ಬೆಂಗಳೂರು: ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿರಂಗದಲ್ಲಿ ನೂರಾರು ಸಿನಿಮಾಗಳಲ್ಲಿ ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ್ದ ಜಾಲಿ ಬಾಸ್ಟಿನ್(57) ಹೃದಯಾಘಾತದಿಂದ ನಿಧನರಾಗಿದ್ದಾರೆ.
1966 ರಲ್ಲಿ ಕೇರಳದಲ್ಲಿ ಜನಿಸಿದ ಅವರು, ಬೆಂಗಳೂರಿನಲ್ಲೇ ಬೆಳೆದು ಶಿಕ್ಷಣವನ್ನು ಪಡೆದರು. ಆರಂಭದಲ್ಲಿ ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಜಾಲಿ ಬಾಸ್ಟಿನ್ ಸಿನಿಮಾದಲ್ಲಿ ಬೈಕ್ ಸಾಹಸದ ದೃಶ್ಯಗಳನ್ನು ಮಾಡುತ್ತಿದ್ದರು. ರವಿಚಂದ್ರನ್ ಅವರ ʼಪ್ರೇಮ ಲೋಕʼ ಸಿನಿಮಾದಲ್ಲಿ ಡ್ಯೂಪ್ ಹಾಕಿದ್ದರು. ಈ ಸಮಯದಲ್ಲಿ ಅವರಿಗೆ 17 ವರ್ಷ ಆಗಿತ್ತು.
ನಿಧನವಾಗಿ ಸ್ಟಂಟ್ ಮನ್ ಆಗಿ ಸಿನಿಮಾರಂಗಕ್ಕೆ ಪರಿಚಯವಾದ ಜಾಲಿ ಬಾಸ್ಟಿನ್, ಅನೇಕ ಸಿನಿಮಾಗಳಲ್ಲಿ ಸಾಹಸ ನಿರ್ದೇಶಕನಾಗಿ ಕಾಣಿಸಿಕೊಂಡರು. ಸಾಹಸ ನಿರ್ದೇಶನದ ಜೊತೆಗೆ ಅವರು ʼನಿನಗಾಗಿ ಕಾದಿರುವೆʼ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿಯೂ ಗಮನ ಸೆಳೆದರು.
900 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಕೆಲಸ: ಸಾಹಸ ನಿರ್ದೇಶನ ಹಾಗೂ ಸಾಹಸ ಕಲಾವಿದನಾಗಿ ಕನ್ನಡ ಮಾತ್ರವಲ್ಲದೆ, ತಮಿಳು, ಮಲಯಾಳಂ ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಅವರು ಸುಮಾರು 900 ಹೆಚ್ಚಿನ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
‘ಪ್ರೇಮಲೋಕ’, ‘ಪುಟ್ನಂಜ’, ‘ಅಣ್ಣಯ್ಯ’, ‘ಶಾಂತಿ ಕ್ರಾಂತಿʼಸೇರಿದಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ʼ ‘ಮಾಸ್ಟರ್ ಪೀಸ್’, ʼʼಏಕಾಂಗಿʼʼಸೂಪರ್ ರಂಗʼ, ʼಗಾಳಿಪಟʼ, ʼಪಾಪ್ ಕಾರ್ನ್ ಮಂಕಿ ಟೈಗರ್ʼ, ʼಬೆಂಗಳೂರು ಡೇಸ್ʼ, ʼಆಪರೇಷನ್ ಜೀವʼ, ಅಂಗಮಲಿ ಡೈರೀಸ್(ಮಲಯಾಳಂ), ʼಅಣ್ಣಯ್ಯʼ,ʼ ನಕ್ಷತ್ರಂ(ತೆಲುಗು), ʼದಿ ಬಾಡಿ(ಹಿಂದಿ), ಇರಿದ(ತಮಿಳು) ಸೇರಿದಂತೆ 900 ಕ್ಕೂ ಹೆಚ್ಚಿನ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದರು. ಸ್ಟಂಟ್ ಮನ್ ಆಗಿ ಅವರು ಕೆಲಸ ಮಾಡುವ ವೇಳೆ ಕೆಲವು ಸಲಿ ದೇಹಕ್ಕೆ ಪೆಟ್ಟು ಮಾಡಿಕೊಂಡಿದ್ದರು. ‘ಭಲೇ ಚತುರ’ ಸಿನಿಮಾದ ಸಾಹಸ ದೃಶ್ಯದ ವೇಳೆ ಅವರ ದೇಹಕ್ಕೆ ಸಾಕಷ್ಟು ಹಾನಿ ಆಗಿತ್ತು. ‘ಪುಟ್ನಂಜ’ ಸಿನಿಮಾ ಶೂಟ್ ವೇಳೆ ಬೈಕ್ನಿಂದ ಬಿದ್ದು ಅವರ ಮುಖ ಹಾಗೂ ಕಾಲಿಗೆ ಪೆಟ್ಟಾಗಿತ್ತು.
ಅವರ ಪುತ್ರ ವಿಹಾನ್ ಪ್ರಜ್ವಲ್ ದೇವರಾಜ್ ಅವರ ʼಮಾಫಿಯಾʼ ಸಿನಿಮಾದಲ್ಲಿ ಅವರು ನಟಿಸಿದ್ದರು. ಮತ್ತೊಬ್ಬ ಪುತ್ರ ಅಮಿತ್ ಕೂಡ ಸಾಹಸ ನಿರ್ದಶನದ ಹಾದಿಯಲ್ಲಿ ನಡೆಯುತ್ತಿದ್ದಾರೆ. ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನದ ಜೊತೆಗೆ ಒಳ್ಳೆಯ ಗಾಯಕರಾಗಿಯೂ ಗುರುತಿಸಿಕೊಂಡಿದ್ದರು. ಅವರದೇ ಆರ್ಕೇಸ್ಟ್ರಾ ತಂಡವನ್ನು ಕಟ್ಟಿಕೊಂಡಿದ್ದರು.
ಒಂದು ಕಾಲದಲ್ಲಿ ಜಾಲಿ ಬಾಸ್ಟಿನ್ ಅರವು ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಸಾಹಸ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು.
ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.