. ಇದರ ಜತೆಗೆ ಕಾಲೇಜುಗಳಲ್ಲಿಯೂ ಕೋವಿಡ್‌ ಸೋಂಕು ಕಾಣಿಸಿಕೊಂಡಿತ್ತು. ಕೆಎಲ್‌ಇ ಸಂಸ್ಥೆಯ ಎಂಜಿನಿಯರಿಂಗ್‌ ಕಾಲೇಜಿನ 19 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ ಭೌತಿಕ ತರಗತಿ ರದ್ದುಪಡಿಸಿ, ಆನ್‌ಲೈನ್‌ ಬೋಧನೆ ಆರಂಭಿಸಿತ್ತು.

ಕೆಎಲ್‌ಇ ಸಂಸ್ಥೆಯ ಹಾಸ್ಟೆಲ್‌ವೊಂದರಲ್ಲಿ ಸುಮಾರು 28 ವಿದ್ಯಾರ್ಥಿನಿಯರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದರಲ್ಲಿ ಕೇರಳದ 9 ವಿದ್ಯಾರ್ಥಿನಿಯರು ಇದ್ದರು ಎನ್ನಲಾಗಿದೆ. ಕೆಎಲ್‌ಇಐಟಿ ಕಾಲೇಜು ಹಾಗೂ ಹಾಸ್ಟೆಲ್‌ನಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ಕಾಲೇಜುಗಳಲ್ಲಿಯೂ ಹರಡಲು ಮುಂದಾದ ಸಂದೇಶ ರವಾನಿಸಿತ್ತು. ಇದು ಸತ್ಯ ಎನ್ನುವಂತೆ ಗುರುವಾರ ಇಲ್ಲಿನ ಕುಸುಗಲ್ಲ ರಸ್ತೆಯ ಆಕ್ಸ್‌ಫರ್ಡ್‌ ಕಾಲೇಜು ವಿದ್ಯಾರ್ಥಿಗಳಲ್ಲಿಯೂ ಸೋಂಕು ದೃಢಪಟ್ಟಿದೆ.
ಆಕ್ಸ್‌ಫರ್ಡ್‌ ಕಾಲೇಜಿನಲ್ಲಿ ರ್‍ಯಾಂಡಮ್‌ ಆಗಿ 50 ವಿದ್ಯಾರ್ಥಿಗಳಿಗೆ ಕೋವಿಡ್‌ ತಪಾಸಣೆ ಮಾಡಲಾಗಿದ್ದು, ಸುಮಾರು 9 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ.

ಕಾಲೇಜಿನಲ್ಲಿ ನಿತ್ಯ ಸುಮಾರು 300-400ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ. ರ್‍ಯಾಂಡಮ್‌ ತಪಾಸಣೆಯಲ್ಲಿ ಕಂಡುಬಂದ ಸೋಂಕು ಗಮನಿಸಿದರೆ, ಶೇ.19-20 ಪಾಸಿಟಿವ್‌ ಪ್ರಮಾಣ ಗೋಚರಿಸುತ್ತಿದೆ. ಸೋಂಕು ದೃಢಪಟ್ಟ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ರೋಗಲಕ್ಷಣ ಕಂಡುಬಂದಿಲ್ಲ ಎಂದು ಹೇಳಲಾಗುತ್ತಿದ್ದು, ಆ ವಿದ್ಯಾರ್ಥಿಗಳು ಸಹಜವಾಗಿ ಬೇರೆಯವರೊಂದಿಗೆ ಸಂಪರ್ಕಕ್ಕೆ ಬಂದರೆ ರೋಗದ ಹಬ್ಬುವಿಕೆ ಹೆಚ್ಚಲಿದೆ. ಮುಖ್ಯವಾಗಿ ಇದು ಸಮುದಾಯಕ್ಕೆ ಹಬ್ಬುವಿಕೆ ವೇಗವನ್ನು ಹೆಚ್ಚಿಸುವ ಸಾಧ್ಯತೆ ಇಲ್ಲದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next